ಬೆಂಗಳೂರು, ಮೇ,02-ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವಹೇಳನಕಾರಿ ಪದ ಬಳಿಸಿ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ದ ದಾಖಲಾಗಿದ್ದ ಎಫ್ ಐಆರ್ ರದ್ದು ಪಡಿಸುವಂತೆ ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣ ರದ್ದು ಕೋರಿ ಸಿಟಿ ರವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ದೂರುದಾರ ಮಹಿಳೆಯ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಲಾದ ಮಾತು, ಮಾತನಾಡಿದ್ದರೆ ಅಥವಾ ಸನ್ನೆ ಮಾಡಿದ್ದರೆ ಅದು ಖಂಡಿತವಾಗಿಯೂ ಅವರ ನಮ್ರತೆಯನ್ನು ಅತಿರೇಕಗೊಳಿಸುತ್ತದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಅದು ಶಾಸನ ಸಭೆಯ ವಿನಾಯಿತಿಗೆ ಒಳಪಡುವುದಿಲ್ಲ ಎಂದು ಹೇಳಿದ್ದಾರೆ.
ತಮ್ಮ ವಿರುದ್ಧ ಅವಹೇಳನಕಾರಿ ಪದ ಬಳಸಿದ ಸಿಟಿ ರವಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಡಿಸೆಂಬರ್ 19, 2024 ರಂದು ಬೆಳಗಾವಿ ಜಿಲ್ಲೆಯ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ರಾಜ್ಯ ಸರ್ಕಾರವು ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ(CID) ವರ್ಗಾಯಿಸಿತು.
ಸಿಟಿ ರವಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ದೂರು ದಾಖಲಿಸುವ ಮೊದಲು, ವಿಧಾನಸಭೆಯ ಸ್ಪೀಕರ್ ಈ ವಿಷಯವನ್ನು ಕೈಗೆತ್ತಿಕೊಂಡು ವಿಚಾರಣೆ ಮುಕ್ತಾಯಗೊಳಿಸಿದರು ಎಂದು ಹೇಳಿದರು.
ವಿಧಾನ ಪರಿಷತ್ನಲ್ಲಿ ಈ ಘಟನೆ ನಡೆದಿರುವುದರಿಂದ ಸಿಟಿ ರವಿ ಅವರಿಗೆ ಶಾಸಕಾಂಗ ವಿನಾಯಿತಿ ಇದೆ ಎಂದು ನಾವದಗಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕರು, ಶಾಸಕಾಂಗದೊಳಗೆ ಯಾವುದೇ ಅಪರಾಧ ನಡೆದರೆ, ಅದನ್ನು ನಿಸ್ಸಂದೇಹವಾಗಿ ತನಿಖೆ ಮಾಡಬೇಕಾಗುತ್ತದೆ ಎಂದು ವಾದಿಸಿದರು.
ವಾದ ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಸಿಟಿ ರವಿ ಅವರ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ತಿನಲ್ಲಿ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ಸಿಟಿ ರವಿ ಅಲ್ಲಗಳದಿದ್ದಾರೆ. ಮತ್ತೊಂದೆಡೆ, ಅಶ್ಲೀಲವಾಗಿ ನಿಂದಿಸಿರುವುದು ಸರ್ಕಾರಿ ಟಿವಿಯಲ್ಲಿ ದಾಖಲಾಗಿರುವುದು ಇತ್ತೀಚೆಗೆ ದೃಢಪಟ್ಟಿದೆ. ಆದರೆ ಅದು ಸಿಟಿ ರವಿ ಅವರ ಧ್ವನಿಯೇ ಎಂಬುದನ್ನು ಖಚಿತಪಡಿಸಲು ಅವರ ವಾಯ್ಸ್ ಸ್ಯಾಂಪಲ್ ಕೋರಲಾಗಿತ್ತು. ಆದರೆ ವಾಯ್ಸ್ ಸ್ಯಾಂಪಲ್ ನೀಡಲು ಸಿಟಿ ರವಿ ನಿರಾಕರಿಸಿದ್ದರು.