ಮತ್ತೆ ಮೈದುಂಬಿಕೊಂಡಿದೆ ಮಾಗೋಡು ಜಲಪಾತ
ಚಿತ್ರಲೇಖನ – ಹ.ಸ.ಬ್ಯಾಕೋಡ
ಮಳೆಗಾಲ ಆರಂಭವಾಯಿತೆಂದರೆ ಸಾಕು ಕರಾವಳಿಯಲ್ಲಿ ಜಲಪಾತಗಳ ಅಬ್ಬರ ಆರಂಭವಾಗುತ್ತದೆ. ಮಲೆನಾಡಿನ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಉತ್ತರ ಮತ್ತು ದಕ್ಷಿಣ ಕರಾವಳಿಯ ಘಟ್ಟದ ಮೇಲಿನ ಕೆಲ ಜಲಪಾತಗಳು ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತವೆ. ಅದೇ ಜಲಪಾತಗಳು ಸುಡುಬಿಸಿಲಿನ ಬೇಸಿಗೆಯಲ್ಲಿ ನೀರಿಲ್ಲದೆ ಒಣಗಿ ಜಲಪಾತಗಳ ಜಾಗದಲ್ಲಿ ಕೇವಲ ಬಂಡೆಗಲ್ಲು ಗೋಚರಿಸುತ್ತಿರುತ್ತವೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಘಟ್ಟದ ಪ್ರದೇಶ ಯಲ್ಲಾಪುರ ಸಮೀಪದ ಮಾಗೋಡು ಜಲಪಾತ ಮಾತ್ರ ಎಲ್ಲ ಜಲಪಾತಗಳಿಗಿಂತ ವಿಭಿನ್ನ. ಬೇಸಿಗೆಯಲ್ಲಿಯೂ ಸಹ ಸಂಪೂರ್ಣವಾಗಿ ಬತ್ತದೆ ತನ್ನ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಂಡಿರುತ್ತದೆ. ಇನ್ನೂ ಮಳೆಗಾಲ ಆರಂಭವಾದರೆ ಸಾಕು ಅದರ ಸೊಬಗು ನಿಜಕ್ಕೂ ವರ್ಣಿಸಲಸಾಧ್ಯ.
ಬೇಸಿಗೆ ಕಳೆದು ಮೊದಲ ಮಳೆ ಸುರಿಯುತ್ತಿದ್ದಂತೆ ಜಲಪಾತದ ಆಸುಪಾಸಿನ ಗಿಡ, ಮರ, ಬಳ್ಳಿಗಳು ಮತ್ತೆ ಹಸಿರನ್ನು ಮೆದ್ದುಕೊಂಡು ನಿಲ್ಲುತ್ತವೆ. ಹಾಗೆಯೇ ಜಲಪಾತವೂ ತನ್ನ ಒಡಲಾಳದಲ್ಲಿ ಮೊದಲು ಕೆಂಬಣ್ಣದ ನೀರನ್ನು ತುಂಬಿಕೊಂಡು ಚೆಲ್ಲುವ ದೃಶ್ಯ ಎಂಥವರನ್ನು ಮೋಡಿ ಮಾಡದೆ ಇರುವುದಿಲ್ಲ.
ಈ ಜಲಪಾತ ಮಳೆಗಾಲಕ್ಕೆ ಮೈದುಂಬಿಕೊಂಡರೆ ಸಾಕು ಘಟ್ಟದ ಕೆಳಗಿನ ಅಂಕೋಲಾ ಸಮೀಪದ ಗಂಗಾವಳಿ ನದಿ ತುಂಬಿ ಹರಿಯುತ್ತದೆ. ಕಾರಣ ಬೇಡ್ತಿ ನದಿಯೆಂತಲೂ ಕರೆಯುವ ಗಂಗಾವಳಿ ನದಿಯ ಉಗಮಸ್ಥಾನವ ಮಾಗೋಡ ಆಗಿದೆ. ಹಸಿರು ಬೆಟ್ಟಗಳ ಮಧ್ಯದಲ್ಲಿ ಸಣ್ಣ್ಲ ಉಕ್ಕಿ ಹರಿಯುವ ಜಲಧಾರೆ ಕ್ರಮೇಣ ವಿಶಾಲವಾಗಿ ಭೋರ್ಗರೆಯುತ್ತ ಸುಮಾರು ೨೦೦ ಮೀಟರ್ಗಳಿಗೂ ಹೆಚ್ಚು ಎತ್ತರದಿಂದ ಧುಮುಕುವುದು. ಆ ದೃಶ್ಯವೂ ನೋಡಗರನ್ನ ಮಂತ್ರಮುಗ್ಧರನ್ನಾಗಿಸುತ್ತದೆ.
