ನವದೆಹಲಿ,ಅ,22: ಭಾರತಕ್ಕೆ ದೊಡ್ಡ ಗುರಿಗಳನ್ನು ಸೃಷ್ಟಿಸಿ ಅದನ್ನು ಸಾಧಿಸುವುದು ತಿಳಿದಿದೆ. ಆದರೆ ಈ ಸಂದರ್ಭದಲ್ಲಿ ನಾವು ಜಾಗರೂಕರಾಗಿರಬೇಕು. ಯಾವುದೇ ಕಾರಣಕ್ಕೂ ಎಚ್ಚರ ತಪ್ಪಬಾರದು ಎಂದು ಪ್ರಧಾನಿ ನರೇಂಪರೋಕ್ಷವಾ ಟೀಕಿಸುವವರಿಗೆ ಪರೋಕ್ಷವಾಗ ಉತ್ತರ ನೀಡಿದ್ದಾರೆ.
ಇಂದು ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶ 100 ಕೋಟಿ ಲಸಿಕೆ ಗುರಿಯನ್ನು ಸಾಧಿಸಿದ ಸಂತೋಷವನ್ನು ಹಂಚಿಕೊಂಡರು. ಇದು ಎಲ್ಲರ ಸಾಧನೆ, ಹೃದಯಪೂರ್ವಕವಾಗಿ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ವ್ಯಾಕ್ಸಿನೇಷನ್ ನಲ್ಲಿ ಭಾರತ ಜಗತ್ತಿನಲ್ಲಿಯೇ 2ನೇ ಸ್ಥಾನದಲ್ಲಿದೆ. ಲಸಿಕೆ ನೀಡಿಕೆಯಲ್ಲಿ ಇಂದು ಭಾರತ ಜಗತ್ತಿಗೆ ಮಾದರಿಯಾಗಿದೆ ಎಂದರು.
ಭಾರತದಲ್ಲಿ ಸವಾಲುಗಳಿಗೆ ಅನುಗುಣವಾಗಿ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. ದಾಖಲೆ ಸಂಖ್ಯೆಯಲ್ಲಿ ಯುನಿಕಾರ್ನ್ಗಳು ಆರಂಭವಾಗಿವೆ. ದೇಶದಲ್ಲಿ ವಿಶ್ವಾಸ, ಉತ್ಸಾಹ, ಹುಮ್ಮಸ್ಸಿನ ವಾತಾವರಣ ಇದೆ. ಸ್ಟಾರ್ಟ್ ಅಪ್ನಲ್ಲಿ ದಾಖಲೆ ಮಟ್ಟದಲ್ಲಿ ಹೂಡಿಕೆ ಆಗುತ್ತಿದೆ. ಕೊವಿನ್ ಪೋರ್ಟಲ್ ಈಗ ವಿಶ್ವದ ಆಕರ್ಷಣೆಯಾಗಿದೆ ಎಂದು ಹೇಳಿದರು.
ಕೊವಿಡ್ ಲಸಿಕಾ ಅಭಿಯಾನ ದೇಶದಲ್ಲಿ ಏಕತೆ ಕಂಡಿದೆ. ಕಡಿಮೆ ಸಮಯದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಒಂದೇ ದಿನದಲ್ಲಿ 1 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಭಾರತದ ಕೊವಿಡ್ ಲಸಿಕೆ ನೀಡಿಕೆಯು ವಿಜ್ಞಾನ ಆಧಾರಿತವಾಗಿದೆ ಎಂದು ಹೇಳಿದ್ದಾರೆ.
100 ಕೋಟಿ ಡೋಸ್ ಲಸಿಕೆ ನವ ಭಾರತದ ಶಕ್ತಿ ತೋರಿಸಿದೆ. ಸಾಂಕ್ರಾಮಿಕ ರೋಗ ಯಾವುದೇ ತಾರತಮ್ಯ ಮಾಡುವುದಿಲ್ಲ. ಅದೇ ರೀತಿ ಲಸಿಕೆಯಲ್ಲೂ ತಾರತಮ್ಯ ಮಾಡಬಾರದು. ವಿಐಪಿಗಳಿಗೂ ಸಾಮಾನ್ಯರಂತೆಯೇ ಲಸಿಕೆಯನ್ನು ನೀಡಲಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ಧಾರೆ. ಆದರೆ ಭಾರತದಲ್ಲಿ ಜನರ ಪಾಲುದಾರಿಕೆಯನ್ನ ನಮ್ಮ ಶಕ್ತಿಯಾಗಿ ಬಳಸಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.
ಲಸಿಕೆ ಸಂಶೋಧನೆಯಲ್ಲಿ ಬೇರೆ ದೇಶಗಳಿಗೆ ಪರಿಣತಿ ಇತ್ತು. ಭಾರತ ಸಹ ಲಸಿಕೆಗಾಗಿ ಬೇರೆ ದೇಶಗಳನ್ನು ಅವಲಂಬಿಸಿತ್ತು. ಭಾರತ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವೇ ಎಂಬ ಪ್ರಶ್ನೆ ಇತ್ತು. ಭಾರತದಲ್ಲಿ ಲಸಿಕೆ ಯಾವಾಗ ತರುತ್ತೆ, ಹಣ ಎಲ್ಲಿಂದ ತರುತ್ತೆ ಎಂಬ ಪ್ರಶ್ನೆ ಇತ್ತು. 100 ಕೋಟಿ ಡೋಸ್ ಲಸಿಕೆ ಎಲ್ಲ ಪ್ರಶ್ನೆಗಳಿಗೆ ಭಾರತವು ಉತ್ತರಿಸಿದೆ ಎಂದು ಪ್ರಧಾನಿ ನುಡಿದಿದ್ದಾರೆ. ಭಾರತದಲ್ಲಿ ಉಚಿತವಾಗಿ ಕೊವಿಡ್ ಲಸಿಕೆ ನೀಡಲಾಗಿದೆ. ಇಡೀ ವಿಶ್ವ ಭಾರತದ ಈ ಸಾಮರ್ಥ್ಯವನ್ನು ನೋಡುತ್ತಿದೆ. 100 ಕೋಟಿ ಡೋಸ್ ಲಸಿಕೆ ಕೇವಲ ಅಂಕಿಸಂಖ್ಯೆಯಲ್ಲ ಎಂದು ಅವರು ಹೇಳಿದ್ದಾರೆ.
100 ಕೋಟಿ ಡೋಸ್ ಲಸಿಕೆ ನೀಡಿಕೆ ದೇಶದ ಸಾಮರ್ಥ್ಯದ ಪ್ರತಿಬಿಂಬ. ಕಠಿಣ ಗುರಿ ಇಟ್ಟುಕೊಂಡು ಸಾಧಿಸುವುದು ಭಾರತಕ್ಕೆ ಗೊತ್ತಿದೆ ಎಂದು ಹೊಗಳಿರುವ ಪ್ರಧಾನಿ ಮೋದಿ, ಬೇರೆ ದೇಶಗಳ ಜತೆಗೆ ಭಾರತದ ಲಸಿಕಾ ಅಭಿಯಾನವನ್ನು ಹೋಲಿಸಿದ್ದಾರೆ
ಕೊರೋನಾ ಮೊದಲ ಅಲೆ ಕಂಡುಬಂದ ಸಂದರ್ಭದಲ್ಲಿ ದೇಶದ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಸೋಂಕನ್ನು ಎದುರಿಸುವುದು ಹೇಗೆ, ಏನು ಮಾಡುವುದು ಎಂದು ಗೊತ್ತಿರಲಿಲ್ಲ. ಸಮಯ ಕಳೆದಂತೆ ಪರಿಸ್ಥಿತಿಗೆ ಹೊಂದಿಕೊಂಡೆವು. ಸೋಂಕನ್ನು ಸಮರ್ಥವಾಗಿ ನಾವು ಭಾರತೀಯರು ಎದುರಿಸಿದ್ದೇವೆ, ಕಳೆದ ಜನವರಿಯಲ್ಲಿ ಕೊರೋನಾ ಲಸಿಕೆ ಬಂದ ಮೇಲೆ 9 ತಿಂಗಳಲ್ಲಿ ಸಾಧನೆ ಮಾಡಿದ್ದೇವೆ. ಸವಾಲನ್ನು ಸಮರ್ಥವಾಗಿ ಎದುರಿಸಿದ್ದೇವೆ. ಅದರ ಪರಿಣಾಮವೇ ಇಂದು ಶತಕೋಟಿ ಲಸಿಕೆ, ನಮ್ಮ ದೇಶದ ಸಾಮರ್ಥ್ಯದ ಪ್ರತಿಬಿಂಬವಾಗಿದೆ ಎಂದರು.