ಬೆಂಗಳೂರು,ಜು,೦೬: ಕರ್ನಾಟಕ ರಾಜ್ಯಪಾಲ ವಾಜುಭಾಯ್ ವಾಲಾ ಅವರ ಅವಧಿ ಮುಗಿದ ಕಾರಣ ನೂತನ ರಾಜ್ಯಪಾಲರನ್ನಾಗಿ ಥಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಿಸಲಾಗಿದೆ.
ಕರ್ನಾಟಕ ಸೇರಿದಂತೆ ೮ ರಾಜ್ಯಗಳಿಗೆ ರಾಜ್ಯಪಾಲರ ನೇಮಕ ಮಾಡಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ನೇಮಕಾತಿ ಆದೇಶ ಮಾಡಿದ್ದಾರೆ. ಕೇಂದ್ರ ಸಚಿವ ಸಂಪುಟ ಪುನಾರಚರನೆ ಬೆನ್ನಲ್ಲೇ ನೇಮಕಾತಿಯಾಗಿದೆ. ಈ ಮೂಲಕ ಕರ್ನಾಟಕದ ೧೯ನೇ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ಅಧಿಕಾರ ಸ್ವೀಕರಿಸಲಿದ್ದಾರೆ.
ಕರ್ನಾಟಕ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ನೇಮಕವಾಗುವ ಜತೆಗೆ ಒಟ್ಟು ೮ ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕವಾಗಿದೆ. ಜಾರ್ಖಂಡ್, ಹರಿಯಾಣ, ಮಿಜೋರಾಂ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗೋವಾ, ತ್ರಿಪುರಾ ರಾಜ್ಯಗಳಿಗೂ ಹೊಸ ರಾಜ್ಯಪಾಲರು ನೇಮಕವಾಗಿದ್ದಾರೆ. ಮಿಜೋರಾಂಗೆ ಹರಿಬಾಬು ಕಂಭಂಪತಿ, ಮಧ್ಯಪ್ರದೇಶಕ್ಕೆ ಮಂಗೂಭಾಯ್ ಛಗನ್‌ಭಾಯ್ ಪಟೇಲ್, ಹಿಮಾಚಲಪ್ರದೇಶಕ್ಕೆ ರಾಜೇಂದ್ರನ್ ವಿಶ್ವನಾಥ್ ಅರ್ಲೇಕರ್, ಗೋವಾಕ್ಕೆ ಪಿ.ಎಸ್.ಶ್ರೀಧರನ್ ಪಿಳ್ಳೈ, ತ್ರಿಪುರಾಕ್ಕೆ ಸತ್ಯದೇವ್ ನಾರಾಯಣ್ ಆರ್ಯ, ಜಾರ್ಖಂಡ್‌ಗೆ ರಮೇಶ್ ಬೈಸ್, ಹರಿಯಾಣಕ್ಕೆ ಬಂಡಾರು ದತ್ತಾತ್ತ್ರೇಯ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ
೮೪ ವರ್ಷದ ವಜೂಬಾಯಿ ವಾಲಾ ಅವರು ೨೦೧೪ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕದ ೧೮ನೆಯ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ಇದೀಗ ೧೯ನೇ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ನೇಮಕವಾಗಿದ್ದಾರೆ. ಕರ್ನಾಟಕದ ನೂತನ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಸದ್ಯ ಕೇಂದ್ರ ಸಚಿವರಾಗಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಮೂರು ಬಾರಿ ಮಧ್ಯಪ್ರದೇಶ ಶಾಸಕರಾಗಿ, ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ರಾಜ್ಯಸಭೆಯ ಸದಸ್ಯರೂ ಆಗಿರುವ ಅವರು ಈ ಹಿಂದೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದರು. ಸಂಘ ಪರಿವಾರದ ಹಿನ್ನೆಲೆಯ ತಾವರ್‌ಚಂದ್ ಗೆಹ್ಲೋಟ್, ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೂ ಆಗಿದ್ದರು.