ಬಸವಣ್ಣ೧೨ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ. ಇವರ ವ್ಯಕ್ತಿತ್ವ ಬಹುಮುಖವಾದುದಾದರೂ ಇವರನ್ನು ಕುರಿತು ಅನೇಕ ವ್ಯಕ್ತಿತ್ಚ ರಚಿತವಾಗಿದ್ದರೂ ಅವುಗಳಲ್ಲಿ ಯಾವುದರಲ್ಲೂ ಇವರ ವ್ಯಕ್ತಿತ್ವದ ಸಮಗ್ರ ಯಥಾವತ್ತಾದ ಚಿತ್ರಣ ಮೂಡಿ ಬಂದಿಲ್ಲ. ಅವೆಲ್ಲ ಪವಾಡಗಳಲ್ಲಿ ಹುದುಗಿ ಹೋಗಿವೆ. ಆದರೆ ೧೪೦೦ಕ್ಕೂ ಹೆಚ್ಚು ಸಂಖ್ಯೆಯಲ್ಲಿ ದೊರೆತಿರುವ ಇವರ ವಚನಗಳಿಂದ ಹಾಗೂ ಪುರಾಣಗಳಲ್ಲಿ ಸೂಚಿತವಾಗಿರುವ ಘಟನೆಗಳಿಂದ ಚಾರಿತ್ರಿಕ ಅಂಶಗಳನ್ನು ಹೆಕ್ಕಿ ತೆಗೆದು ಇವರ ಜೀವನಚಿತ್ರ & ಸಾಧನೆಗಳನ್ನೂ ಕಾಣಬೇಕಾಗಿದೆ.
ಬಸವಣ್ಣನವರ ಬದುಕನ್ನು ವಿವಿಧ ಪುರಾಣಗಳ ನೆರವಿನಿಂದ ಹೀಗೆ ಪುನಾರಚಿಸಬಹುದು. ಕಾಲ ಸುಮಾರು 12 ನೇ ಶತಮಾನ(1134). ಹುಟ್ಟಿದ್ದು ಬಾಗೇವಾಡಿಯಲ್ಲಿ (ಇಂಗಳೇಶ್ವರ ಅಂತಲೂ ಕೆಲವರ ಊಹೆ).ಈಗ ಅದು ಬಿಜಾಪುರ ಜಿಲ್ಲೆಯಲ್ಲಿ ತಾಲ್ಲೂಕಿನ ಮುಖ್ಯ ಸ್ಥಳವಾಗಿದೆ. ಹಿಂದೆ ಸುಪ್ರಸಿದ್ಧ ಅಗ್ರಹಾರವಾಗಿತ್ತು. ತಂದೆ ಅದರ ಅಧಿಪತಿ -ಮಾದರಸ(ಮಾದಿರಾಜ). ತಾಯಿ- ಮಾದಲಾಂಬೆ. ದೇವರಾಜ -ಅಣ್ಣ,.ನಾಗಮ್ಮ -ಅಕ್ಕ. .ಬಾಗೇವಾಡಿಯ ಪ್ರಸಿದ್ಧ ದೈವ- ಬಸವೇಶ್ವರನ ಅನುಗ್ರಹದಿಂದ ನಂದೀ ವ್ರತದ ಫಲವಾಗಿ ಇವರು ಜನಿಸಿದರು ಎನ್ನಲಾಗಿದೆ. ಬಾಲ್ಯದಿಂದಲೇ ಇವರು ವಯಸ್ಸಿಗೆ ಮೀರಿದ ಕುತೂಹಲ ಜಾಣ್ಮೆ ಜಾಗೃತಿಗಳನ್ನು ವ್ಯಕ್ತಪಡಿಸತೊಡಗಿದರು. ಎಂಟರ ಪ್ರಾಯದಲ್ಲೆ ಸಾಮಾಜಿಕ ಧಾರ್ಮಿಕ ವಿಚಾರಗಳನ್ನು ಒರೆ ಹಚ್ಚುವ ಪ್ರೌಢ ವಿಚಾರ ಸರಣಿ ಇವರಲ್ಲಿ ಗೋಚರವಾಯಿತು. ಉಪನಯನವನ್ನು ಒಪ್ಪದೆ ತಿರಸ್ಕರಿಸಿ ನಡೆದರೆಂದು ಕೆಲವು ಪುರಾಣಕರ್ತೃಗಳು ಹೇಳಿದರೆ, ಉಪನಯನವಾದ ಕೆಲವು ಕಾಲಾನಂತರ ಯಜ್ಞೋಪವೀತವನ್ನು ಕಿತ್ತು ಹಾಕಿದರೆಂದು ಹರಿಹರ ಕವಿ ಹೇಳುತ್ತಾನೆ. ಅದೇನೇ ಇರಲಿ, ವೈದಿಕ ಧರ್ಮದ ಚತುರ್ವರ್ಣಗಳ ವಿಭಜನೆಯನ್ನೂ ಅದರಿಂದ ಸಮಾಜದಲ್ಲಿ ಉಂಟಾದ ಮೇಲು ಕೀಳುಗಳನ್ನೂ ಇವರು ಒಪ್ಪಿಕೊಳ್ಳಲಾರದೇ ಹೋದರೆಂಬುದಂತೂ ಸತ್ಯ.. ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸುವುದಕ್ಕಾಗಿ ಯಜ್ಞೋಪವೀತವನ್ನು ಕಿತ್ತು ಹಾಕಿದ್ದರಿಂದ ಬಹಿಷ್ಕೃತರಾಗಿ ಹುಟ್ಟೂರನ್ನು ಬಿಟ್ಟು ಅಕ್ಕ -ನಾಗಮ್ಮನೊಡನೆ ಸಂಗಮ ಕ್ಷೇತ್ರಕ್ಕೆ ಹೋದರು. ಈ ವೇಳೆಗೆ ಆಕೆಗೆ ಮದುವೆಯಾಗಿದ್ದು ಅವಳ ಪತಿ -ಶಿವಸ್ವಾಮಿ ಬಹುಶಃ ಸಂಗಮದವನೇ ಆಗಿದ್ದಂತೆ ತೋರುತ್ತದೆ. ಆ ಕಾಲದಲ್ಲಿ ಸಂಗಮ ಕ್ಷೇತ್ರ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ಅದರ ಸ್ಥಾನಪತಿಗಳಾದ ಜಾತವೇದ ಮುನಿ ಅಥವಾ ಈಶಾನ್ಯ ಗುರುಗಳು ಸಂಗಮೇಶ್ವರ ಸ್ವಾಮಿಗಳೆಂದು ಪ್ರಸಿದ್ಧರಾಗಿದ್ದರು. ಅವರ ಸಮ್ಮುಖದಲ್ಲಿ ದೀಕ್ಷಾ ವಿಧಿಯೊಡನೆ ಇವರ ವಿದ್ಯಾಭ್ಯಾಸ ಹನ್ನೆರಡು ವರ್ಷ ನಡೆಯಿತು. ಕೃಷ್ಣಾ ಮಲಪ್ರಭಾ ನದಿಗಳ ಸಂಗಮದ ಆ ಸುಂದರ ಪರಿಸರದಲ್ಲಿ, ಹೃದಯದ ಭಾವನೆಗಳಿಗೆ ಅನುಭವದ ಶ್ರೀಮಂತಿಕೆ ಒಪ್ಪವೀಯಿತು. ಹರಿತವಾದ ಬುದ್ಧಿಗೆ ಸಾಣೆ ಹಿಡಿದಂತಾಯಿತು. ಕಳಚೂರ್ಯ ಬಿಜ್ಜಳನ ಬಳಿ ದಂಡ ಧೀಶನಾಗಿದ್ದ ಇವರ ಸೋದರಮಾವ-ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಇವರಿಗೆ ಮದುವೆ ಮಾಡಿಕೊಡಲು ಮುಂದೆ ಬಂದರು. ಗುರುಗಳೇ ನಿಂತು ಈ ಮದುವೆ ಮಾಡಿಸಿ ಮಾಡಿಕೊಡಲು ಮುಂದೆ ಬಂದರು. ಗುರುಗಳೇ ನಿಂತು ಈ ಮದುವೆ ಮಾಡಿಸಿ ನೂತನ ದಂಪತಿಗಳನ್ನು