ಈ ಜಲಪಾತವನ್ನು ನೋಡಲು ಹಾಗೂ ಛಾಯಾಗ್ರಹಣಕ್ಕೆಂದು ಹದಿನಾರು ವರ್ಷಗಳ ಹಿಂದೊಮ್ಮೆ ಗೆಳೆಯರ ಜೊತೆಗೆ ಹೋಗಿ, ಜಲಪಾತದ ಸೊಬಗನ್ನು ರೋಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದೆ. ಆ ವೇಳೆ ಜಲಪಾತ ವೀಕ್ಷಣಾ ಗೋಪುರದ ಬಳಿ ಬಾಗಿದ್ದ ಮರವೊಂದು ಜಲಪಾತಕ್ಕೆ ತೋರಣ ಕಟ್ಟಿದಂತ್ತಿತ್ತು. ಇತ್ತೀಚೆಗಷ್ಟೇ ಮತ್ತೆ ಮಾಗೋಡು ಜಲಪಾತದ ಎದುರು ವೀಕ್ಷಣಾ ಗೋಪುರದ ಬಳಿ ಹೋಗಿ ನಿಂತಾಗ ಆ ಹಸಿರು ಮರ ಕಾಣಿಸಲಿಲ್ಲ. ಮಳೆ ಗಾಳಿಗೆ ಯಾವತ್ತೋ ಮುರಿದು ಬಿದ್ದು ಹೋಗಿರಬೇಕು, ಅದು ಇದ್ದ ಕುರೂಹು ಇರಲಿಲ್ಲ. ಬದಲಾಗಿ ಅಲ್ಲಿ ಕಸದ ರಾಶಿ ತುಂಬಿಕೊಂಡ ಸಿಮೆಂಟ್ ತೊಟ್ಟಿ ಮಾತ್ರ ಇತ್ತು.
ಆದರೆ ಆಗಿನಿಂದಲೂ ಬಾನೆತ್ತರಕ್ಕೆ ಚಾಚಿಕೊಂಡ ಹಳೆಯ ಒಂದಿಷ್ಟು ಮರಗಳು ಮಳೆಗೆ ನೆಂದು ಹಸಿಹಸಿಯಾಗಿದ್ದವು. ಅವುಗಳ ಬುಡದಲ್ಲಿ ನಿಂತು ಕೊರಳಲ್ಲಿದ್ದ ಡಿಜಿಟಲ್ ಕ್ಯಾಮರಾದ ಗುಂಡಿ ಒತ್ತಿದಾಗ ಕೊಂಚ ವಿಭಿನ್ನವಾಗಿಯೇ ಜಲಪಾತ ಸೆರೆಯಾಯಿತು. ಜಲಪಾತದ ಜಲಧಾರೆ ಮೇಲಿಂದ ಬಿದ್ದಾಗ ಎದ್ದೇಳುತ್ತಿದ್ದ ನೊರೆ, ಸಣ್ಣಗೆ ತೇಲಿಕೊಂಡು ಹೋಗುತ್ತಿದ್ದ ಬಿಳಿ ಮೋಡಗಳು ಜೊತೆಗಿದ್ದವರೆಲ್ಲರನ್ನೂ ಮಂತ್ರಮುಗ್ಧರನ್ನಾಸಿತು.
ಇಂತಹ ಜಲಧಾರೆಯ ವೈಭವವನ್ನು ಪ್ರತಿಯೊಬ್ಬರೂ ನೋಡಲೇಬೇಕು. ಸದ್ಯ ಧೋ ಎಂದು ಸುರಿಯುವ ಮಳೆಯ ನಡುವೆ ಜಲಪಾತದ ಬಳಿಗೆ ಹೋಗಿ ಕೆಲ ಕ್ಷಣಕಾಲ ನಿಲ್ಲಬೇಕು. ಅಲ್ಲಿನ ಪರಿಸರದ ಸೊಬಗನ್ನು ಅನುಭವಿಸಲೇಬೇಕು. ಆಗಲೇ ಮನದಟ್ಟಾಗುತ್ತದೆ ನಿಜಕ್ಕೂ ಸ್ವರ್ಗ ಎಂದರೆ ಏನು ಎನ್ನುವುದು!.
