ಲಕ್ನೋ, ಅ, ೦೯: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕಷ್ಟಿಗಳಿಲ್ಲದೆ ಬಂಧನ ಸಾಧ್ಯವಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಭಾನುವಾರ ನಡೆದ ಹಿಂಸಾಚಾರದಲ್ಲಿ ೪ ಮಂದಿ ರೈತರು ಸೇರಿ ಒಟ್ಟು ೮ ಮಂದಿ ಮೃತಪಟ್ಟಿದ್ದರು. ಕಾನೂನಿನ ಮುಂದೆ ಎಲ್ಲರೂ ಸಮಾನರು, ಸುಪ್ರೀಂಕೋರ್ಟ್ ಪ್ರಕಾರ ಸಾಕ್ಷ್ಯವಿಲ್ಲದೆ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಹಾಗೂ ತನಿಖೆ ನಡೆಯುತ್ತಿದೆ. ದೂರು ದಾಖಲಾಗಿದೆ. ತಪ್ಪು ಯಾರದ್ದೇ ಇದ್ದರೂ ಶಿಕ್ಷೆ ನಿಶ್ಚಿತ ಎಂದು ಯೋಗಿ ಹೇಳಿದರು. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಹಾಗೂ ಯಾವುದೇ ಒತ್ತಡದಲ್ಲಿ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದರು.
ಪ್ರಜಾಪ್ರಭುತ್ವದಲ್ಲಿ ಯಾವುದೇ ಹಿಂಸೆಗೆ ಅವಕಾಶವಿಲ್ಲ, ಕಾನೂನಿನಲ್ಲಿ ಪ್ರತಿಯೊಬ್ಬರಿಗೂ ಭದ್ರತೆ ಇದೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಹೇಳಿದರು. ಕೇಂದ್ರದ ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ, ಕಾರು ಹರಿದು ಎಂಟು ಜನ ಅಸುನೀಗಿರುವ ದುರ್ಘಟನೆ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಕಳೆದ ಅಕ್ಟೋಬರ್ ೩ರಂದು ನಡೆದ ಈ ಘಟನೆ, ದೇಶದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆ ಕಲ್ಪಿಸಿದೆ. ರೈತರ ಮೇಲೆ ಕಾರು ಹರಿಸಿದ್ದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಎಂಬ ಆರೋಪ ಬಲವಾಗಿದೆ. ಪ್ರತಿಭಟನಾನಿರತ ರೈತರ ಹೇಳಿಕೆಗಳು, ಘಟನೆ ಸಂಬಂಧ ಬಿಡುಗಡೆಯಾಗಿರುವ ವಿಡಿಯೋಗಳು ಆಶಿಶ್ ಮಿಶ್ರಾ ಅವರತ್ತ ಬೊಟ್ಟು ಮಾಡುತ್ತಿವೆ. ಘಟನೆ ಖಂಡಿಸಿ ಕಾಂಗ್ರೆಸ್ ಸಿಡಿದೆದ್ದಿದೆ. ಆದರೆ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಿರುವ ಉತ್ತರ ಪ್ರದೇಶ ಸರ್ಕಾರ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿ ಮತ್ತಷ್ಟು ಸಂಕಟವನ್ನು ಮೈಮೇಲೆ ಎಳೆದುಕೊಂಡಿದೆ. ದುರ್ಘಟನೆಯಲ್ಲಿ ಮೃತಪಟ್ಟ ರೈತರ ಸಂಬಂಧಿಕರು ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ಮುಂದುವರೆಸಿದ್ದು, ಕಾಂಗ್ರೆಸ್ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದೆ.