ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಕೇಂದ್ರ ಸರಕಾರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ

Share

ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಕೇಂದ್ರ ಸರಕಾರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ

by-ಕೆಂಧೂಳಿ

ತುಮಕೂರು, ಏ.01-“ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಸಾವಿರಾರು ಮುತ್ತುರತ್ನಗಳನ್ನು ನೀಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ “ಭಾರತ ರತ್ನ” ಪುರಸ್ಕಾರ ನೀಡಿ ಗೌರವಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಂಗಳವಾರ ನಡೆದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 118 ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರ ತರಬೇಕು ಎಂದು ರಾಜ್ಯದ ಜನರ ಹಾಗೂ ರಾಜ್ಯ ಸರ್ಕಾರದ ಪರವಾಗಿ ಮನವಿ ಮಾಡುತ್ತೇನೆ. ಶ್ರೀ ಶಿವಕುಮಾರ ಸ್ವಾಮೀಜಿಗಳು ಈ ಮಠದ ದಾಸೋಹ ಪರಿಕಲ್ಪನೆ ಮೂಲಕ ಅನೇಕ ಸಾಧಕರನ್ನು ಸಮಾಜಕ್ಕೆ ನೀಡಿದ ಪರಮ ಪೂಜ್ಯರು ಹಾಗೂ ಸಿದ್ದಗಂಗಾ ಮಠ ಪವಿತ್ರ ಸ್ಥಳ” ಎಂದು ಹೇಳಿದರು.

“ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ. ಹೀಗೆ ಮನುಷ್ಯತ್ವದ ಪ್ರತಿರೂಪವಾದ ಶಿವಕುಮಾರಸ್ವಾಮೀಜಿ ಅವರನ್ನು ನೆನೆಸಿಕೊಂಡು, ಅವರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ನಾವು ಇಲ್ಲಿ ಸೇರಿದ್ದೇವೆ” ಎಂದರು.

“ಗುರುವಿನಿಂದ ನಮ್ಮ ಬಂಧುಗಳು, ಗುರುವಿನಿಂದ ನಮ್ಮ ದೈವಗಳು, ಗುರುವಿನಿಂದ ಪುಣ್ಯ ಜಗಕ್ಕೆಲ್ಲ, ಗುರುವಿನಿಂದಲೇ ಮುಕ್ತಿ ಎಂದು ಸರ್ವಜ್ಞ ಹೇಳಿದ್ದಾರೆ. ನಾನು ಶ್ರೀಗಳ ಕೊನೆ ದಿನಗಳಲ್ಲಿ ಅವರನ್ನು ಚೆನ್ನೈ ಆಸ್ಪತ್ರೆಯಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಶಿವಕುಮಾರಸ್ವಾಮಿಗಳು ನಮ್ಮ ಜಿಲ್ಲೆಯವರು. ನಮ್ಮ ತಂದೆ ತಾಯಿಗಳು ನನಗೂ ಶಿವಕುಮಾರ ಎಂದು ಹೆಸರಿಟ್ಟಿರುವುದು ನನ್ನ ಭಾಗ್ಯ. ಶ್ರೀಗಳನ್ನು ದಿನವೂ ಸ್ಮರಿಸುವ ಪುಣ್ಯ ನನ್ನದು ಎಂದು ನಾನು ಭಾವಿಸುತ್ತೇನೆ” ಎಂದರು.

“ನಾವೆಲ್ಲರೂ ದೇವರ ಸ್ವರೂಪಿಯನ್ನು ಸ್ಮರಿಸುತ್ತಿದ್ದೇವೆ. ನಮ್ಮ ದೇಹಕ್ಕೆ ಹಸಿವಾದರೆ ಪ್ರಸಾದ ಬೇಕು. ಮನಸ್ಸಿಗೆ ಹಸಿವಾದರೆ ಪ್ರಾರ್ಥನೆ ಮಾಡಬೇಕು. ಮನುಷ್ಯನ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ನಾನು ಧರ್ಮ, ದೇವರ ಮೇಲೆ ನಂಬಿಕೆ ಇಟ್ಟುಕೊಂಡಿರುವವನು. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು. ನಮ್ಮ ಮನಸ್ಸಿಗೆ ಶಾಂತಿ ಸಿಗಬೇಕು ಎಂದು ನಾವು ಈ ಮಠಕ್ಕೆ ಆಗಮಿಸಿ ಶ್ರೀಗಳನ್ನು ಸ್ಮರಿಸುತ್ತಿದ್ದೇವೆ” ಎಂದು ಹೇಳಿದರು.

