ಮಂಡ್ಯ,ಅ,16- ಜಿಲ್ಲೆಯ ಹೆಗ್ಗುರುತುಗಳಲ್ಲಿ ಒಂದಾಗಿರುವ ಮೈಶುಗರ್ ಶಾಲೆಯನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಶೀಘ್ರವೇ 10 ಕೋಟಿ ರೂ. ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಮಂಡ್ಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಈ ಶಾಲೆಯನ್ನು ಕೊಡುವುದು ಬೇಡ ಎಂದು ಹೇಳಿದ್ದೇನೆ. ಅಲ್ಲದೆ, ಶಾಲೆಯ ಅಭಿವೃದ್ಧಿಗೆ ನೆರವು ನೀಡುವ ಭರವಸೆ ನೀಡಿದ್ದೆ. ಅದರ ವಿಚಾರದಲ್ಲಿ ನಮ್ಮ ತಂಡವೊಂದು ಮಂಡ್ಯದಲ್ಲಿ ಕೆಲಸ ಮಾಡುತ್ತಿದೆ. ಯಾರು ಅದರ ಬಗ್ಗೆ ಲಘುವಾಗಿ ಮಾತನಾಡುವ ಅವಶ್ಯಕತೆ ಇಲ್ಲ. ಮೈಷುಗರ್ ಶಾಲೆಯಿಂದ ಈಗಾಗಲೇ 10 ಕೋಟಿ ರೂ. ಅನುದಾನಕ್ಕೆ ಅರ್ಜಿ ಕೊಟ್ಟಿದ್ದಾರೆ. ಸದ್ಯದಲ್ಲೆ ಆ ಹಣ ಬಿಡುಗಡೆಯಾಗಲಿದೆ. ಯಾವುದೇ ಅನುಮಾನ ಬೇಡ ಎಂದು ಕೇಂದ್ರ ಸಚಿವರು ಹೇಳಿದರು.
ಕೆಲ ದಿನಗಳಿಂದ ಕಾರಣಾಂತರಗಳಿಂದ ಮಂಡ್ಯಕ್ಕೆ ಭೇಟಿ ಕೊಡಲು ಆಗಿರಲಿಲ್ಲ. ಆದರೂ ನಾನು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು ಪ್ರತಿನಿತ್ಯ ಜಿಲ್ಲೆಯ ಮಾಹಿತಿ ಪಡೆಯುತ್ತಿದ್ದೆ. ಜಯಚಾಮರಾಜೇಂದ್ರ ಮಾರುಕಟ್ಟೆ ಮಳಿಗೆ ಉದ್ಘಾಟನೆಗೆ ಬಂದಿದ್ದೇನೆ. ಕೆಲಸದ ಒತ್ತಡದಲ್ಲೂ ಜಿಲ್ಲೆಗೆ ಹೆಚ್ಚು ಸಮಯ ಮೀಸಲು ಇಡುತ್ತೇನೆ. ಜತೆಗೆ ರಾಜ್ಯದ ಪ್ರವಾಸ ಮಾಡುವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಅನೇಕ ಯೋಜನೆಗೆ ಚಾಲನೆ ಕೊಟ್ಟಿದ್ದೇನೆ. ಈ ವರ್ಷ ಶಾಲಾ ಕಟ್ಟಡ, ಬಸ್ ನಿಲ್ದಾಣಗಳನ್ನು ಸಿಎಸ್’ಆರ್ ನಿಧಿಯ ಮೂಲಕ ಅನುಷ್ಠಾನ ಮಾಡುತ್ತಿದ್ದೇನೆ. ಮೈಶುಗರ್ ಶಾಲೆ ಅಭಿವೃದ್ಧಿಗೂ ಅದೇ ನಿಧಿಯಿಂದ ಹಣ ನೀಡಲಾಗುತ್ತಿದೆ. ಅನುದಾನ ತರಿಸಿ ಕೊಡುವ ಜವಾಬ್ದಾರಿ ನನ್ನದು ಮೈಶುಗರ್ ಶಾಲೆಗೆ ಇತಿಹಾಸ ಇದೆ. ಯಾರೂ ಸಣ್ಣದಾಗಿ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಸಚಿವರು ಹೇಳಿದರು.
*ಮಾರುಕಟ್ಟೆ ಮಳಿಗೆಗಳ ಉದ್ಘಾಟನೆ*
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಮಂಡ್ಯ ನಗರಸಭೆ ವತಿಯಿಂದ ನಗರದ ಜಯಚಾಮರಾಜೇಂದ್ರ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಾರಾಟ ಮಳಿಗೆಗಳ ಸಮುಚ್ಚಯವನ್ನು ಉದ್ಘಾಟಿಸಿದರು.
ಮಂಡ್ಯದ ಅತ್ಯಂತ ಹಳೆಯ ಮಾರುಕಟ್ಟೆ, ಗೊಂದಲಕ್ಕೆ ಅವಕಾಶ ಆಗದಂತೆ ೧೨೭ ಮಳಿಗೆಗಳ ಹಂಚಿಕೆ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ಬಗ್ಗೆ ಸೂಕ್ತ ಸ್ಥಳ ಹುಡುಕುವಂತೆ ಜಿಲ್ಲಾಧಿಕಾರಿಗಳಿಗೆ ಅವರಿಗೆ ತಿಳಿಸಿದ್ದೇನೆ. ಅವರು ಜಾಗಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ. ಕೈಗಾರಿಕೆ ಸ್ಥಾಪನೆಗೆ ಮೂಲಸೌಕರ್ಯ ಕೊಡುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು. ಉಳಿದಂತೆ ನಾನು ಯಾರಿಗಾದರೂ ಖಾಸಗಿ ಹೂಡಿಕೆದಾರಿಗೆ ಹೇಳಿ ಕೈಗಾರಿಕೆ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು