ಮಹಿಳಾಸ್ವಸಹಾಯಸಂಘಗಳಜತೆಗೂಡಿದರೆ ಆರ್ಥಿಕ ಸಾಕ್ಷರತೆ ಸಾಧ್ಯ ‘

Share

ಬೆಂಗಳೂರು,ಫೆ,14: ಬ್ಯಾಂಕುಗಳು ಲಕ್ಷಾಂತರ ಸದಸ್ಯರನ್ನು ಹೊಂದಿರುವ ಮಹಿಳಾ ಸ್ವಸಹಾಯ ಗುಂಪುಗಳ ಜತೆಗೂಡಿ ಕೆಲಸ ಮಾಡಿದರೆ ಸಮಾಜದಲ್ಲಿ ಆರ್ಥಿಕ ಸಾಕ್ಷರತೆಯು ತಾನಾಗಿಯೇ ಬರುತ್ತದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಏರ್ಪಡಿಸಿದ್ದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಇನ್ನು ಆರು ತಿಂಗಳಲ್ಲಿ ಈ ಸ್ವಸಹಾಯ ಗುಂಪುಗಳ ಚಟುವಟಿಕೆಗಳು ಸಂಪೂರ್ಣ ಡಿಜಿಟಲ್ ರೂಪ ಪಡೆಯಲಿವೆ. ಹೀಗಾಗಿ, ಬ್ಯಾಂಕಿಂಗ್ ವ್ಯವಸ್ಥೆಯು ಸುಸ್ಥಿರತೆ, ಸಮಾನತೆ ಮತ್ತು ಸಮಸ್ತರನ್ನೂ ಒಳಗೊಳ್ಳುವಂತಹ ಉಪಕ್ರಮಗಳನ್ನು ವ್ಯಾಪಕಗೊಳಿಸಬೇಕು ಎಂದರು.

‘ನಮ್ಮಲ್ಲಿ ತೀರಾ ಇತ್ತೀಚಿನ ವರೆಗೂ ಕೇವಲ 10 ಲಕ್ಷ ಮಂದಿ ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದರು. ಆದರೆ, ಪ್ರಧಾನಿ ಮೋದಿ ಅವರು ಘೋಷಿಸಿದ ಜನಧನ್ ಕ್ರಮದಿಂದಾಗಿ 50 ಕೋಟಿ ಜನರು ಈಗ ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ’ ಎಂದು ಅವರು ನುಡಿದರು.

ಬ್ಯಾಂಕಿಂಗ್ ಮೂಲಕ ಆರ್ಥಿಕ ಸಾಕ್ಷರತೆ ಹೆಚ್ಚಲು ತಂತ್ರಜ್ಞಾನದ ಅಳವಡಿಕೆ ಅಗತ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಏಕಗವಾಕ್ಷಿ ಟೆಲಿಕಾಂ ನೀತಿಯನ್ನು ಜಾರಿಗೆ ತಂದಿದೆ. ಈ ಮೂಲಕ ಪಾರದರ್ಶಕತೆ ಮತ್ತು ಉತ್ತರದಾಯಿತ್ವಗಳನ್ನು ರೂಢಿಗೆ ತರಬೇಕು ಎಂದು ಸಚಿವರು ಸಲಹೆ ನೀಡಿದರು.

ನೂತನ ಶಿಕ್ಷಣ ನೀತಿಯಲ್ಲಿ ಆರ್ಥಿಕ ಜಾಗೃತಿಗೆ ಕೂಡ ಒತ್ತು ನೀಡಲಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಈ ಅರಿವು ಮೂಡಿಸಲು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ತರಬೇತಿಯು ಸಂಪೂರ್ಣ ಉಚಿತವಾಗಿದೆ ಎಂದು ಅವರು ವಿವರಿಸಿದರು.

ಇವತ್ತು ಸ್ಪರ್ಧೆಯು ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಬದಲಿಗೆ ಇದು ಜಾಗತಿಕವಾಗಿದೆ. ಹೀಗಾಗಿ ಬ್ಯಾಂಕುಗಳು ಕಟ್ಟಡಗಳನ್ನು ಕಟ್ಟುವ ಬದಲು ತಾಂತ್ರಿಕ ಮೂಲಸೌಕರ್ಯ ವನ್ನು ದಕ್ಷ ರೀತಿಯಲ್ಲಿ ವಿಸ್ತರಿಸಿ ಕೊಳ್ಳಬೇಕು ಎಂದು ಅಶ್ವತ್ಥ ನಾರಾಯಣ ಪ್ರತಿಪಾದಿಸಿದರು.

ಕಾರ್ಯಕ್ರಮ ದಲ್ಲಿ ಆರ್ ಬಿ ಐ ಪ್ರಾದೇಶಿಕ ನಿರ್ದೇಶಕ ಗುರುಮೂರ್ತಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಲ್ ವಿ. ಪ್ರಭಾಕರ್, ಎಸ್ ಬಿಐ ಸಿಜಿಎಂ ನಂದಕಿಶೋರ್ ಮುಂತಾದವರು ಉಪಸ್ಥಿತರಿದ್ದರು.

Girl in a jacket
error: Content is protected !!