ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ನಿಧನ

Share

ಬೆಂಗಳೂರು,ಆ,೧೬- ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ (೮೧) ವಿಧಿವಶರಾಗಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಹೇಳಿಕೆಗಳಿಂದಲೇ ಸ್ವಾಮೀಜಿ ಸುದ್ದಿ ಮಾಡಿದ್ದರು. ಈ ಹೇಳಿಕೆ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಿತ್ತು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ತಡರಾತ್ರಿ ವಿಧಿವಶರಾದರು. ಬೆಂಗಳೂರಿನ ಕೆಂಗೇರಿಯಲ್ಲಿ ಮಠವನ್ನು ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಕ ಕ್ಷೇತ್ರಕ್ಕೆ ಸ್ವಾಮೀಜಿ ಅಪಾರ ಕೊಡುಗೆಯನ್ನು ನೀಡಿದ್ದರು.

ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಕೆಲವು ದಿನಗಳ ಹಿಂದೆ ಶ್ರೀ ನಿಶ್ಚಲಾನಂದ ಸ್ವಾಮೀಜಿಯನ್ನು ಶ್ರೀ ಮಠದ ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು, ಸಿದ್ದರಾಮಯ್ಯ ಕುರ್ಚಿ ಬಿಟ್ಟುಕೊಡಬೇಕು, ಮುಸ್ಲಿಮರಿಗೆ ಮತದಾನದ ಹಕ್ಕು ನಿರಾಕರಿಸಬೇಕು ಮುಂತಾದ ಹೇಳಿಕೆಗಳಿಂದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಸುದ್ದಿಯಲ್ಲಿದ್ದರು.

ಎಚ್.ಡಿ.ದೇವೇಗೌಡರ ಸಂತಾಪ: ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಸಂಸ್ಥಾಪಕ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖವಾಯಿತು’ ಎಂದು ಹೇಳಿದ್ದಾರೆ.

‘ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ ಗುರುಗಳಿಗೆ, ಭಗವಂತನು ಸದ್ಗತಿ ಪ್ರಾಪ್ತಿಸಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಆಪಾರ ಸಂಖ್ಯೆಯ ಭಕ್ತರಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ’ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Girl in a jacket
error: Content is protected !!