ರಾಜ್ಯಕ್ಕೆ ಸಿದ್ದರಾಮಯ್ಯನವರ ಕೊಡುಗೆಏನು?: ವಿಜಯೇಂದ್ರ ಪ್ರಶ್ನೆ
by-ಕೆಂಧೂಳಿ
ಮೈಸೂರು,ಏ,07-: ಕಾಂಗ್ರೆಸ್ಸಿನದು ಬಡವರ ವಿರೋಧಿ, ಜನವಿರೋಧಿ, ರೈತ ವಿರೋಧಿ, ಹಿಂದೂ ವಿರೋಧಿ ದರಿದ್ರ ಸರಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದರು.
ಜನಾಕ್ರೋಶ ಯಾತ್ರೆ ಆರಂಭದ ಸಂಬಂಧ ಇಂದು ಇಲ್ಲಿನ ಗಾಂಧಿ ಸ್ಕ್ವೇರ್ ನಲ್ಲಿ ಬಹಿರಂಗ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಹತ್ತಾರು ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ನೀವೇನು ಅಭಿವೃದ್ಧಿ ಕೆಲಸ ಮಾಡಿದ್ದೀರೆಂದು ರಾಜ್ಯದ ಜನರು ಕೇಳುತ್ತಿದ್ದಾರೆ ಎಂದರು.
ಸ್ವಕ್ಷೇತ್ರ ಇರುವ ಮೈಸೂರು ಜಿಲ್ಲೆಗೆ ಮುಖ್ಯಮಂತ್ರಿಗಳು ಅಭಿವೃದ್ಧಿಗೆ ಹಣವನ್ನೇ ನೀಡಿಲ್ಲ; ಯಡಿಯೂರಪ್ಪ ಅವರು ಹಿಂದಿನ ಬಿಜೆಪಿ ಆಡಳಿತದಲ್ಲಿ ಸಿಎಂ ಆಗಿದ್ದಾಗ ಸಾವಿರಾರು ಕೋಟಿ ರೂ. ಕೊಟ್ಟಿದ್ದರು ಎಂದು ವಿವರಿಸಿದರು. ಬಿಜೆಪಿ ಪ್ರಾರಂಭ ಮಾಡಿದ ಈ ಹೋರಾಟವು ನಾಡಿನ ಜನರ ಧ್ವನಿಯಾಗಲಿದೆ ಎಂದು ಎಚ್ಚರಿಸಿದರು.
ಬೆಲೆ ಏರಿಕೆ ಮೂಲಕ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಸರಕಾರ ಅಳವಡಿಸಿಕೊಂಡಿದೆ. ಜನವಿರೋಧಿ ಕಾಂಗ್ರೆಸ್ ಸರಕಾರ ಮತ್ತು ಜನವಿರೋಧಿ ಮುಖ್ಯಮಂತ್ರಿಗಳ ಧೋರಣೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲು ಈ ಯಾತ್ರೆ ನಡೆಯುತ್ತಿದೆ ಎಂದು ವಿವರಿಸಿದರು.
ಅಧಿಕಾರಕ್ಕೆ ಬರುವ ಮೊದಲು ಅಹಿಂದ ಎಂದು ಭಾಷಣ ಮಾಡುತ್ತಿದ್ದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಬಳಿಕ ಹಿಂದುಳಿದ ಸಮಾಜಗಳನ್ನೇ ಮರೆತರು. ಅವರಿಗೆ ಯಾವುದೇ ಯೋಜನೆಗಳನ್ನು ಕೊಟ್ಟಿಲ್ಲ. ದಲಿತರ ಅಭ್ಯುದಯಕ್ಕೆ ಬಳಕೆ ಆಗಬೇಕಿದ್ದ 38 ಸಾವಿರ ಕೋಟಿ ಎಸ್ಇಟಿ, ಟಿಎಸ್ಪಿ ಹಣವನ್ನು ಸಿದ್ದರಾಮಯ್ಯನವರು ಬೇರೆ ಕಡೆ ವರ್ಗಾವಣೆ ಮಾಡಿದ್ದಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರು ಕೇವಲ ಅಲ್ಪಸಂಖ್ಯಾತ ನಾಯಕರಾಗಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ್ , ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ , ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ ರವಿ, ಮಾಜಿ ಸಚಿವ ಬಿ. ಶ್ರೀರಾಮುಲು, ಸಂಸದ ಯದುವೀರ್ ಕೃಷ್ಣರಾಜದತ್ತ ಒಡೆಯರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ, ಶಾಸಕರಾದ ಭೈರತಿ ಬಸವರಾಜ್ ಹಾಗೂ ಟಿ.ಎಸ್.ಶ್ರೀವತ್ಸ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮೈಸೂರು ನಗರ ಅಧ್ಯಕ್ಷ ಎಲ್.ನಾಗೇಂದ್ರ, ಮೈಸೂರು ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮುಂತಾದ ಅನೇಕ ಹಿರಿಯ ನಾಯಕರು ಹಾಗೂ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸುತ್ತಿರುವ ‘ಜನಾಕ್ರೋಶ ಯಾತ್ರೆ’ ಸಂಬಂಧ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಈ ಯಾತ್ರೆಯು ಮೈಸೂರಿನ ಎಂಡಿಸಿಸಿ ಬ್ಯಾಂಕ್ ವೃತ್ತದಿಂದ (ಲಷ್ಕರ್ ಪೆÇಲೀಸ್ ಠಾಣೆ ಸರ್ಕಲ್) ಪ್ರಾರಂಭಗೊಂಡಿತು. ಬಳಿಕ ಅಶೋಕ ರಸ್ತೆ ಮಾರ್ಗವಾಗಿ ಮುಂದುವರೆಯಿತು.