ಬೆಂಗಳೂರು,೧೩:ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಅಹಂಕಾರದ ಎಲ್ಲೆ ಮೀರಿದಂತೆ ಕಾಣುತ್ತಿದೆ ಅಥವಾ ಶಿಕ್ಷಣ ವ್ಯವಸ್ಥೆಯನ್ನೇ ಒಂದು ರೀತಿ ಕುಲಗೆಡುವ ವ್ಯವಸ್ಥಿತಿ ಸಂಚು ಎನ್ನುವಂತಿದೆ ಅವರ ನೀಡುವ ಪ್ರತಿ ಹೇಳಿಕೆಗಳು.
ಹೌದು ಸುರೇಶ್ ಕುಮಾರ್ ಅವರ ಪ್ರತಿಬಾರಿಯ ಹೇಳಿಕೆಗಳು ಶಿಕ್ಷಣಕ್ಕೆ ಮಾದರಿಯಾಗುವ ಬದಲು ದ್ವಂದ್ವನಿಲುವುಗಳಾಗಿವೆ ಒಂದು ಬಾರಿ ಹೇಳಿದ ಹೇಳಿಕೆಗೂ ಇನ್ನೊಂದು ಬಾರಿ ನೀಡುವ ಹೇಳಿಕೆಗೂ ಗೊಂದಲಗಳು ಸೃಷ್ಟಿಯಾಗುತ್ತಿವೆ ಇದರಿಂದ ಸಾರ್ವಜನಿಕ ಶಿಕ್ಷಣಾಧಿಕಾರಿಗಳು ಕೂಡ ಒಂದು ರೀತಿ ಗರಬಡದವರಂತಾಗಿದ್ದಾರೆ.
ರಾಜಧಾನಿಯ ಪ್ರತಿಷ್ಠಿತ ಶಾಲೆಗಳ ಶುಲ್ಕ ವಿಚಾರವಾಗಿ ಸಾರ್ವನಿಕರು ಪ್ರತಿಭಟನೆ ನಡೆಸಿದ್ದಾರೆ. ಶಿವಾನಂದ ವೃತ್ತದಲ್ಲಿರುವ ಸಿಂದಿ ಶಾಲೆ, ನಂದಿನಿ ಬಡಾವಣೆಯಲ್ಲಿರುವ ಪ್ರೆಸಿಡೆನ್ಸಿ ಸ್ಕೂಲ್, ನಾರಾಯಣ ಇ ಟೆಕ್ನೋ ಸ್ಕೂಲ್ ಶಾಲೆಗಳಲ್ಲಿ ಪ್ರಸಕ್ತ ಸಾಲಿನ ಶಾಲಾ ಶುಲ್ಕದ ಬಗ್ಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಖಾಸಗಿ ಶಾಲೆಯೊಂದು ಹಣಕಾಸು ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿ ಪೋಷಕರಿಗೆ ಫೈನಾನ್ಸ್ ನೀಡುವ ಸಂಗತಿ ಬಯಲಿಗೆ ಬಂದಿತ್ತು.
ಈ ಬೆಳವಣಿಗೆ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಯಾರಾದರೂ ಶುಲ್ಕ ಕೇಳಿದರೆ ನನಗೆ ದೂರು ಕೊಡಿ. ಇಲ್ಲವೇ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಕೊಡಿ ಎಂದು ಹೇಳಿದ್ದರು. ಹೀಗೆ ಹೇಳಿಕೆ ನೀಡಿದ ಕೂಡಲೇ ಕಳೆದ ಮೂರು ವರ್ಷದಿಂದ ಬಾಕಿ ಶಾಲಾ ಶುಲ್ಕ ವಸೂಲಿ ಮಾಡದೇ ನರಕ ಅನುಭವಿಸುತ್ತಿರುವ ಖಾಸಗಿ ಶಾಲಾ ಸಂಸ್ಥೆಗಳು ತಿರುಗಿ ಬಿದ್ದವೆ.
ತವರಿಗೆ ಒಳ್ಳೆ ಮಗಳೂ ಅಲ್ಲ: ಅತ್ತೆ ಮನೆಗೆ ಒಳ್ಳೆ ಸೊಸೆಯೂ ಅಲ್ಲ
ಕೋರೊನಾ ಸೊಂಕು ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷದಿಂದ ಶುಲ್ಕ ಬಾಕಿಯಿದೆ. ದುಬಾರಿ ಶುಲ್ಕ ವಿಧಿಸುವ ಶಾಲೆಗಳ ವಿರುದ್ಧ ಸ್ಪಷ್ಟ ಮಾಹಿತಿ ಪಡೆದು ಶಿಕ್ಷಣ ಸಚಿವರು ಕ್ರಮ ಜರುಗಿಸಲಿ. ಇಡೀ ಖಾಸಗಿ ಶಾಲಾ ಸಂಸ್ಥೆಗಳಿಗೆ ಅನ್ವಯ ವಾಗುವಂತೆ ಶಾಲಾ ಶುಲ್ಕ ಪಾವತಿಸಬೇಡಿ. ಕೇಳಿದರೆ ದೂರು ಕೊಡಿ ಎಂದು ಹೇಳಿಕೆ ನೀಡುವುದರಿಂದ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ನಡುವೆ ಗುದ್ದಾಟಕ್ಕೆ ನಾಂದಿ ಹಾಡಿದ್ದಾರೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸಿದವು.
ಅಲ್ಲದೇ , ಮೂರು ವರ್ಷದಿಂದ ಬಾಕಿ ಇರುವ ಶಾಲಾ ಶುಲ್ಕ ಪಾವತಿಸದ ಪೋಷಕರನ್ನು ಶುಲ್ಕ ಕೇಳುವುದು ತಪ್ಪೇ ಆಗುವುದಾದರೆ, ಶಾಲೆಗಳನ್ನು ಹೇಗೆ ನಡೆಸಬೇಕು. ಈಗಾಗಲೇ ಶಾಲಾ ಶಿಕ್ಷಕರಿಗೆ ವೇತನ ಪಾವತಿಸಲಾಗದೇ ಕೆಲವು ಶಾಲಾ ಸಂಸ್ಥೆಗಳು ಮುಚ್ವುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಶಾಲಾ ಶುಲ್ಕದ ಬಗ್ಗೆ ಶಿಕ್ಷಣ ಸಚಿವರು ತೆಗೆದುಕೊಂಡ ಅವೈಜ್ಞಾನಿಕ ತೀರ್ಮಾನದಿಂದಲೇ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಈಗಿರುವಾಗ ಖಾಸಗಿ ಶಾಲೆಗಳು ಶುಲ್ಕ ವಸೂಲಿ ಕುರಿತು ಶಿಕ್ಷಣ ಸಚಿವರೇ ಹೇಳಿಕೆ ನೀಡಲಿ. ಈ ವಿಚಾರದಲ್ಲಿ ನಾವು ಮತ್ತೆ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಶಾಲಾ ಸಂಸ್ಥೆಗಳು ಎಚ್ಚರಿಕೆ ನೀಡಿದವು. ಅಂತೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ತೀರ್ಮಾನಗಳು ಅತ್ತ ತವರಿಗೆ ಒಳ್ಳೆಯ ಮಗಳು ಅಲ್ಲ, ಇತ್ತ ಅತ್ತೆ ಮನೆಗೆ ಒಳ್ಳೆಯ ಸೊಸೆಯೂ ಅಲ್ಲ ಎಂಬಂತಾಗಿದೆ.
ಈ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯೇ ಬುಡಮೇಲು ಆಗಿದೆ.