625ಕ್ಕೆ 625 ಅಂಕ ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿಗೆ ಸಚಿವ ಮಧು ಬಂಗಾರಪ್ಪ ಸನ್ಮಾನ

Share

ಶಿರಸಿ,ಮೇ,03-: ಶಿರಸಿಯ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಪೂರ್ಣಾಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ ಕುಮಾರಿ ಶಗುಪ್ತಾ ಅಂಜುಮ್ ಅವರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಇಂದು ಸರ್ಕಾರಿ ಶಾಲೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.

“ಕುಮಾರಿ ಶಗುಪ್ತಾ ಅಂಜುಮ್ ಅವರ ವೈದ್ಯೆಯಾಗುವ ಕನಸು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಅವರ ಈ ಆಶಯ ನೆರವೇರಲಿ ಎಂದು ನಾನು ಮನಸಾರೆ ಹಾರೈಸುತ್ತೇನೆ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಅತ್ಯಮೂಲ್ಯವಾದದ್ದು. ಇಂತಹ ಸಾಧನೆಯಿಂದ ಭಾರತದ ದಿವ್ಯ ಪರಂಪರೆಗೆ ಮುನ್ನುಡಿ ಬರೆಯುವಂತರಾಗಲಿ. ಅವರೆಲ್ಲರಿಗೂ ನನ್ನ ಗೌರವ ಮತ್ತು ಅಭಿನಂದನೆಗಳು,” ಎಂದರು

ಹಾಗೆಯೇ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರು ತಮ್ಮ ಜಿಲ್ಲೆಯಲ್ಲಿ 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಿ, ಶುಭ ಹಾರೈಸಿದ್ದಾರೆ. ಅವರಿಗೆ ಸಚಿವ ಮಧು ಬಂಗಾರಪ್ಪನವರು ಈ ಸಂದರ್ಭದಲ್ಲಿ ಅಭಿನಂದಿಸಿದರು.

ಸಚಿವರೊಂದಿಗೆ, ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ    ಭೀಮಣ್ಣ ಟಿ ನಾಯ್ಕ್, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಆನಂದ ಕೊರವರ, ಶಿಕ್ಷಕರಾದ ಕೃಷ್ಣಶೆಟ್ಡಿ ,ಶ್ರೀಧರ್ ಶೆಟ್ಟಿ ಹಾಗೂ ಇಲಾಖೆಯ ಅಧಿಕಾರಿಗಳು, ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಹಾಜರಿದ್ದರು.

2024-25 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆ ಬರೆದಿದ್ದ 8,42,173 ವಿದ್ಯಾರ್ಥಿಗಳಲ್ಲಿ 5,24,984 ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ.62.34 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.8 ರಷ್ಟು ಫಲಿತಾಂಶ ಹೆಚ್ಚಿದೆ.

ಹಾಗೆಯೇ, ಈ ಬಾರಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿರುವುದು ವಿಶೇಷ. ಸರ್ಕಾರಿ ಶಾಲೆಗಳಲ್ಲಿ ಶೇ.62.7, ಅನುದಾನಿತ ಶಾಲೆಗಳಲ್ಲಿ ಶೇ.58.97ರಷ್ಟು ಮಕ್ಕಳು ತೇರ್ಗಡೆ ಹೊಂದಿದ್ದಾರೆ.

ಶಿವಮೊಗ್ಗ ಜಿಲ್ಲೆ ನಾಲ್ಕನೇ ಸ್ಥಾನ ಪಡೆದಿದ್ದು ಶೇ.82.29 ರಷ್ಟು ಮಕ್ಕಳು ತೇರ್ಗಡೆ ಹೊಂದಿದ್ದಾರೆ. ಅದಲ್ಲದೆ, ಶೇ. 75.14ರಷ್ಟು ವಿದ್ಯಾರ್ಥಿಗಳು 60% ಅಂಕಗಳನ್ನು ಮೀರಿ ಪಡೆದಿರುವುದು ಗಮನಾರ್ಹ.

2024-25ರ ಪರೀಕ್ಷೆ -1 ರಲ್ಲಿ ಅಪೂರ್ಣ ಫಲಿತಾಂಶ ಪಡೆದಿದ್ದ ಶಾಲಾ ಅಭ್ಯರ್ಥಿಗಳಿಗೆ ಪರೀಕ್ಷೆ-2ಕ್ಕೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಆದರೆ ಖಾಸಗಿ ಅಭ್ಯರ್ಥಿಗಳು, ಮರುಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸುವಂತೆ ತಿಳಿಸಿದರು.

Girl in a jacket
error: Content is protected !!