ಶೈಲಜಾ ಟೀಚರ್ ಗೆ ಯುರೋಪಿಯನ್ ಓಪನ್ ಸೊಸೈಟಿ ಪ್ರಶಸ್ತಿ

Share

ತಿರುವನಂತಪುರಂ,ಜೂ,29: ಕೇರಳ ಸರ್ಕಾರದ ಮಾಜಿ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು ಸಮುದಾಯ ಆರೋಗ್ಯ ಸೇವೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರತಿಷ್ಟಿತ ಸೆಂಟ್ರಲ್ ಯುರೋಪಿಯನ್ ಯೂನಿವರ್ಸಿಟಿಯ ‘ಓಪನ್ ಸೊಸೈಟಿ‘ ಪ್ರಶಸ್ತಿ ದೊರಕಿದೆ.
ಇತ್ತೀಚೆಗೆ ವರ್ಚುವಲ್ ಮೂಲಕ ನಡೆದ ಯೂನಿವರ್ಸಿಟಿಯ 30 ನೇ ಪದವಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. 1994 ರಲ್ಲಿ ತತ್ವಶಾಸ್ತ್ರಜ್ಞ ಸರ್ ಕಾರ್ಲ್ ಪಾಪರ್ ಅವರಿಗೆ ‘ಓಪನ್ ಸೊಸೈಟಿ‘ಯ ಮೊದಲ ಪ್ರಶಸ್ತಿ ಸಂದಿತ್ತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿವಿಯ ಅಧ್ಯಕ್ಷ ಮಿಚೆಲ್ ಇಗ್ನಾಟಿಫ್ ಅವರು, ‘ಶೈಲಜಾ ಟೀಚರ್ ಅವರು ಭಾರತದಲ್ಲಿ ಕೋವಿಡ್ ಸಂದರ್ಭದಲ್ಲಿ ತಮ್ಮ ಸಿಬ್ಬಂದಿಯೊಡನೆ ಸಮರ್ಪಣಾ ಭಾವದಿಂದ ಕೆಲಸ ಮಾಡಿ, ಸಾರ್ವಜನಿಕ ಸೇವೆ ಎಂದರೆ ಏನು? ಎಂಬುದನ್ನು ತೋರಿಸಿಕೊಟ್ಟರು. ಅವರು ಯುವತಿಯರಿಗೆ ಮಾದರಿ‘ ಎಂದರು.

ಈ ವೇಳೆ ಮಾತನಾಡಿದ ಶೈಲಜಾ ಅವರು, ‘ನಾವು ಅನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನೀವು ಕಲಿತ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಿ. ಸಮಾನ ಸಮಾಜ ನಿರ್ಮಾಣ ಮಾಡುವಲ್ಲಿ ಒಬ್ಬ ನಾಯಕನಾಗಿ ಬೆಳೆಯಿರಿ‘ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶೈಲಜಾ ಅವರು ಕೇರಳದಲ್ಲಿ ಕೊರೊನಾ ಸೋಂಕು ವ್ಯಾಪಿಸಿದ್ದಾಗ ಹಲವಾರು ಮಾದರಿ ಎನಿಸುವ ಕೆಲಸಗಳನ್ನು ಮಾಡಿ, ಕೋವಿಡ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಬಾರಿಯ ಎಲ್‌ಡಿಎಫ್‌ ಸರ್ಕಾರದಲ್ಲಿ ಸಚಿವೆ ಆಗಿದ್ದ ಅವರನ್ನು ಈ ಬಾರಿ ಸಿಎಂ ಪಿಣರಾಯಿ ವಿಜಯನ್ ಅವರು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ. ಇದು ವಿವಾದಕ್ಕೆ ಕಾರಣವಾಗಿತ್ತು.

Girl in a jacket
error: Content is protected !!