ರಾಜಕೀಯದವರನ್ನು ಒಳಗೆ ಬಿಟ್ಟುಕೊಳ್ಳದಿದ್ದರೆ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತವೆ: ಡಿ.ಕೆ. ಶಿ ಕಿವಿಮಾತು
by-ಕೆಂಧೂಳಿ
ಮಳವಳ್ಳಿ, ಮಾ. 09-“ಶಿಕ್ಷಣ ಸಂಸ್ಥೆಯ ಒಳಗೆ ರಾಜಕೀಯದವರನ್ನು ಸೇರಿಸಬೇಡಿ. ಆಗ ಮಾತ್ರ ಆ ಶಿಕ್ಷಣ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯುತ್ತವೆ. ಇಲ್ಲದಿದ್ದರೇ ಶಿಕ್ಷಣದ ಗುಣಮಟ್ಟ ಹಾಳಾಗುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಿವಿಮಾತು ಹೇಳಿದರು.
ಮಳವಳ್ಳಿಯಲ್ಲಿ ಬಿಎಂ ಎಜುಕೇಶನ್ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ಬಿಎಂ ಪಬ್ಲಿಕ್ ಶಾಲಾ ಕಟ್ಟಡ, ಆಡಳಿತ ಕಟ್ಟಡ ಹಾಗೂ ಸಾಯಿಬಾಬಾ ಮಂದಿರವನ್ನು ಭಾನುವಾರ ಲೋಕಾರ್ಪಣೆ ಮಾಡಿ ಡಿಸಿಎಂ ಮಾತನಾಡಿದರು.
“ದಳ, ಬಿಜೆಪಿ,ಕಾಂಗ್ರೆಸ್, ರೈತ ಸಂಘ – ಹೀಗೆ ಯಾವುದೇ ಪಕ್ಷದ ರಾಜಕಾರಣಿಗಳನ್ನು ನಿಮ್ಮ ಶಿಕ್ಷಣ ಸಂಸ್ಥೆಯ ಒಳಗೆ ಸೇರಿಸಬೇಡಿ. ಶಾಲಾ ಶುಲ್ಕ ಕಡಿಮೆ ಮಾಡಿ ಎನ್ನುವ ಶಿಫಾರಸ್ಸು ತರುವುದರಿಂದ ಶಾಲೆಗಳನ್ನು ನಡೆಸಲು ಆಗುವುದಿಲ್ಲ. ಪೋಷಕರು ಸಹಕರಿಸಿದರೆ ಮಾತ್ರ ಸಂಸ್ಥೆ ಬೆಳೆಯುತ್ತದೆ. ಇಲ್ಲದಿದ್ದರೆ ಶಿಕ್ಷಣದ ಗುಣಮಟ್ಟ ಹಾಳಾಗುತ್ತದೆ” ಎಂದರು.
“ಮಕ್ಕಳು ಗ್ಲೋಬಲ್ ಮಟ್ಟಕ್ಕೆ ಸ್ಪರ್ಧಿಸಬೇಕು. ನೀವು ಎಲ್ಲಿ ಓದಿದ್ದೀರಿ ಎಂದು ಯಾರೂ ಕೇಳುವುದಿಲ್ಲ. ಆದರೆ ನಿಮ್ಮ ಅಂಕ ಮತ್ತು ಕೌಶಲಗಳನ್ನು ಕೇಳುತ್ತಾರೆ. ಅದಕ್ಕೆ ಶಿಕ್ಷಣವು ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಭರವಸೆ ಮೂಡಿಸಬೇಕು” ಎಂದು ಹೇಳಿದರು.
“ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸಲಾಗುವುದು. ಸಿಎಸ್ ಆರ್ ಹಣ ಬಳಸಿ ಈಗಾಗಲೇ ರಾಜ್ಯದಲ್ಲಿ 30 ಶಾಲೆಗಳ ಕಾರ್ಯಾರಂಭ ಮಾಡಲಾಗಿದೆ. ನನ್ನ ಕ್ಷೇತ್ರದಲ್ಲಿ ಟೊಯೋಟೊ, ಪ್ರೆಸ್ಟೀಜ್ ಕಂಪೆನಿಗಳ ಸಹಯೋಗದಲ್ಲಿ 5-6 ಕೆಪಿಎಸ್ ಶಾಲೆಗಳಿಗೆ ಶಂಕುಸ್ಥಾಪನೆ ಮಾಡಿದ್ದೇನೆ. ಇಡೀ ರಾಜ್ಯದಾದ್ಯಂತ 2 ಸಾವಿರ ಶಾಲೆಗಳ ನಿರ್ಮಾಣ ಮಾಡುವುದು ನಮ್ಮ ಗುರಿ” ಎಂದರು.
“ಶಿಕ್ಷಣವನ್ನು ಒಂದಷ್ಟು ಜನ ವ್ಯಾಪಾರೀಕರಣ ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಮಕ್ಕಳು ಸ್ಪರ್ದಿಸಬೇಕು ಎನ್ನುವ ಮನೋಭಾವನೆ ಬೆಳೆದಿದೆ. ಮಕ್ಕಳು ಸಹ ಬಹಳ ತೀಕ್ಷ್ಣವಾಗಿ ಯೋಚನೆ ಮಾಡುತ್ತಾರೆ. ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕ ಬೆರಳ ತುದಿಯಲ್ಲಿ ಎಲ್ಲವೂ ಸಿಕ್ಕಿಬಿಡುತ್ತದೆ” ಎಂದು ಹೇಳಿದರು.