ಸಂಗಮದಿಂದ ಮಂಗಳವಾಡಿಗೆ ಹೋಗ ಹೇಳಿದರು. ಇವರ ಜೊತೆ ಶಿವಸ್ವಾಮಿ ನಾಗಮ್ಮರೂ ಹೊರಟರು. ಮಂಗಳವಾಡಕ್ಕೆ ಬಂದ ಮೇಲೆ ಬಸವಣ್ಣ ಗಂಗಾಂಬಿಕೆಯ ಜೊತೆಗೆ ನೀಲಲೋಚನೆ (ನೀಲಾಂಬಿಕೆ)ಯನ್ನೂ ಮದುವೆಯಾಗಬೇಕಾಯಿತು. ನೀಲಾಂಬಿಕೆ ಬಿಜ್ಜಳನ ಇನ್ನೊಬ್ಬ ದಂಡನಾಯಕ ಸಿದ್ಧರಸನ ಮಗಳು. ಚಿಕ್ಕಂದಿನಲ್ಲಿಯೇ ತಂದೆತಾಯಿಗಳನ್ನು ಕಳೆದುಕೊಂಡು ಬಿಜ್ಜಳನ ಆಶ್ರಯದಲ್ಲಿ ಆತನ ಸಾಕು ತಂಗಿಯಾಗಿ ಬೆಳೆದವಳು. ಬಿಜ್ಜಳನ ಭಂಡಾರದಲ್ಲಿ ಬಸವಣ್ಣನವರಿಗೆ ಒಂದು ಕೆಲಸವೂ ದೊರೆಯಿತು. ದುಡಿಯದೆ ತಿನ್ನುವ ಹಕ್ಕಿಲ್ಲವೆಂಬುದನ್ನು ನಿಶ್ಚಿತವಾಗಿ ನಂಬಿದ್ದ ಇವರು ರಾಜಾಸ್ಥಾನದಲ್ಲಿ ಕೆಲಸವನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಲಿಲ್ಲ. ಮುಂದೆ ಸ್ವಲ್ಪಕಾಲದಲ್ಲಿಯೆ ರಾಜ್ಯ ಭಂಡಾರದ ಮಂತ್ರಿಯಾದ ಬಲದೇವರು ದೈವಾಧೀನರಾಗಲು ಅವರ ಸ್ಥಾನಕ್ಕೆ ಬಸವಣ್ಣನವರನ್ನೇ ನೇಮಕ ಮಾಡಲಾಯಿತು. ರಾಜ್ಯದ ಭಂಡಾರಿಯಾದ ಬಸವಣ್ಣ ಕ್ರಮೇಣ ಅಂತರಂಗದ ಸಾಧನೆಯಿಂದಾಗಿ ಭಕ್ತಿ ಭಂಡಾರಿಯೂ ಆದರು. ಅಲ್ಲದೆ ತನ್ನ ಆಧ್ಯಾತ್ಮಿಕ ದೃಷ್ಟಿಯ ಕ್ರಾಂತಿಕರಕ ಭಾವನೆಗಳಿಗೆ ಅನುಸಾರ ಸಾಮಾಜಿಕ ಕ್ರಾಂತಿಗೂ ಕೈ ಹಾಕಿದರು. ಬಹುಶಃ ಬಸವಣ್ಣನವರು ಮಂಗಳವಾಡಕ್ಕೆ ಬಂದ ಒಂದೆರಡು ವರ್ಷಗಳಲ್ಲಿಯೆ ಅಂದಿನ ರಾಜಕೀಯದಲ್ಲಿ ಬದಲಾವಣೆ ತಲೆದೋರಿತು. ಚಾಲುಕ್ಯ ಅರಸು ದುರ್ಬಲನಾಗಿದ್ದುದರಿಂದ ಸಾಮಂತ ಬಿಜ್ಜಳ ತಾನೇ ಚಕ್ರವರ್ತಿಯಾಗಿ ಮಂಗಳವಾಡದಿಂದ ಕಲ್ಯಾಣಕ್ಕೆ ಬರಬೇಕಾಯಿತು. ಆಗ ಬಸವಣ್ಣನವರು ಇಡೀ ರಾಜ್ಯದ ಮಹಾಭಂಡಾರಿಯಾದರು. ಬಸವಣ್ಣನವರ ಅಧಿಕಾರ ಕ್ಷೇತ್ರವೂ ಧಾರ್ಮಿಕ ಕ್ಷೇತ್ರವೂ ವ್ಯಾಪಕಗೊಂಡವು. ಸುಮಾರು ೧೨ ವರ್ಷಗಳ ಕಾಲ ಕಲ್ಯಾಣ ಬಸವಣ್ಣನವರ ಕಾರ್ಯ ಕ್ಷೇತ್ರವಾಗಿತ್ತು. ಈ ಅಲ್ಪಾವಧಿಯಲ್ಲಿ ಇವರು ಸಾಧಿಸಿದ ಪರಿಣಾಮ, ಜನಜೀವನದ ಮೇಲೆ ಬೀರಿದ ಪ್ರಭಾವ ಅದ್ವಿತೀಯವಾದದು.