ಮಾಜಿ ಸಭಾಪತಿ ಎನ್.ತಿಪ್ಪಣ್ಣ ನಿಧನ

Share

ಬೆಂಗಳೂರು, ಜು 11-ಸರಳ ಸಜ್ಜನ ಹಾಗೂ ನಿಷ್ಕಂಳಕ ವ್ಯಕ್ತಿತ್ವದ ರಾಜಕೀಯ ಮುತ್ಸದ್ದಿ, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾಗಿದ್ದ ಎನ್. ತಿಪ್ಪಣ್ಣ  ಇಂದು ಬಳ್ಳಾರಿಯ ಅವರ ನಿವಾಸದಲ್ಲಿ ನಿಧನರಾದರು.

97 ವರ್ಷ ವಯಸ್ಸಾಗಿತ್ತು, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗಿನ ಜಾವ 5 ಗಂಟೆಗೆ ಕೊನೆಯಿಸಿರೆಳದರು.

1928 ನವೆಂಬರ್ ತಿಂಗಳಲ್ಲಿ ಚಿತ್ರದುರ್ಗ ಜಿಲ್ಲೆ ತುರುವನೂರಿನಲ್ಲಿ ಜನಿಸಿದ ಅವರು ತುರುವನೂರಿನಲ್ಲಿ ಜರುಗಿದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದರು.

ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರ ರಾಜಕೀಯ ಗರಡಿಯಲ್ಲಿ ಪಳಗಿ, ಮೂರು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ, ಹಂಗಾಮಿ ಸಭಾಪತಿಗಳಾಗಿ ಕರ್ತವ್ಯ ನಿರ್ವಹಿದ್ದ ಎನ್. ತಿಪ್ಪಣ್ಣ ಸಮಾಜ ಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಶಿಸ್ತು ಮತ್ತು ಶ್ರದ್ಧೆಯ ಮೂಲಕ ಉತ್ತಮ ಸಂಸದೀಯ ಪಟುವಾಗಿ ರಾಜ್ಯದ ಗಮನ ಸೆಳೆದಿದ್ದ ಧೀಮಂತ ರಾಜಕಾರಣಿ ಎನಿಸಿಕೊಂಡಿದ್ದರು.

ಸ್ವಾತಂತ್ರ್ಯ ಹೋರಾಟಗಾರರ ನೆಲೆಬೀಡು ಎಂದು ಖ್ಯಾತಿಗಳಿಸಿರುವ ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದಲ್ಲಿ ಜನಿಸಿ ಬಾಲ್ಯದಿಂದಲೇ ಭಾರತ ಸ್ವಾತಂತ್ರö್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಎನ್. ತಿಪ್ಪಣ್ಣನವರು ಬಳ್ಳಾರಿಯಲ್ಲಿ ತಮ್ಮ ವಕೀಲಿ ವೃತ್ತಿ ಆರಂಭಿಸಿ ಕೆಲವೇ ದಿನಗಳಲ್ಲಿ ತಮ್ಮ ವೃತ್ತಿಯಲ್ಲಿ ಅಪಾರ ಜನಪ್ರಿಯತೆ ಗಳಿಸಿ ಖ್ಯಾತ ವಕೀಲರಾಗಿ ನಾಡಿಗೆ ಚಿರಪರಿಚಿತರಾದವರು, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಚುಕ್ಕಾಣಿ ಹಿಡಿದು ಸುಮಾರು 46ಕ್ಕೂ ಹೆಚ್ಚು ಕಾಲೇಜುಗಳನ್ನು ಬಳ್ಳಾರಿ ಭಾಗದಲ್ಲಿ ಆರಂಭಿಸಿ ಹಿಂದುಳಿದ ಜಿಲ್ಲೆಗಳ ಶೈಕ್ಷಣಿಕ ಪ್ರಗತಿಗೆ ಬಹುವಾಗಿ ಶ್ರಮಿಸಿದ್ದರು. ಹಲವು ಬಾರಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಸಹ ಜವಾಬ್ದಾರಿ ನಿರ್ವಹಿಸಿ ಉತ್ತರ ಕರ್ನಾಟದ ಭಾಗದ ಶೈಕ್ಷಣಿಕ ಗುಣಮಟ್ಟದ ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹೊರಟ್ಟಿರವರು ತಿಪ್ಪಣ್ಣನವರ ಶೈಕ್ಷಣಿಕ ಸೇವೆಯನ್ನು ಸ್ಮರಿಸಿದ್ದಾರೆ.
ವಕೀಲರ ಸಂಘದ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದ ಎನ್. ತಿಪ್ಪಣ್ಣನವರು, ಸುಮಾರು 15 ವರ್ಷಗಳ ಕಾಲ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ರಾಜ್ಯದ್ಯಾಂತ ಸಮಾಜವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉತ್ತಮ ಸಂಸದೀಯ ಪಟು ಹಾಗೂ ಖ್ಯಾತ ವಾಗ್ಮಿಯಾಗಿದ್ದ ಅವರ ಸಮಾಜ ಮುಖಿ ಚಿಂತನೆಗಳು ಆಕರ್ಷಕ ವ್ಯಕ್ತಿತ್ವ, ಪ್ರಾಮಾಣಿಕತೆ ಹಾಗೂ ಸರಳತೆ ಗುಣಗಳನ್ನು ಮೈಗೂಡಿಸಿಕೊಂಡಿದ್ದರು.

2004 ರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಲು ಪ್ರಮುಖ ಪಾತ್ರ ವಹಿಸಿದ್ದರು.

ನಾಳೆ ಅವರ ಸ್ವಗೃಹ ತುರುವನೂರಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

Girl in a jacket
error: Content is protected !!