ಬೆಂಗಳೂರು,ಜೂ,07:ತೈಲ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿರುವ ಕಾರಣ ರಾಜ್ಯದ ಕೆಕ ಜಿಲ್ಲೆಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ಗಡಿ ದಾಟಿದೆ.
ಕಳೆದ ವಾರವೇ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ 100 ಗಡಿ ದಾಟಿದ್ದು ಈಗ ರಾಜ್ಯದ ಕೆಲ ಜಿಲ್ಲೆಗಳಲ್ಲಿ 100 ಗಡಿ ದಟಿದೆ. ಬಳ್ಳಾರಿ ಮತ್ತು ಶಿರಸಿಯಲ್ಲಿ ಪೆಟ್ರೋಲ್ ದರವು ಭಾನುವಾರ ₹100ರ ಗಡಿ ದಾಟಿದೆ. ಬಳ್ಳಾರಿಯಲ್ಲಿ ಲೀಟರ್ ಪೆಟ್ರೋಲ್ ದರ ₹100.08, ಶಿರಸಿಯಲ್ಲಿ ₹100.28 ಆಗಿದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ₹100ಕ್ಕಿಂತ ಹೆಚ್ಚಾಗಿರುವುದು ಇದೇ ಮೊದಲು.
ಪಶ್ಚಿಮ ಬಂಗಾಳ ಸೇರಿದಂತೆ ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆಗೆ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದ್ದ ಸಂದರ್ಭ ತೈಲ ಬೆಲೆ ಏರಿಕೆ ಆಗಿರಲಿಲ್ಲ. ಮೇ 4ರಿಂದ ಇದುವರೆಗೆ ಒಟ್ಟು 20 ಬಾರಿ ಬೆಲೆ ಏರಿಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಕಳೆದ ವರ್ಷದ ಜೂನ್ 6ರಂದು ಪೆಟ್ರೋಲ್ ದರ ಲೀಟರಿಗೆ ₹73.55ರಷ್ಟು ಇತ್ತು. ಭಾನುವಾರ ಲೀಟರ್ ಪೆಟ್ರೋಲ್ ₹98.26ಕ್ಕೆ ಏರಿಕೆ ಆಗಿದೆ. ಅಂದರೆ, ಒಂದು ವರ್ಷದ ಅವಧಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹24.71ರಷ್ಟು ಏರಿಕೆ ಆದಂತಾಗಿದೆ.
ಡೀಸೆಲ್ ದರವು ಬೆಂಗಳೂರಿನಲ್ಲಿ ಕಳೆದ ವರ್ಷದ ಜೂನ್ 6ರಂದು ಲೀಟರಿಗೆ ₹65.96 ಇದ್ದಿದ್ದು, ಭಾನುವಾರ ₹91.18ಕ್ಕೆ ಏರಿಕೆ ಆಗಿದೆ. ಒಂದು ವರ್ಷದಲ್ಲಿ ಲೀಟರ್ ಡೀಸೆಲ್ ದರ ₹25.22ರಷ್ಟು ಏರಿಕೆ ಆಗಿದೆ.