ಬೆಂಗಳೂರು, ಜೂ.30- ಉದ್ಯಾನನಗರಿ, ನಿವೃತ್ತರ ಸ್ವರ್ಗ ಬೆಂಗಳೂರು ನಗರ ಕಾಂಕ್ರೀಟ್ ಕಾಡಾಗುತ್ತಿದ್ದು, ಹಸಿರು ಹೊದಿಕೆ ಸಂವರ್ಧನೆಗಾಗಿ ಕಾಡುಗೋಡಿ ಅರಣ್ಯ ಭೂಮಿ ಸಂರಕ್ಷಿಸಲು ಕ್ರಮ ವಹಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಕಾಡುಗೋಡಿ ಪ್ಲಾಂಟೇಷನ್ ನ 120 ಎಕರೆ ಅರಣ್ಯ ಭೂಮಿ ಮರುವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಇಂದು ಗಾಂಧೀ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರಣ್ಯಭೂಮಿಯನ್ನು ಹಂಚಿಕೆ, ಮಂಜೂರು ಮಾಡಲು ಬರುವುದಿಲ್ಲ. ಅರಣ್ಯೇತರ ಉದ್ದೇಶಕ್ಕೆ ಅರಣ್ಯಭೂಮಿ ಬಳಸಲು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಅನುಮತಿ ಕಡ್ಡಾಯ ಎಂದರು.
ಬೆಂಗಳೂರು ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್ ಸರ್ವೆ ನಂ. 1ರಲ್ಲಿ 711 ಎಕರೆಯನ್ನು ನೆಡುತೋಪಿಗಾಗಿ 1896 ರಲ್ಲಿ ನೀಡಲಾಗಿರುತ್ತದೆ. ಬಳಿಕ 1901ರಲ್ಲಿ ಅರಣ್ಯ ನಿಯಮಗಳು 1900ರ ರೀತ್ಯ ರಾಜ್ಯ ಅರಣ್ಯ ಎಂದು ಅಧಿಸೂಚನೆ ಮಾಡಲಾಗಿರುತ್ತದೆ. ಅಧಿಸೂಚಿತ ಅರಣ್ಯ ಮೀಸಲು ಅರಣ್ಯವಾಗಿರುತ್ತದೆ ಎಂದರು.
ಯಾವುದೇ ಅರಣ್ಯ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಪೂರ್ವಾನುಮತಿ ಇಲ್ಲದೆ ಮಂಜೂರು ಮಾಡಬಾರದು ಎಂದು ಕೇಂದ್ರ ಸರ್ಕಾರವೇ ಜಾರಿ ಮಾಡಿರುವ ಕಾಯಿದೆ ಹೇಳುತ್ತದೆ. ಸರ್ವೋಚ್ಛ ನ್ಯಾಯಾಲಯ ಕೂಡ ಕಾಲಕಾಲಕ್ಕೆ ಈ ಸಂಬಂಧ ಸ್ಪಷ್ಟ ತೀರ್ಪು, ಆದೇಶ ನೀಡಿರುತ್ತದೆ ಎಂದರು.
ಹುಲಿ ಸಾವು: ಅಧಿಕಾರಿಗಳ ನಿರ್ಲಕ್ಷ್ಯ ಸಾಬೀತಾದರೆ ಶಿಸ್ತು ಕ್ರಮ
ಹೂಗ್ಯಂ ವಲಯದಲ್ಲಿ 5 ಹುಲಿಗಳ ಅಸಹಜ ಸಾವಿನ ಕುರಿತಂತೆ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಅವರ ವಿರುದ್ಧ ಕಾನೂನು ರೀತ್ಯ ಕ್ರಮ ಆಗುತ್ತಿದೆ. ಈ ಪ್ರಕರಣದಲ್ಲಿ ಯಾವುದೇ ಅಧಿಕಾರಿಯ ನಿರ್ಲಕ್ಷ್ಯ ಕಂಡುಬಂದಿಲ್ಲಿ, ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಹಸಿರು ಹೊದಿಕೆ ಸಂವರ್ಧನೆಗೆ ಕಾಡುಗೋಡಿ ಅರಣ್ಯ ಭೂಮಿ ಸಂರಕ್ಷಣೆ: ಈಶ್ವರ ಖಂಡ್ರೆ
Share