ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣ : ಡಿ.ಕೆ. ಶಿವಕುಮಾರ್ ಘೋಷಣೆ

Share

ಬೆಂಗಳೂರು, ಮೇ 22-“ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಇನ್ನುಮುಂದೆ ಈ ಜಿಲ್ಲೆಯು ಬೆಂಗಳೂರು ದಕ್ಷಿಣ ಎಂದು ಕರೆಯಲ್ಪಡುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಗುರುವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಮುಂದುವರಿಯಲಿದೆ. ಕೇವಲ ಜಿಲ್ಲೆಯ ಹೆಸರನ್ನು ಮಾತ್ರ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲಾಗಿದೆ. ಈ ಹಿಂದೆ ಇದು ಬೆಂಗಳೂರು ಜಿಲ್ಲೆಯಾಗಿತ್ತು. ಆಡಳಿತಾತ್ಮಕ ದೃಷ್ಟಿಯಿಂದ ಈ ಹೆಸರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಈ ಮರುನಾಮಕರಣ ಮಾಡುತ್ತಿರುವ ವಿಚಾರವನ್ನು ತಿಳಿಸಲು ಸಂತೋಷವಾಗುತ್ತಿದೆ” ಎಂದು ತಿಳಿಸಿದರು.

*ಬಿಡಿಎ ನಿವೇಶನದಾರರ ತೆರಿಗೆ ಬಡ್ಡಿ ವಿನಾಯಿತಿಗೆ ಒಟಿಎಸ್*

“ಬೆಂಗಳೂರಿನಲ್ಲಿ ಅನೇಕ ಸಂಘ ಸಂಸ್ಥೆಗಳು, ದೇವಾಲಯಗಳು ಬಿಡಿಎ ವ್ಯಾಪ್ತಿಯಲ್ಲಿ ನಿವೇಶನ ತೆಗೆದುಕೊಂಡಿದ್ದು, ಅವರಿಗೆ ಒನ್ ಟೈಮ್ ಇನ್ಟ್ರೆಸ್ಟ್ ಬೆನಿಫಿಟ್ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ. 125 ದಿನಗಳ ಒಳಗಾಗಿ ಅವರು ಬಾಕಿ ಇರುವ ತೆರಿಗೆ ಪಾವತಿಸಿದರೆ ಬಡ್ಡಿ ವಿನಾಯಿತಿ ನೀಡಲಾಗುವುದು” ಎಂದು ತಿಳಿಸಿದರು.

*ಮೆಟ್ರೋ ಮೂರನೇ ಹಂತಕ್ಕೆ ಅನುಮತಿ*

“ಇನ್ನು ಟನಲ್ ವಿಚಾರವಾಗಿ ಟೆಂಡರ್ ಕರೆಯುವ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಹೈಬ್ರಿಡ್ ಮಾದರಿಯಲ್ಲಿ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಸಿಎಂ ಜತೆ ತಾಂತ್ರಿಕ ಅಂಶ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಈ ಟೆಂಡರ್ ಜಾಗತಿಕ ಟೆಂಡರ್ ಆಗಿರಲಿದೆ. ಮೆಟ್ರೋ ವಿಚಾರವಾಗಿ ಮೂರನೇ ಹಂತದ ಮೆಟ್ರೋ ಯೋಜನೆಗೆ ಅಂದಾಜು ವೆಚ್ಚ ₹40,424 ಕೋಟಿಗೆ ಅನುಮತಿ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಾರಂಭ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

*ಕಸ ವಿಲೇವಾರಿಗೆ 33 ಪ್ಯಾಕೇಜ್*

“ಈ ಹಿಂದೆ ಬಿಜೆಪಿ ಅವಧಿಯಲ್ಲಿ ಕಸ ವಿಲೇವಾರಿಗೆ 98 ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು. ಈ ವಿಚಾರವಾಗಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿ ಮುಂದಿನ ನಾಲ್ಕು ತಿಂಗಳಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಮಾಡುವಂತೆ ಈಗ ಕೋರ್ಟ್ ತೀರ್ಪು ನೀಡಿದೆ. ನಾವು ಪ್ರತಿ ಕ್ಷೇತ್ರದಲ್ಲೂ ಒಂದೊಂದು ಪ್ಯಾಕೇಜ್ ಮಾಡಲು ಮುಂದಾಗಿದ್ದು, ದೊಡ್ಡ ಕ್ಷೇತ್ರಗಳಲ್ಲಿ ಎರಡು ಪ್ಯಾಕೇಜ್ ಸೇರಿದಂತೆ 33 ಪ್ಯಾಕೇಜ್ ಮೂಲಕ ಕಸ ವಿಲೇವಾರಿ ಮಾಡಲಾಗುವುದು. ಈ ಕುರಿತ ಟೆಂಡರ್ ಶೀಘ್ರವೇ ಕರೆಯಲಾಗುವುದು. ಇದಕ್ಕಾಗಿ 7 ವರ್ಷಗಳ ಅವಧಿಗೆ ₹ 4,790 ಕೋಟಿ ವೆಚ್ಚದಲ್ಲಿ ಕಸ ವಿಲೇವಾರಿ ಯೋಜನೆ ಮಾಡಲಾಗುತ್ತಿದೆ. ಈಗಿರುವ ವ್ಯವಸ್ಥೆಗೂ, ಹೊಸ ವ್ಯವಸ್ಥೆಗೂ ಬೇಕಾದಷ್ಟು ವ್ಯತ್ಯಾಸಗಳಿವೆ. ಕಸ ವಿಂಗಡಣೆ, ವಾಹನಗಳ ಜವಾಬ್ದಾರಿ, ಕಟ್ಟಡ ತ್ಯಾಜ್ಯ ಪ್ರತ್ಯೇಕತೆ ಸೇರಿದಂತೆ ಅನೇಕ ಜವಾಬ್ದಾರಿ ನೀಡಲಾಗುವುದು” ಎಂದು ವಿವರಿಸಿದರು.

 

Girl in a jacket
error: Content is protected !!