“ನಾವು ತಿನ್ನುವ ಅನ್ನ, ಬೇಯಿಸುವ ನೀರು, ನಮ್ಮ ದುಡಿಮೆಯ ಬೆವರಾಗಬೇಕೇ ಹೊರತು, ಬೇರೆಯವರ ಕಣ್ಣೀರಾಗಬಾರದು ಎಂದು ಶಿವಕುಮಾರಸ್ವಾಮೀಜಿ ಅವರು ಹೇಳಿದ್ದರು. ನಾನು ಅವರ ಅನೇಕ ಭಾಷಣ ಕೇಳಿದ್ದೇನೆ. ಅವರ ಪ್ರತಿಯೊಂದು ಮಾತು ಅರ್ಥಗರ್ಭಿತವಾಗಿವೆ. ಶ್ರೀಗಳು ಬಸವಣ್ಣನವರ ಅನುಯಾಯಿಯಾಗಿ ಜಾತಿ, ಧರ್ಮದ ತಾರತಮ್ಯವಿಲ್ಲದೇ, ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಮಠದ ಸುತ್ತ ಕಲ್ಲು ಬಂಡೆಗಳಿವೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ.” ಎಂದರು.

“ಅನ್ನ ಕೊಟ್ಟು, ಅಕ್ಷರ ಕಲಿಸಿದ ಮಹಾಚೇತನರಿಗೆ ನಾವು ಇಂದು ನಮಿಸಲು ಬಂದಿದ್ದೇವೆ. ನಾನು ಶಾಲೆಯಲ್ಲಿದ್ದಾಗ ನಮ್ಮ ಶಿಕ್ಷಕರು ನನಗೆ ಒಂದು ಕತೆ ಹೇಳಿದ್ದರು. ಅಲೆಕ್ಸಾಂಡರ್ ಭಾರತವನ್ನು ಗೆಲ್ಲಲು ಆಕ್ರಮಣ ಮಾಡುವ ಮುನ್ನ ಗುರುಗಳನ್ನು ಭೇಟಿ ಮಾಡಲು ಹೋದಾಗ, ಅವರ ಗುರು ಒಂದು ಮಾತು ಹೇಳಿದರು. ಭಾರತದಿಂದ ನೀನು ಬರುವಾಗ ರಾಮಾಯಣ, ಮಹಾಭಾರತ ಗ್ರಂಥ, ಕೃಷ್ಣನ ಕೊಳಲು, ಗಂಗಾ ಜಲ ಹಾಗೂ ತತ್ವಜ್ಞಾನಿಯನ್ನು ನಿನ್ನ ಜತೆ ತೆಗೆದುಕೊಂಡು ಬಾ, ಈ ಐದು ವಸ್ತುಗಳನ್ನು ನೀನು ತಂದರೆ ಇಡೀ ಭಾರತವನ್ನು ಗೆದ್ದುಕೊಂಡು ಬಂದಂತೆ ಎಂದು ಹೇಳಿದರು. ಅದೇ ರೀತಿ ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಇಡೀ ವಿಶ್ವದ ಜನ ನಮ್ಮ ಆಚಾರ ವಿಚಾರಗಳನ್ನು ನಂಬಿ ಶರಣಾಗಿದ್ದಾರೆ” ಎಂದರು.

“ಧರ್ಮ ಎಂದರೆ ಮನುಷ್ಯತ್ವ. ಮನುಷ್ಯತ್ವ ರೂಪಿಸುವ ಪವಿತ್ರ ಕೆಲಸವನ್ನು ಶ್ರೀಗಳು ಮಾಡಿದ್ದಾರೆ. ಈ ಮಠದಲ್ಲಿ ಬಡವ ಶ್ರೀಮಂತ, ಜಾತಿ ಧರ್ಮ, ಮೇಲು ಕೀಳು ತಾರತಮ್ಯವಿಲ್ಲ. ಹೀಗಾಗಿ ಈ ಮಠಕ್ಕೆ ದೊಡ್ಡ ಹೆಸರಿದೆ. ಇದನ್ನು ನಾವು ನೀವು ಉಳಿಸಿಕೊಂಡು ಹೋಗಬೇಕು” ಎಂದು ತಿಳಿಸಿದರು.

Girl in a jacket
error: Content is protected !!