ಬಸವಣ್ಣನವರು ಇಡೀ ಯುಗವನ್ನು ಎಚ್ಚರಿಸಿದ ಯುಗಪ್ರವರ್ತಕ ಶಕ್ತಿಯಾಗಿ ಪರಿಣಮಿಸಿದರು. ಚುಂಬಕ ಗಾಳಿಯಂತೆ ಅಸಂಖ್ಯಾತ ಸಾಧಕರನ್ನೂ ಶರಣರನ್ನೂ ಸೆಳೆದು ಅವರೆಲ್ಲರನ್ನೂ ಅನುಭವ ಮಂಟಪದಲ್ಲಿ ಸಮಾವೇಶಗೊಳಿಸಿ ಅವರ ವಿಚಾರಮಂಥನದಿಂದ ಧರ್ಮದ ನವನೀತವನ್ನು ತೆಗೆದರು. ಅಲ್ಲಮಪ್ರಭುವಿನಂಥ ಮಹಾಮೇರು ಸದೃಶ ವ್ಯಕ್ತಿತ್ತವೂ ಬಸವಶಕ್ತಿಗೆ ಮಣಿದು ಕಲ್ಯಾಣದಲ್ಲಿ ಕೆಲವು ಕಾಲ ಅನುಭವಮಂಟಪವನ್ನು ನಿರ್ದೇಶಿಸಿತು. ಬಸವಣ್ಣನವರ ಕ್ರಾಂತಿಕಾರಕ ಭಾವನೆಗಳು ವೈದಿಕ ಪರಂಪರೆಯನ್ನು ಕೆರಳಿಸಿದುವು. ಅವರನ್ನು ಪದಚ್ಯುತಗೊಳಿಸಲು ಆ ಪರಂಪರೆಯ ಅನುಯಾಯಿಗಳು ಹೊಂಚಿದರು. ಬಸವಣ್ಣನವರು ರಾಜ್ಯಭಂಡಾರದ ಹಣವನ್ನು ದುರ್ವಿನಿಯೋಗ ಮಾಡಿ ದಾಸೋಹ ನಡೆಸುತ್ತಿರುವನೆಂದು ದೂರಿ ಬಿಜ್ಜಳನಲ್ಲಿಗೆ ಇತರ ಅನೇಕ ಆರೋಪಗಳನ್ನು ಕೊಂಡೊಯ್ದರು. ಅವೆಲ್ಲವೂ ವ್ಯರ್ಥವಾದವು. ಆದರೆ ಅಸ್ಪೃಶ್ಯರ ಹರಳಯ್ಯನ ಮಗನಿಗೂ ಬ್ರಾಹ್ಮಣರ ಮಧುವರಸನ ಮಗಳಿಗೂ ವಿವಾಹ ಮಾಡಿದಾಗ ಅದನ್ನು ಅಂದಿನ ಸಮಾಜ ಅರಗಿಸಿಕೊಳ್ಳಲಾರದೆ ಹೋಯಿತು. ವರ್ಣಸಂಕರವಾಯಿತೆಂದು ಸಂಪ್ರದಾಯಸ್ಥರು ಹುಯಿಲೆಬ್ಬಿಸಿದರು. ಇದರೊಡನೆ ರಾಜಕೀಯ ಪಿತೂರಿಯೂ ಸೇರಿ ಹರಳಯ್ಯ ಮಧುವರಸರಿಗೆ ಬಿಜ್ಜಳ ಮರಣದಂಡನೆ ವಿಧಿಸುವಂತಾಯಿತು. ಅದಾದ ಸ್ವಲ್ಪ ಕಾಲದಲ್ಲಿಯೇ ಬಿಜ್ಜಳನ ಕೊಲೆಯೂ ಆಯಿತು. ಆ ಅಪರಾಧವನ್ನು ಶರಣರ ಮೇಲೆ ಹಾಕುವ ಕುಟಿಲ ರಾಜಕೀಯವೂ ನಡೆಯಿತು. ಈ ಬೆಳವಣಿಗೆಗಳಿಂದ ಬೇಸರಗೊಂಡು ಮೊದಲೇ ಕಲ್ಯಾಣವನ್ನು ಬಿಟ್ಟಿದ್ದ ಬಸವಣ್ಣನವರು ಕೂಡಲಸಂಗಮ ಕ್ಷೇತ್ರಕ್ಕೆ ಹೋಗಿ ಕೂಡಲ ಸಂಗಮನಲ್ಲಿ ಐಕ್ಯರಾದರು. ಇದು ಸುಮಾರು ೧೧೬೭-೬೮ರಲ್ಲಿ ಸಂಭವಿಸಿರಬೇಕೆಂದು ವಿದ್ವಾಂಸರು ನಿರ್ಧರಿಸಿದ್ದಾರೆ. ಇದು ಒಂದು ರೀತಿಯಲ್ಲಿ ವಿವಿಧ ಪುರಾಣಗಳು ಚಿತ್ರಿಸಿದಂತೆ ಪಾವನ ಎನಿಸಿರುವ ಬಸವಣ್ಣನವರ ಜೀವನ ಕಥೆಯ ರೂಪರೇಷೆ.
ಲೌಕಿಕದ ಅಧಿಕಾರದಲ್ಲಿದ್ದೂ ಆಂತರಿಕವಾಗಿ ಮಹಾ ಅನುಭಾವಿಯಾದುದು ಇವರ ಅಂತರಂಗದ ಕಥೆ. ಇವರ ವಚನಗಳಲ್ಲಿ ಅದರ ಉಜ್ವಲ ಚಿತ್ರ ಮೂಡಿದೆ. ತ್ರಿವಿಧ ದಾಸೋಹದಿಂದ ಷಟ್ ಸ್ಥಲದ ನಿಚ್ಚಣಿಕೆ ಏರಿ ಲಿಂಗಾಂಗ ಸಾಮರಸ್ಯದ ನಿಲವಿಗೇರಿದುದನ್ನು ಅಲ್ಲಿ ಕಾಣಬಹುದು. ಅಂತೆಯೇ ಇವರ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಧಾರೆಗಳು ಕಾಲದೇಶಗಳ ಹಂಗು ಹರಿದು ಸರ್ವತ್ರ ಮಾನ್ಯವಾಗಿ ನಿಲ್ಲಬಲ್ಲ ಅಸಾಧಾರಣತೆಯನ್ನೂ ಜೀವಂತಿಕೆಯನ್ನೂ ಪಡೆದಿವೆ. ಇಹಲೋಕದ ಜೀವನವನ್ನು ಸಾಧನೆಯ ಮಾರ್ಗಕ್ಕೆ ಅಳವಳಡಿಸಿಕೊಳ್ಳುವುದೇ ಬಸವಣ್ಣನವರು ಬೋಧಿಸಿದ ಮುಖ್ಯ ತತ್ತ್ವ. ಅದಕ್ಕೆ ಜಾತಿ, ಮತ, ಉದ್ಯೋಗ, ವಯಸ್ಸು ಯಾವುದೂ ಅಡ್ಡಿಯಾಗಬಾರದು. ಅಂಥ ನೈತಿಕ ಜೀವನವನ್ನೂ ಸಾಮಾಜಿಕ ಸಮತೆಯನ್ನೂ ಸಾಧಿಸುವ ಸಾಹಸ ಅವರದು. ಹರಳಯ್ಯ, ,ಮಾದಾರ ಧೂಳಯ್ಯ, , ಡೋಹರ ಕಕ್ಕಯ್ಯ, ,ಶಿವನಾಗಮಯ್ಯ ಮೊದಲಾದ ಅಸ್ಪಶ್ಯರು ಬಸವ ತತ್ತ್ವದ ಆಶ್ರಯ ಪಡೆದು ಶರಣರಾದರು., ಅನುಭಾವಿಗಳಾದರು, ವಚನಕಾರರಾದರು; ಬಸವಣ್ಣನವರ ಮಹದಾಶೆಯ ಸಾಕಾರ ಮೂರ್ತಿಗಳಾದರು. ತಮಗಿಂತ ಹಿಂದಿನಿಂದಲೂ ಪ್ರಚಲಿತವಿದ್ದ ವೀರಶೈವ ಮತವನ್ನು ಅನೇಕ ಪರಿಷ್ಕರಣೆಗಳೊಂದಿಗೆ ಇತರ ನೂರಾರು ವಚನಕಾರರ ಜೊತೆ ಸೇರಿ ಪ್ರಚಾರ ಮಾಡಿದವರು ಬಸವಣ್ಣನವರು. ಬಸವಣ್ಣನವರ ಕಾಯಕದ ಕಲ್ಪನೆ ಇದೆಲ್ಲವನ್ನೂ ಸಾಧಿಸುವ ಸಮಗ್ರ ಜೀವನ ದರ್ಶನವನ್ನು ಒಳಗೊಳ್ಳುತ್ತದೆ. ವ್ಯಕ್ತಿ ಕೈಗೊಂಡ ಉದ್ಯೋಗ ಸಮಾಜದ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು. ಅದರ ಫಲ ತನಗೆ ಮಾತ್ರವೇ ಅಲ್ಲದೆ ಸಮಾಜಕ್ಕೂ ದೊರೆಯಬೇಕು. ಆಗ ಸ್ವಾರ್ಥ ಅಳಿದು ವಿಶ್ವಶಕ್ತಿ ಅಂತರಂಗದೊಳಗೆ ಇಳಿದು ಬರಲು ಸಹಾಯಕವಾಗುತ್ತದೆ. ಈ ಕಾಯಕದಲ್ಲಿ ಮೇಲು ಕೀಳುಗಳಿಲ್ಲ. ಪ್ರತಿಯೊಬ್ಬನೂ ತನ್ನ ಉದ್ಯೋಗ ಮಾಡಲೇಬೇಕು. ಅಲ್ಲದೆ ಈ ಕಾಯಕ ತತ್ತ್ವದ ಇನ್ನೊಂದು ಅಂಶವೆಂದರೆ ವ್ಯಕ್ತಿ ಅಂದಂದಿನ ಕಾಯಕ ಅಂದಂದು ಮಾಡಿ ಶುದ್ಧನಾಗಬೇಕು. ಅಂದರೆ ತನಗೆ ಅಗತ್ಯವಾದುದಕ್ಕಿಂತ ಹೆಚ್ಚಾಗಿ ಶೇಖರಿಸಿಟ್ಟುಕೊಳ್ಳಬಾರದು. ಗಾಂಧೀಜಿ ಒತ್ತಿ ಹೇಳಿದ ಅಸಂಗ್ರಹ ತತ್ತ್ವ ಇಲ್ಲಿ ಕಂಡುಬರುತ್ತದೆ. ಇದು ಧಾರ್ಮಿಕ ಸಮತೆಗೂ ತಳಹದಿಯಾಗಿ ಸ್ತ್ರೀಪುರುಷರೆಂಬ ಭೇದವನ್ನು ಅಳಿಸಿ ಹಾಕಿತು. ಅಕ್ಕಮಹಾದೇವಿ, ಮಹಾದೇವಮ್ಮ, ಲಕ್ಕಮ್ಮ , ಲಿಂಗಮ್ಮ , ಗಂಗಾಬಿಕೆ, ನೀಲಾಂಬಿಕೆ ಈ ಮೊದಲಾದ ಅನೇಕ ಶರಣೆಯರು ಇದಕ್ಕೆ ಉಜ್ಜ್ವಲ ಸಾಕ್ಷಿಯಾಗಿದ್ದಾರೆ. ವ್ಯಕ್ತಿ ಸ್ವತಃ ಪೂಜಾ ಕೈಂಕರ್ಯ ಸಲ್ಲಿಸಬೇಕೆಂಬುದು ಇವರ ಧಾರ್ಮಿಕ ಆಚರಣೆಯ ಇನ್ನೊಂದು ಮುಖ್ಯ ಅಂಶ. ತನ್ನ ಉದ್ಧಾರವನ್ನು ತಾನೇ ಕಂಡುಕೊಳ್ಳಬೇಕು. ಒಬ್ಬನ ಪರವಾಗಿ ಇನ್ನೊಬ್ಬ ಪೂಜೆ ಸಲ್ಲಿಸುವುದು ಧಾರ್ಮಿಕ ಶೋಷಣೆಗೆ ಕಾರಣವಾಗುತ್ತದೆ ಎಂಬುದು ಅವರ ವಾದ.