“ರಾಮಕೃಷ್ಣ ಅವರು ಇದೇ ಬಂಡವಾಳವನ್ನು ಬೆಂಗಳೂರಿನಲ್ಲಿ ಹಾಕಿದ್ದರೇ ಶಾಲೆ ಇನ್ನೂ ಚೆನ್ನಾಗಿ ಬೆಳೆಯುತ್ತಿತ್ತು. ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು ಎಂದು ಇಲ್ಲಿ ಪ್ರಾರಂಭ ಮಾಡಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಯಿಂದ ಪರಿಣಿತರನ್ನು ಕರೆಸಿ ಇಲ್ಲಿನ ಸಿಬ್ಬಂದಿಗೆ ಆಡಳಿತಾತ್ಮಕ ತರಬೇತಿ ನೀಡುವ ವ್ಯವಸ್ಥೆ ಮಾಡುತ್ತೇನೆ” ಎಂದು ಭರವಸೆ ನೀಡಿದರು.
“ಈ ಶಾಲೆಯಲ್ಲಿ ವರ್ಷಕ್ಕೆ 45 ಸಾವಿರ ಶುಲ್ಕವಿಟ್ಟಿದ್ದಾರೆ. ಇದರಿಂದ ಶಿಕ್ಷಕರಿಗೆ ಸಂಬಳ ನೀಡಲು ಕಷ್ಟವಾಗುತ್ತದೆ. ಉತ್ತಮ ಗುಣಮಟ್ಟದ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಿ. ಏಕೆಂದರೆ ಈಗ ಯಾರೂ ಸಹ ಯಾವುದರಲ್ಲಿಯೂ ಕಡಿಮೆಯಿಲ್ಲ. ಮಂಡ್ಯ ಜಿಲ್ಲೆ ಫಲಿತಾಂಶದಲ್ಲಿ 17 ನೇ ಸ್ಥಾನಕ್ಕೆ ಕುಸಿದಿದೆ. ಇದನ್ನು ಮೇಲಕ್ಕೆ ಎತ್ತುವ ಕೆಲಸ ಮಾಡಬೇಕು. ಅದಕ್ಕೆ ಉತ್ತಮ ಶಾಲೆಗಳ ಅಗತ್ಯವಿದೆ” ಎಂದರು.
“ಶಂಕರೇಗೌಡರು, ನಾಗೇಗೌಡರು, ಮಾದೇಗೌಡರು, ಮಂಚೇಗೌಡರು, ಎಸ್.ಎಂ.ಕೃಷ್ಣ ಅವರು ಮಂಡ್ಯದಲ್ಲಿ ಅತ್ಯುತ್ತಮ ವಿದ್ಯಾಸಂಸ್ಥೆಗಳನ್ನು ಕಟ್ಟಿದ್ದಾರೆ. ಇದೇ ಮಾದರಿಯಲ್ಲಿ ಸ್ನೇಹಿತ ರಾಮಕೃಷ್ಣ ಅವರು ಶಾಲೆ ನಿರ್ಮಾಣ ಮಾಡಿದ್ದಾರೆ. ಪೋಷಕರು ಶಾಲಾ ಶುಲ್ಕದಲ್ಲಿ ಹೆಚ್ಚು ರಿಯಾಯಿತಿ ಕೇಳದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು” ಎಂದರು.
“ನನಗೂ ಶಿಕ್ಷಣಕ್ಕೂ ಅವಿನಾಭಾವ ಸಂಬಂಧ. ನಾನು ಪದವೀಧರನಾಗಿದ್ದು 2007- 08 ರಲ್ಲಿ. ಏಕೆಂದರೆ ನನ್ನ ಮಕ್ಕಳು ಬೆಳೆದು ದೊಡ್ಡವರಾದಾಗ ನನ್ನನ್ನು ಓದು ಎಂದು ಹೇಳುತ್ತೀಯಾ ನೀನೇ ಓದಿಲ್ಲ ಎನ್ನುತ್ತಾರೆ ಎನ್ನುವ ಕಾರಣಕ್ಕೆ ತಡವಾಗಿಯಾದರೂ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಪದವಿ ಪಡೆದೆ. ನನಗೆ ಯಾವ ಹುದ್ದೆ ಸಿಕ್ಕಾಗಲೂ ಅಷ್ಟೊಂದು ಸಂತೋಷವಾಗಿರಲಿಲ್ಲ” ಎಂದು ಹೇಳಿದರು.
“ರುಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಎಂದರೆ ಅದು ವಿದ್ಯೆ. ನೀವು ಕಲಿಯುವ ವಿದ್ಯೆಯನ್ನು ಬೇರೆ ಯಾರೂ ಕಸಿಯಲು ಸಾಧ್ಯವಿಲ್ಲ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಷ್ಟೇ ನಮ್ಮ ಉದ್ದೇಶ” ಎಂದರು.
 
                                         
					
										
												
				
 
									 
									