ವಿಜಯನಗರ ಗತವೈಭವ ನೆನಪಿಸಿದ ಹಂಪಿ ಉತ್ಸವ
ವರದಿ- ಅರುಣ್ ಕುಮಾರ್ ಯಾದವ್
ವಿಜಯನಗರ,ಮಾ,01-ಮೂರು ದಿನಗಳ ಕಾಲ ನಡೆಯುವ ಅದ್ದೂರಿ ಹಂಪಿ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು ಸಾವಿರಾರು ಜನ ಉತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸುತ್ತಿದ್ದಾರೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ವಿಜಯನಗರ ಜಿಲ್ಲಾಡಳಿತ ಜಂಟಿಯಾಗಿ ಸೇರಿ ಮೂರು ದಿನಗಳ ಅದ್ಧೂರಿ ಹಂಪಿ ಉತ್ಸವನನ್ನು ಆಯೋಜಿಸಿದೆ. ವಿಜಯನಗರ ಸಾಮ್ರಾಜ್ಯದ ಗತವೈಭವ ಮರುಸೃಷ್ಟಿಯಾಗಿದೆ. ಕಲ್ಲು ಕಲ್ಲಿನಲ್ಲೂ ಸಂಗೀತ ಮಾರ್ದನಿಸುತ್ತಿದೆ. ಒಂದೊಂದು ಶಿಲ್ಪ ಕಲಾಕೃತಿ ಒಂದೊಂದು ಕತೆ ಹೇಳುತ್ತಿವೆ. ವಿಜಯನಗರ ಹಂಪಿಯಲ್ಲಿ ಸ್ವರ್ಗವೇ ಸೃಷ್ಟಿಯಾಗಿದೆ. ಐತಿಹಾಸಿಕ ಹಂಪಿಯಲ್ಲಿ ಮೂರು ದಿನದ ಉತ್ಸವ ಆರಂಭವಾಗಿದೆ.
ಸಚಿವರು, ಸಿನಿ ತಾರೆಯರಿಂದ ಹಂಪಿ ಉತ್ಸವ ಉದ್ಘಾಟನೆ
ಕಳೆದ ದಿನ ಸಂಜೆ ಸಚಿವ ಶಿವರಾಜ್ ತಂಗಡಗಿ, ಜಮೀರ್ ಅಹ್ಮದ್, ನಟ ರಮೆಶ್, ನಟಿಯರಾದ ಪ್ರೇಮ, ಪೂಜಾ ಗಾಂಧಿ ಸೇರಿದಂತೆ ಹಲವರು ಡೋಲು ಬಾರಿಸುವ ಮೂಲಕ ಉತ್ಸವಕ್ಕೆ ಚಾಲನೆಯನ್ನು ನೀಡಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೇ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಈ ವೇಳೆ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಜಮೀರ್ ಅಹ್ಮದ್, ‘ಸಿಎಂ ಸಿದ್ದರಾಮಯ್ಯ ಅವರು ಹಂಪಿ ಉತ್ಸವಕ್ಕೆ ಬರಬೇಕಿತ್ತು. ಅವರು ನನ್ನೊಂದಿಗೆ ಮಾತನಾಡುವಾಗ ಈ ಬಾರಿ ಹಂಪಿ ಉತ್ಸವ ನೋಡಬೇಕು. ಬರುವ ಆಸೆ ತುಂಬಾ ಇದೆ. ಆದರೆ ನನಗೆ ಕಾಲು ನೋವಿನಿಂದಾಗಿ ಉತ್ಸವಕ್ಕೆ ಬರಲು ಆಗುವುದಿಲ್ಲ. ಹಾಗಾಗಿ ನನ್ನ ಕಡೆಯಿಂದ ಕ್ಷಮೆಯನ್ನು ಕೇಳು ಎಂದು ಹೇಳಿದ್ದಾರೆ’ ಎಂದು ಹೇಳಿದರು.
ಉತ್ಸವದಲ್ಲಿ ಐದು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರಿದ್ದರು. ನಟ ರಮೆಶ್, ಪೂಜಾ ಗಾಂಧಿ ಮತ್ತು ಪ್ರೇಮ ಹಾಡು ಹಾಡಿ ನೆರೆದವರನ್ನು ರಂಜಿಸಿದರು. ಅಲ್ಲದೆ ಸಂಜೆ ಕಾರ್ಯಕ್ರಮದಲ್ಲಿ ಅನೇಕ ಜನ ಭಾಗಿಯಾಗಿದ್ದು ಕಂಡು ಬಂದಿದೆ. ಅಲ್ಲದೆ ಮೂರು ದಿನ ದೂರದೂರುಗಳಿಂದಲೂ ಜನ ಸೇರುವ ಸಾಧ್ಯತೆ ಇದೆ
ಅಲ್ಲದೆ ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿಜೇತ ಹನುಮಂತ ಹಂಪಿ ಉತ್ಸವದಲ್ಲಿ ಭಾಗಿಯಾಗಿ ಜನರನ್ನು ರಂಜಿಸಿದ್ದಾರೆ. ಹನುಮಂತ ಹಾಗೂ ತಂಡದವರೂ ಕೂಡ ಈ ಅದ್ದೂರಿ ಉತ್ಸವದಲ್ಲಿ ಭಾಗಿಯಾಗಿ ಜಾನಪದ ಗೀತೆ, ತತ್ವಪದಗಳನ್ನು ಹಾಡಿದರು. ಹನುಮಂತನ ಹಾಡಿಗೆ ಜನ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದ್ದು ಕಂಡು ಬಂತು.
ಗಾಯಕ ರಾಜೇಶ್ ಕೃಷ್ಣನ್ ಹಾಡು ನೃತ್ಯ
ಇನ್ನೂ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ತಂಡದ ಹಾಡುಗಳಿಗೆ ಜನ ತಲೆ ತೂಗಿದ್ದಾರೆ. ಇವತ್ತು ಶನಿವಾರ ನಾಳೆ ಭಾನುವಾರ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮವೇ ಹಂಪಿ ಉತ್ಸವದಲ್ಲಿ ಭಾಯಿಯಾಗುವ ಸಾಧ್ಯತೆ ಇದೆ. ಪ್ರತೀ ವರ್ಷದಂತೆ ಈ ಬಾರಿಯೂ ಹಂಪಿಯಲ್ಲಿ ವಿಜಯನಗರದ ಸಾಮ್ರಾಜ್ಯದ ವೈಭವ ಮೇಳೈಯಿಸಿದೆ.