ಕಾಲಿನ್ಸ್ ಏರೋಸ್ಪೇಸ್ ಪರೀಕ್ಷಾ ಕೇಂದ್ರಕ್ಕೆ ಸಚಿವ ಎಂ ಬಿ ಪಾಟೀಲ, ಪ್ರಿಯಾಂಕ್ ಖರ್ಗೆ ಚಾಲನೆ
by-ಕೆಂಧೂಳಿ
ಬೆಂಗಳೂರು,ಮಾ,05- ವೈಮಾಂತರಿಕ್ಷ ಮತ್ತು ರಕ್ಷಣಾ ವಲಯಕ್ಕೆ ಬೇಕಾಗುವ ಸಾಧನಗಳ ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕಾಲಿನ್ಸ್ ಏರೋಸ್ಪೇಸ್ ಎಂಜಿನಿಯರಿಂಗ್ ಕಂಪನಿಯು ಯಲಹಂಕ ಸಮೀಪದ ವೆಂಕಟಾಲ ಗ್ರಾಮದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಪರೀಕ್ಷಾ ಕೇಂದ್ರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಲಿನ್ಸ್ ಏರೋಸ್ಪೇಸ್ ಕಂಪನಿಯು `ಪವರ್ಡ್ ಬೈ ಕಾಲಿನ್ಸ್’ ತರಹದ ಉಪಕ್ರಮಗಳ ಮೂಲಕ ನಮ್ಮಲ್ಲಿನ ಸಣ್ಣ ಮತ್ತು ಮಧ್ಯಮ ಸ್ತರದ ಉದ್ಯಮಗಳೊಂದಿಗೆ ಸಹಭಾಗಿತ್ವಕ್ಕೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ನಾವೀನ್ಯತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಸ್ಥಳೀಯವಾಗಿ ಉತ್ತೇಜನ ಸಿಗಲಿದೆ. ವಿಮಾನಗಳ ಕುರ್ಚಿ, ವಿಂಡ್ ಶೀಲ್ಡ್ ಸೇರಿದಂತೆ ಹಲವು ಬಿಡಿಭಾಗಗಳನ್ನು ಇಲ್ಲಿ ನಾನಾ ಪರೀಕ್ಷೆಗಳಿಗೆ ಒಳಪಡಿಸಿ, ನಂತರ ಬಳಕೆಗೆ ಅನುಮತಿ ಕೊಡಲಾಗುವುದು’ ಎಂದಿದ್ದಾರೆ.
ನೂತನ ಕೇಂದ್ರದಲ್ಲಿ ಆಧುನಿಕ ವಿಮಾನಗಳ ಪರೀಕ್ಷೆ, ಪ್ರಮಾಣೀಕರಣ ಮತ್ತು ಸೇರ್ಪಡೆ ಮುಂತಾದ ಪ್ರಕ್ರಿಯೆಗಳು ನಡೆಯಲಿವೆ. ಹೀಗಾಗಿ, ಈ ಪರೀಕ್ಷಾ ಕೇಂದ್ರವು ಏರೋಸ್ಪೇಸ್ ವಲಯದಲ್ಲಿನ ಜಾಗತಿಕ ಪೂರೈಕೆ ಸರಪಳಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಭಾರತದ ವೈಮಾಂತರಿಕ್ಷ ವಲಯವು ಪರಿವರ್ತನೆಯ ಹಾದಿಯಲ್ಲಿದ್ದು, 2033ರ ಹೊತ್ತಿಗೆ ಈ ಕ್ಷೇತ್ರದಲ್ಲಿ ವರ್ಷಕ್ಕೆ 54 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ವಹಿವಾಟು ನಡೆಯಲಿದೆ. ಈ ಕೇಂದ್ರವನ್ನು ಆರಂಭಿಸುವ ಮೂಲಕ ಕಾಲಿನ್ಸ್ ಏರೋಸ್ಪೇಸ್, `ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಶಕ್ತಿ ತುಂಬಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕವು ಪ್ರತ್ಯೇಕ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯನ್ನು ಹೊಂದಿರುವ ಮೊಟ್ಟಮೊದಲ ರಾಜ್ಯವಾಗಿದೆ. ಈ ವಲಯಕ್ಕೆ 45 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸುವ ಮತ್ತು 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಇಟ್ಟುಕೊಳ್ಳಲಾಗಿದೆ. ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ರಫ್ತು ವಹಿವಾಟಿಗೆ ರಾಜ್ಯವು ಶೇ.70ರಷ್ಟು ಕೊಡುಗೆ ರಾಜ್ಯದಿಂದ ಹೋಗುತ್ತಿದೆ. ಈ ವಲಯದಲ್ಲಿ 2 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಕ್ರಿಯವಾಗಿವೆ ಎಂದು ಪಾಟೀಲ ವಿವರಿಸಿದ್ದಾರೆ.
