ಹೈದರಾಬಾದ್,ಜು,೧೩: ಕೋವಿಡ್-೧೯ ಮೂರನೇ ಅಲೆ ಬರುತ್ತದೆ ಎನ್ನುವ ದಾವಂತದಲ್ಲಿರುವಾಗಲೇ ಹೈದರಾಬಾದ್‌ನಲ್ಲಿ ವಿಜ್ಞಾನಿಯೊಬ್ಬರು ಕಳೆದ ಜುಲೈ ೪ ರಿಂದಲೇ ಆರಂಭವಾಗಿದೆ ಎಂಬ ಅಘತಾಕಾರಿ ಮಾಹಿತಿಯನ್ನು ನೀಡಿದ್ದಾರೆ
ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ ಹಿರಿಯ ಭೌತವಿಜ್ಞಾನಿ ಡಾ.ವಿಪಿನ್ ಶ್ರೀವಾಸ್ತವ ಅವರು, ಭಾರತದಲ್ಲಿ ಕೋವಿಡ್-೧೯ ಸೋಂಕಿನ ಹರಡುವಿಕೆಯನ್ನು ವಿವರವಾಗಿ ವಿಶ್ಲೇಷಿಸಿದ್ದು, ಜುಲೈ ೪ ರಿಂದಲೇ ಮೂರನೇ ಅಲೆ ಪ್ರಾರಂಭವಾಗಿರಬಹುದು ಎಂದು ಹೇಳಿದ್ದಾರೆ.
ಕಳೆದ ೪೬೩ ದಿನಗಳಲ್ಲಿ ದೇಶದಲ್ಲಿ ಸೋಂಕು ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ಅಧ್ಯಯನ ಮಾಡಲು ವಿಶೇಷ ವಿಧಾನವನ್ನು ಅಭಿವೃದ್ಧಿಪಡಿಸಿರುವ ಡಾ.ವಿಪಿನ್ ಶ್ರೀವಾಸ್ತವ ಅವರು ಈ ವರದಿಯ ಆಧಾರದ ಮೇರೆಗೆ ಜುಲೈ ೪ ರ ದಿನಾಂಕದಿಂದಲೇ ಮೂರನೇ ಅಲೆ ಆರಂಭವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಈ ವರ್ಷದ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ತರಂಗ ಆರಂಭವಾಗಿತ್ತು. ಇದರ ಲೆಕ್ಕಾಚಾರದ ಮೇರೆಗೆ ಜುಲೈ ೪ರಿಂದಲೇ ಮೂರನೇ ಅಲೆ ಆರಂಭವಾಗಿರಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ.
ದೈನಂದಿನ ಸಾವಿನ ಸಂಖ್ಯೆಯಲ್ಲಿ ತ್ವರಿತ ಏರಿಳಿತ
ಇನ್ನು ದೇಶದಲ್ಲಿ ಕೋವಿಡ್ ಸೋಂಕಿನಿಂದಾಗಿ ದೈನಂದಿನ ಸಾವಿನ ಪ್ರಕರಣಗಳ ಹೆಚ್ಚುತ್ತಿರುವ ಪ್ರವೃತ್ತಿ ಕಡಿಮೆಯಾಗುತ್ತಿರುವ ಅಥವಾ ಹೆಚ್ಚಾಗುತ್ತಿರುವ ಪ್ರವೃತ್ತಿ ತೋರುತ್ತಿದೆ. ಈ ಹಿಂದೆ ೨ನೇ ಅಲೆ ಆರಂಭಕ್ಕೂ ಮುನ್ನ ಕೂಡ ಇಂತಹುದೇ ಪ್ರವೃತ್ತಿ ಕಂಡುಬಂದಿತ್ತು. ಹೀಗಾಗಿ ಇದೇ ಲೆಕ್ಕಾಚಾರದಲ್ಲಿ ಶ್ರೀವಾಸ್ತವ ಅವರು ೩ನೇ ಅಲೆ ಕುರಿತು ಮಾಹಿತಿ ನೀಡಿದ್ದಾರೆ.
೨೪ ಗಂಟೆಗಳ ಅವಧಿಯಲ್ಲಿ ಸೋಂಕಿನಿಂದ ಉಂಟಾಗುವ ಸಾವಿನ ಅನುಪಾತವನ್ನು ಅದೇ ಅವಧಿಯಲ್ಲಿ ಚಿಕಿತ್ಸೆಯಲ್ಲಿರುವ ಹೊಸ ರೋಗಿಗಳ ಸಂಖ್ಯೆಗೆ ಲೆಕ್ಕಹಾಕಲಾಗಿದ್ದು, ಅದಕ್ಕೆ ಡಿಡಿಎಲ್ ಎಂದು ಶ್ರೀವಾಸ್ತವ ಅವರು ಹೆಸರಿಸಿದ್ದಾರೆ. ಇದೇ ವಿಧಾನದ ಮೇರೆಗೆ, ಕಳೆದ ಫೆಬ್ರವರಿ ಮೊದಲ ವಾರದಲ್ಲಿ, ಡಿಡಿಎಲ್‌ನಲ್ಲಿ ಈ ಚಂಚಲತೆಯನ್ನು ನಾವು ನೋಡಿದ್ದೇವೆ. ಆದಾಗ್ಯೂ, ಆ ಸಮಯದಲ್ಲಿ ಸೋಂಕಿನಿಂದ ಉಂಟಾಗುವ ಸಾವಿನ ಸಂಖ್ಯೆ ೧೦೦ ಅಥವಾ ಅದಕ್ಕಿಂತ ಕಡಿಮೆ ಕ್ರಮದಲ್ಲಿತ್ತು. ನಾವು ಅದನ್ನು ನಿರ್ಲಕ್ಷಿಸಿದೆವು. ಆದರೆ ನಂತರ ಪರಿಸ್ಥಿತಿ ಭೀಕರವಾಯಿತು. ಜುಲೈ ೪ ರಿಂದ ಇದೇ ರೀತಿಯ ಪ್ರವೃತ್ತಿಯ ಆರಂಭವನ್ನು ಕಾಣಬಹುದು ಎಂದು ಶ್ರೀವಾಸ್ತವ ಹೇಳಿದ್ದಾರೆ.