ಮಳೆಗಾಲದ ಆರಂಭದ ಕೆಲ ದಿನಗಳ ಕಾಲ ಜಲಪಾತದಲ್ಲಿ ಕೆಂಬಣ್ಣದ ನೀರು ಧಬಧಬನೆ ಧುಮುಕುತ್ತಿರುತ್ತದೆ. ಹಾಲಿನ ನೊರೆಯಂತೆ ಕಾಣುವ ಮಾಗೋಡು ಜಲಪಾತವನ್ನು ನೋಡಬೇಕೆಂದರೆ ಅಗಸ್ಟ್ ತಿಂಗಳಿಂದ ನವೆಂಬರ್ ಅಂತ್ಯದೊಳಗೆ ಹೋಗಬೇಕು. ಸಾಮಾನ್ಯವಾಗಿ ಎಂದೂ ಬತ್ತದ ಈ ಜಲಪಾತವನ್ನು ಫೆಬ್ರುವರಿ ತಿಂಗಳ ಅಂತ್ಯದವರೆಗೂ ಹೋಗಿ ಕಣ್ತುಂಬಿಕೊಳ್ಳಬಹುದು.
ರಾಜಧಾನಿ ಬೆಂಗಳೂರು ನಗರದಿಂದ ಈ ಮಾಗೋಡು ಜಲಪಾತವೂ ಬರೋಬರಿ ೪೫೫ ಕಿ.ಮೀ. ದೂರದಲ್ಲಿದೆ. ಹುಬ್ಬಳ್ಳಿಯಿಂದ ೭೦ ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಹೋಗುವ ಪ್ರವಾಸಿಗರು ತುಮಕೂರು, ಹಿರಿಯೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ ಮಾರ್ಗವಾಗಿ ಯಲ್ಲಾಪುರ ತಲುಪಿ ಅಲ್ಲಿಂದ ಅಂಕೋಲಾ ? ಕಾರವಾರ ಮಾರ್ಗದಲ್ಲಿ ಮೂರು ಕಿ.ಮೀ. ಕ್ರಮಿಸಿದ ಬಳಿಕ ಎಡಕ್ಕೆ ತಿರುಗಿ ೧೭ ಕಿ.ಮೀ ಕ್ರಮಿಸಿದರೆ ಮಾಗೋಡ ಜಲಪಾತದ ದರ್ಶನವಾಗುತ್ತದೆ.
ಯಲ್ಲಾಪುರದಿಂದ ಮಾಗೋಡು ಜಲಪಾತಕ್ಕೆ ಹೋಗುವ ಮಾರ್ಗಮಧ್ಯೆ ಎಡಭಾಗದಲ್ಲಿ ಪುಟ್ಟ ಕೆರೆಯೊಂದಿದೆ. ಆ ಕೆರೆಯ ದಂಡೆಯಲ್ಲಿ ಕುಳಿತುಕೊಳ್ಳುವುದೇ ಒಂದು ತೆರನಾದ ಖುಷಿ. ತಟಸ್ಥವಾದ ಈ ಕೆರೆಯನ್ನು ಕವಡಿಕೆರೆ ಎಂದು ಕರೆಯುತ್ತಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಸಾವಿರಾರು ಬಣ್ಣದ ಹಕ್ಕಿಗಳು ವಲಸೆ ಬರುತ್ತವೆ. ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿಕೊಂಡು ಡಿಸೆಂಬರ್ ಕೊನೆಯವರೆಗೂ ಹಾಯಾಗಿರುತ್ತವೆ. ಹಾಗಾಗಿ ಪ್ರವಾಸಿಗಳು ಮಾಗೋಡ ಜಲಪಾತಕ್ಕೆ ಹೋಗುವ ಮುನ್ನ ಅಥವಾ ಜಲಪಾತವನ್ನು ನೋಡಿಕೊಂಡು ಮರಳುವಾಗ ಕವಡಿಕೆರೆಗೊಮ್ಮೆ ಭೇಟಿ ನೀಡುವುದು ಒಳಿತು. ಬಣ್ಣ ಬಣ್ಣದ ಬಾನಾಡಿಗಳನ್ನು ಕಣ್ತುಂಬಿಕೊಳ್ಳಬಹುದು.