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, `ಕರ್ನಾಟಕವು ಪ್ರತಿಭಾವಂತ ಮಾನವ ಸಂಪನ್ಮೂಲವನ್ನು ಹೊಂದಿದೆ. ಆದ್ದರಿಂದ ಕಾಲಿನ್ಸ್ ಏರೋಸ್ಪೇಸ್ ಕಂಪನಿಯು ನಮ್ಮ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕೊಡುವ ವ್ಯವಸ್ಥೆ ಮಾಡಬೇಕು. ಇದಕ್ಕೆ ಸರಕಾರದ ಕಡೆಯಿಂದ ಎಲ್ಲ ನೆರವು ನೀಡಲಾಗುವುದು. ಇದರಿಂದಾಗಿ ಮಾನವ ಸಂಪನ್ಮೂಲವನ್ನು ಸನ್ನದ್ಧ ಸ್ಥಿತಿಯಲ್ಲಿ ಸಿಕ್ಕಿ, ಮಾರುಕಟ್ಟೆ ಸೃಷ್ಟಿಯೂ ಸುಲಭವಾಗಲಿದೆ’ ಎಂದರು.
ರಾಜ್ಯದಲ್ಲಿ ಈಗಾಗಲೇ ಎನ್.ಡಿ.ಟಿ ಪರೀಕ್ಷಾ ಸೌಲಭ್ಯವಿದ್ದು, ಬೆಂಗಳೂರಿನಲ್ಲಿ ಅತ್ಯುತ್ತಮ ಪ್ರಯೋಗಾಲಯಗಳನ್ನು ಹೊಂದಿದೆ. ಟ್ರಿನಿಟಿ ಎನ್.ಡಿ.ಟಿ ಪ್ರಯೋಗಾಲಯದಲ್ಲಿ ರೇಡಿಯೋಗ್ರಫಿ, ಅಲ್ಟ್ರಾಸೋನಿಕ್ ಮತ್ತು ಎಡ್ಡಿ ಕರೆಂಟ್ ಟೆಸ್ಟಿಂಗ್ ಅನುಕೂಲಗಳಿವೆ. ಪಲ್ಲಕ್ಕಿ ಎನ್.ಡಿ.ಟಿ ಉತ್ಕೃಷ್ಟತಾ ಕೇಂದ್ರದಲ್ಲೂ ಜಾಗತಿಕ ಮಟ್ಟದ ಸೌಲಭ್ಯಗಳಿವೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವರಿಬ್ಬರೂ ಕಾಲಿನ್ಸ್ ವಿಮಾನ ಯಂತ್ರ ಮತ್ತು ಬಿಡಿಭಾಗಗಳ ಪ್ರದರ್ಶನವನ್ನು ವೀಕ್ಷಿಸಿ, ಅವುಗಳ ಮಾಹಿತಿ, ವೈಶಿಷ್ಟ್ಯ ಮತ್ತು ಸ್ವಾರಸ್ಯಗಳ ಬಗ್ಗೆ ತಿಳಿದುಕೊಂಡರು.
ಕಾರ್ಯಕ್ರಮದಲ್ಲಿ ಕಾಲಿನ್ಸ್ ಏರೋಸ್ಪೇಸ್ ಎಂಜಿನಿಯರಿಂಗ್ ಹಿರಿಯ ಉಪಾಧ್ಯಕ್ಷ ಕ್ಲೇ ಲಿಂಡ್ವಾಲ್, ಉಪಾಧ್ಯಕ್ಷ ಸ್ಟೀಫನ್ ಡಿಯಾನ್, ಬೆಂಗಳೂರು ಕಚೇರಿಯ ಉಪಾಧ್ಯಕ್ಷ ಸವ್ಯಸಾಚಿ ಶ್ರೀನಿವಾಸ ಉಪಸ್ಥಿತರಿದ್ದರು.