ಹಾಗೆಯೇ ಪ್ರಾಣಿವಧೆಗೆ ಕಾರಣವಾದ ಯಜ್ಞಯಾಗಾದಿಗಳನ್ನೂ ಕರ್ಮವಾದವನ್ನೂ ಅಂಧ ಶ್ರ ದ್ಧೆಯನ್ನೂ ಖಂಡಿಸಿದರು. ಒಟ್ಟಿನಲ್ಲಿ ಬಸವಣ್ಣನವರ ವೈಚಾರಿಕ ದೃಷ್ಟಿ ಬೌದ್ಧಿಕ ವಿಕಾಸಕ್ಕೆ ಧಾರ್ಮಿಕ ಸ್ವಾತಂತ್ಯ್ರಕ್ಕೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ತಳಹದಿಯಾಯಿತು. ಕನ್ನಡ ಭಾಷೆ ಇವರ ವಚನಗಳಿಂದ ಅಪೂರ್ವವಾದ ಒಂದು ಶಕ್ತಿಯನ್ನೂ , ಶ್ರೀಮಂತಿಕೆಯನ್ನೂ ಪಡೆಯಿತು. ಮಾತು ಮಾಣಿಕ್ಯದ ದೀಪ್ತಿಯಾಯಿತು., ನುಡಿದುದೇ ಧರ್ಮವಾಯಿತು. ಇವರ ವ್ಯಕ್ತಿತ್ವ ಕಾಲದೇಶಗಳ ಪರಿಮಿತಿಯನ್ನು ಮೀರಿ ಮಾನವ ಜನಾಂಗ ಬೆಳೆದಂತೆ ತಾನು ಬೆಳೆಯುವ ಯುಗಪ್ರ ವರ್ತಕ ಶಕ್ತಿಯಾಗಿ ಪರಿಣಮಿಸಿದೆ. ಬಸವಣ್ಣನವರ ಶಕ್ತಿಯ ಮೂಲ ಇವರ ಅಪಾರ ಭಕ್ತಿಭಾವ, ಕೂಡಲ ಸಂಗಮ ದೇವನಲ್ಲಿಯ ಅನನ್ಯ ಶರಣಭಾವ, ಜಂಗಮಸೇವೆಯೇ ಲಿಂಗಸೇವೆ ಎಂಬ ದಿವ್ಯಭಾವ. ಇವರು ಜ್ಞಾನವೈರಾಗ್ಯಗಳ ಮಹತ್ತ್ವವನ್ನು ಅಲ್ಲಗೆಳೆಯದಿದ್ದರೂ ಭಕ್ತಿಗೆ ಪ್ರಾಧಾನ್ಯ ನೀಡಿದರು. ಶಿವಾನುಭವ ಮಂಟಪ ಇದಕ್ಕೆ ಉಜ್ವಲ ನಿದರ್ಶನ. ಅದರ ಖ್ಯಾತಿಯನ್ನು ತಿಳಿದ ಎಷ್ಟೋ ಮಂದಿ ಶಿವಶರಣರು ನಾಡಿನ ಒಳಗಿನಿಂದಲ್ಲದೆ ನಾಡಿನ ಹೊರಗಿನಿಂದಲೂ ಅಲ್ಲಿ ಸೇರಿದರು. ಅದು ಆಚಾರ, ವಿಚಾರ ಎರಡಕ್ಕೂ ಕೇಂದ್ರಸ್ಥಾನವಾಯಿತು. ಚೆನ್ನಬಸವ, ವೈರಾಗ್ಯನಿಧಿ ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ ಮೊದಲಾದ ಜೀವಜ್ಯೋತಿಗಳು ಅಲ್ಲಿಕಂಗೊಳಿಸಿದರು. ಸಹಸ್ರಾರು ಶಿವಶರಣರು ವರ್ಣ ಭೇದವಿಲ್ಲದೆ ಮೇಲು ಕೀಳೆಂಬ ಭಾವನೆ ತಾಳದೆ ಸಮಾನತೆಯಿಂದ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದರು. “ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವೆರೆದು ಆಚಾರವೆಂಬ ಬತ್ತಿಗೆ ಬಸವನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತಾ ಶಿವನ ಪ್ರಕಾಶ. ಆ ಬೆಳಕಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯ ಶಿವಶರಣರು. ಬಸವಣ್ಣನವರ ಬೋಧೆ ಅವರ ನೂರಾರು ವಚನಗಳಲ್ಲಿ ವ್ಯಕ್ತವಾಗಿದೆ.ಸಾಮಾನ್ಯರಿಗೂ ಅರ್ಥವಾಗುವ ವಚನ ಸಾಹಿತ್ಯ ಪ್ರವಾಹ ಆ ಕಾಲದಲ್ಲಿ ತುಂಬಿ ಹರಿಯಿತು. ಈ ವಚನಗಳು ಜಿಜ್ಞಾಸುಗಳಿಗೆ ಮುಮುಕ್ಷುಗಳಿಗೆ ಮತ್ತು ಸಾಹಿತ್ಯೋಪಾಸಕರಿಗೆ ದಾರಿದೀಪಗಳಂತಿವೆ.
ನಡೆ ನುಡಿಗಳ ಸಾಮರಸ್ಯ ಸೂಚಿಸುವ ಈ ವಚನ ಕಾಲವನ್ನು ಮೆಟ್ಟಿನಿಲ್ಲುವಂಥದು.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗವೆಚ್ಚಿ ಅಹುದೆನಬೇಕು
ನುಡಿಯೊಳಗೆ ನಡೆಯದಿದ್ದರೆ ಕೂಡಲ ಸಂಗಮನೆಂತೊಲಿವನಯ್ಯ..
ಇವರು ಮಹಾನುಭಾವರ ಪಂಕ್ತಿಯಲ್ಲಿ ನಿಲ್ಲತಕ್ಕವರು. ಇವರ ಭಕ್ತಿ ಬತ್ತಲಾರದ ತೊರೆ. ಮಾನವನ ಶ್ರೇಯಸ್ಸಿಗೂ ಪ್ರೇಯಸ್ಸಿಗೂ ಮೇಲ್ಪಂಕ್ತಿಯಾಗಿ ನಿಂತ ಹಿರಿಯ ಚೇತನ ಇವರದು. ಬಸವಣ್ಣನವರ ಸುಮಾರು ೧೪೦೦ ವಚನಗಳು ಸಿಕ್ಕಿವೆ. ಇವರು ಕನ್ನಡ ಭಾಷೆಯನ್ನೂ ಉದ್ಧರಿಸಿದರು. ಒಂದು ಭಾಷೆಗೆ ಏನೆಲ್ಲ ಸಾಧ್ಯತೆಗಳಿರಬಹುದು ಎಂಬುದನ್ನು ತೋರಿಸಿದರು. ಕವಿ ಮನೋಭಾವದಿಂದ ಕೂಡಿದ ಇವರ ವಚನಗಳು ಉಪಮೆ ರೂಪಕಾಲಂಕಾರಗಳಿಂದ ಕೂಡಿ ಕಾವ್ಯ ಸೌಂದರ್ಯದಿಂದ ಕಂಗೊಳಿಸುತ್ತಿವೆ. ಇವರು ಷಟ್ ಸ್ಥಲ ವಚನ, ಕಾಲಜ್ಞಾನವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ. ಬೆಳಗಾಂ ಜಿಲ್ಲೆಯ ಅರ್ಜುನವಾಡದ ಶಿಲಾ ಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ.
(ಸಂಗ್ರಹ)