ಬೆಂಗಳೂರು,ಜೂಂ3: ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ದುಃಖದಲ್ಲಿ ಭಾಗಿಯಾಗಿ, ಅವರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ. ಅಂತಹ ಮಕ್ಕಳೊಂದಿಗೆ ನಾವಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಕೋವಿಡ್-19 ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳು ಹಾಗೂ ಅವರನ್ನು ಪಾಲನೆ ಮಾಡುತ್ತಿರುವ ಪಾಲಕರ ಜೊತೆಗೆ ಗೂಗಲ್ ಮೀಟ್ ಮೂಲಕ ವಿಡಿಯೊ ಸಂವಾದ ನಡೆಸಿ, ಅವರಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡ 19 ಮಕ್ಕಳ ಜೊತೆಗೆ ಸಚಿವರು ಸುಮಾರು ಮೂರು ಗಂಟೆಗಳ ಕಾಲ ಪ್ರತಿಯೊಬ್ಬ ಮಗುವಿನ ಜೊತೆಗೂ ವಯಕ್ತಿಕವಾಗಿ ಚರ್ಚೆ ನಡೆಸಿ, ತಂದೆ ತಾಯಿಗಳನ್ನು ಕಳೆದುಕೊಂಡ ಮಕ್ಕಳ ಪೋಷಕರ ಕಷ್ಟಗಳ ಬಗ್ಗೆ ಮಾಹಿತಿ ಪಡೆದರು.
ಕಷ್ಟದ ಸಂದರ್ಭದಲ್ಲಿ ಧೃತಿಗೆಡದೆ ಜೀವನದ ಸವಾಲುಗಳನ್ನು ಎದುರಿಸಿ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬೆಳೆಯುವಂತೆ ಮಕ್ಕಳಿಗೆ ಸಚಿವರು ಕಿವಿ ಮಾತು ಹೇಳಿದರು
ಈ ಕುರಿತು ಮಾತನಾಡಿರುವ ಸಚಿವರು ಪೋಷಕರನ್ನು ಕಳೆದುಕೊಂಡ ಆ ಮಕ್ಕಳ ನೋವು ಕಂಡು ಮನಸ್ಸು ಭಾರವಾಯಿತು. ಹೀಗಾಗಿ ಇಂತಹ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಪೋಷಕರು ಇಲ್ಲ ಎಂಬ ಕೊರಗು ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಈಗಾಗಲೇ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ‘ಬಾಲ ಸೇವಾ’ ಯೋಜನೆಯನ್ನು ಘೋಷಿಸಿದ್ದಾರೆ. ಸರ್ಕಾರದಿಂದ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಅತೀ ಶೀಘ್ರದಲ್ಲಿ ನೀಡುತ್ತೇವೆ. ಮುಂದೇನಾದರೂ ಅಗತ್ಯವಿದ್ದಲ್ಲಿ ಅಗತ್ಯ ನೆರವು ನೀಡಲು ಸರ್ಕಾದ ಸದಾ ಸಿದ್ಧವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಪಲ್ಲವಿ ಆಕೃತಿ, ನೋಡಲ್ ಅಧಿಕಾರಿಗಳಾದ ಮೋಹನರಾಜ, ವಿವಿಧ ಜಿಲ್ಲೆಗಳ ಡಿ.ಸಿ.ಪಿ.ಓ. ಹಾಗೂ ಸಿ.ಡಿ.ಪಿ.ಓ ಅಧಿಕಾರಿಗಳು ಹಾಜರಿದ್ದರು.