ಎರಡರಬೆಂಗಳೂರುಏ,30- ಬುದ್ಧ, ಬಸವ, ಅಂಬೇಡ್ಕರ್ ರವರ ತತ್ವ-ಸಿದ್ಧಾಂತಗಳು ಎಲ್ಲ ಕಾಲ್ಲಕ್ಕೂ ಶ್ರೇಷ್ಠ. ಅವರ ತತ್ವ-ಸಿದ್ಧಾಂತಗಳು ಸಾರ್ವಕಾಲಿಕ ಮತ್ತು ಸದಾ ಜನರಿಗೆ ಒಳ್ಳೆಯದನ್ನೆ ಬಯಸುವ ಸಿದ್ಧಾಂತಗಳು ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಜಗಜ್ಯೋತಿ ಬಸವಣ್ಣನವರ ಜಯಂತಿ ಪ್ರಯುಕ್ತ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪುಷ್ಪಾರ್ಚನೆ ಮಾಡಿದ ಬಳಿಕ ಅವರು ಮಾತನಾಡಿದರು.
ತುಳಿತಕ್ಕೆ ಒಳಗಾದವರು, ಅಂಧಕಾರದಲ್ಲಿದ್ದ ಜನರಿಗೆ ಬಸವಣ್ಣನವರು ಬೆಳಕಾದವರು. ಜಾತ್ಯತೀತವಾದ ಸಮಾಜ ನಿರ್ಮಾಣ ಮಾಡಬೇಕು, ಮಾನವ ಧರ್ಮ ಕಟ್ಟಬೇಕು ಅನ್ನುವುದು ಅವರ ಜೀವನದ ಗುರಿಯಾಗಿತ್ತು ಎಂದು ಅವರು ನೆನಪಿಸಿದರು. ಸಮಸಮಾಜವನ್ನು ಕಟ್ಟುವಲ್ಲಿ ಸರ್ವರೂ ಸಹೋದರತ್ವದಿಂದ ಇರಬೇಕೆಂಬ ಆಶಯ ಬಸವಣ್ಣನವರದಾಗಿತ್ತು ಎಂದು ಅವರು ತಿಳಿಸಿದರು.
ಕಾಂಗ್ರೆಸ್ಸಿನಿಂದ ತಾರತಮ್ಯದ ಸಮಾಜ ನಿರ್ಮಿಸುವ ಕಾರ್ಯ
ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರು ಜಾತಿಯ ನಿರ್ಮೂಲನೆ ಮಾಡುವ ಸದುದ್ದೇಶವನ್ನು ಹೊಂದಿದ್ದರು. ಆದರೆ ಇವತ್ತು ನಮ್ಮನ್ನು ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಜಾತಿ ಜಾತಿಗಳನ್ನು ಒಡೆಯುತ್ತಿದೆ. ಓಟ್ ಬ್ಯಾಂಕಿಗಾಗಿಯೇ ರಾಜಕಾರಣವನ್ನು ಮಾಡುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ಇದು ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ರವರ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾದ ಒಂದು ವ್ಯವಸ್ಥೆ. ಈ ವ್ಯವಸ್ಥೆಯಿಂದ ಕಾಂಗ್ರೆಸ್ ಸರ್ಕಾರವು ಕೆಲವರನ್ನು ಓಲೈಕೆ ಮಾಡುವುದು, ಕೆಲವರನ್ನು ತುಳಿಯುವುದು, ಕೆಲವರನ್ನು ಜೊತೆಗಿಟ್ಟ್ಟುಕೊಳ್ಳುವುದು ಹೀಗೆ ತಾರತಮ್ಯದ ಸಮಾಜವನ್ನು ಕಟ್ಟುವ ಕೆಲಸವನ್ನು ಕಾಂಗ್ರೆಸ್ ಪಕ್ಷವು ಮಾಡುತ್ತಿದೆ ಎಂದು ಟೀಕಿಸಿದರು.
ಜಾತಿರಹಿತ ಸಮಾಜವನ್ನು ಕಟ್ಟಬೇಕೆಂದು ಹೊರಟವರು ಬುದ್ಧ ಮತ್ತು ಅಂಬೇಡ್ಕರ್ ರವರು. ಬಸವಣ್ಣನವರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಈ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಬಸವಣ್ಣನವರು ನಿರ್ಮಿಸಿದ್ದ ಅನುಭವ ಮಂಟಪದ ಆಧಾರದಡಿ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಸತ್ತು ನಡೆಯುತ್ತಿದೆ. ಇದನ್ನು ಅಂದಿನ ಕಾಲದ 12ನೇ ಶತಮಾನದಲ್ಲೇ ಸೃಷ್ಟಿ ಮಾಡಿದ ಮಹಾನ್ ವ್ಯಕ್ತಿ ಬಸವಣ್ಣನವರು ಎಂದು ಅವರು ನುಡಿದರು.
ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಸಹ-ಕಾರ್ಯದರ್ಶಿ ವಿಶ್ವನಾಥ್ ಅಣಜಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ರಾಜ್ಯ ಮಾಧ್ಯಮ ಸಹ-ಸಂಚಾಲಕ ಪ್ರಶಾಂತ್ ಕೆಡಂಜಿ, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.