ಸರ್ಕಾರಿ ಶಾಲಾ ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಲು ಚಿಂತನೆ; ಸುರೇಶ್ ಕುಮಾರ್

Share

ಮೈಸೂರು,ಮೇ24: ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣವಂಚಿತರಾಗಬಾರದು ಹಾಗಾಗಿ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ಉಚಿತ ಸ್ಮಾರ್ಟ್ ಫೋನು ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮೈಸೂರಿನ ಡಿಡಿಪಿಐ ಕಚೇರಿಗೆ ದಿಢೀರ್‌ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ‘ಸ್ಮಾರ್ಟ್‌ಫೋನ್‌ ವಿತರಣೆ ಸಂಬಂಧ ಈಗಾಗಲೇ ಎಲ್ಲ ಶೈಕ್ಷಣಿಕ ಜಿಲ್ಲೆಯಲ್ಲೂ ಸರ್ವೇ ನಡೆಸಲಾಗಿದೆ’ ಎಂದು ಹೇಳಿದರು.

‘ಹಳ್ಳಿಗಳ ಬಡ ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ವಂಚಿತ ಮಕ್ಕಳಿಗೆ ಬಾಲ್ಯ ವಿವಾಹವೂ ಆಗಬಾರದು. ಅವರು ಬಾಲ ಕಾರ್ಮಿಕರೂ ಆಗಬಾರದು. ಪ್ರಸ್ತುತ ಆನ್‌ಲೈನ್ ಶಿಕ್ಷಣಕ್ಕೆ ಸ್ಮಾರ್ಟ್‌ಫೋನ್ ಅತ್ಯಗತ್ಯವಾಗಿದೆ. ಮಕ್ಕಳ ಹಾಜರಾತಿ,‌ ಸ್ಮಾರ್ಟ್‌‌ಫೋನ್ ಅಗತ್ಯತೆ ಬಗ್ಗೆ ವರದಿ ನೀಡಲು ಎಲ್ಲಾ ಡಿಡಿಪಿಐಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಸಚಿವರು ತಿಳಿಸಿದರು.

‘ವರ್ಷಕ್ಕೊಮ್ಮೆ ಫೋನ್ ಬದಲಾಯಿಸುವುದು ಈಗಿನ ಟ್ರೆಂಡ್ ಆಗಿದೆ. ವಿವಿಧ ಸಂಘ–ಸಂಸ್ಥೆಗಳ ನೆರವಿನೊಂದಿಗೆ ಸ್ಮಾರ್ಟ್‌ಫೋನ್ ಬ್ಯಾಂಕ್‌ ಮಾಡಬಹುದಾ? ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ’ ಎಂದು ಸುರೇಶ್‌ಕುಮಾರ್‌ ಹೇಳಿದರು.

ಪರೀಕ್ಷೆಯ ಚರ್ಚೆ

‘ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಪರ–ವಿರೋಧ ಸಾಕಷ್ಟು ಚರ್ಚೆ ನಡೆದಿದೆ. ಹೋದ ವರ್ಷವೂ ಇದೇ ರೀತಿ ಆಗಿತ್ತು. ಆದರೆ ಶೇ 98ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಬಾರಿಯೂ ಪರೀಕ್ಷೆ ನಡೆಸುವ ಸಂಬಂಧ ವಿಧಾನ ಪರಿಷತ್‌ ಸದಸ್ಯರು, ಮಾಜಿ ಶಿಕ್ಷಣ ಸಚಿವರು, ಶಿಕ್ಷಣ ತಜ್ಞರ ಜೊತೆ ಮಾತುಕತೆ ನಡೆಸುವೆ’ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಚಾಮರಾಜನಗರದ ಆಮ್ಲಜನಕ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರಿಹಾರ ನೀಡುವ ವಿಷಯದಲ್ಲಿ ಅಡ್ವೊಕೇಟ್‌ ಜನರಲ್‌ ಹೈಕೋರ್ಟ್‌ಗೆ ಸರ್ಕಾರದ ನಿಲುವನ್ನು ತಿಳಿಸಿದ್ದಾರೆ. ಪ್ರಕರಣ ವಿಚಾರಣೆಯಲ್ಲಿರುವುದರಿಂದ ಪ್ರತಿಕ್ರಿಯಿಸಲ್ಲ’ ಎಂದ ಸುರೇಶ್‌ಕುಮಾರ್‌, ‘ಜಿಲ್ಲಾಧಿಕಾರಿ ವೈಫಲ್ಯದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ’ ಎಂದು ಹೇಳಿದರು.

Girl in a jacket
error: Content is protected !!