ಬೀದರ್, ಏ, 16-ಗ್ಯಾರಂಟಿಗಳನ್ನು ಜಾರಿ ಮಾಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬೀದರ್ ಜಿಲ್ಲೆಯಲ್ಲಿ ರೂ 2025 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಹಾಗೂ ಬೀದರ್ ಹಾಗೂ ಬೆಂಗಳೂರು ನಾಗರಿಕ ವಿಮಾನ ಸೇವೆಯ ಪುನರಾರಂಭ ಕಾರ್ಯಕ್ರಮ ದಲ್ಲಿ ಭಾಗವಹಿಸಿ* ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಪಕ್ಷಗಳು ಗ್ಯಾರಂಟಿ ಯೋಜನೆ ಜಾರಿ ಮಾಡಿ ಅಭಿವೃದ್ಧಿ ಕೆಲಸಗಳಿಗೆ ತಿಲಾಂಜಲಿ ಇಟ್ಟಿದ್ದಾರೆ ಎಂದು ಆರೋಪಿಸುತ್ತಾರೆ. ಬಿಜೆಪಿಯ ಆರ್.ಅಶೋಕ್, ನಾರಾಯಣಸ್ವಾಮಿ ಹಾಗೂ ವಿಜಯೇಂದ್ರ ಅವರು ಬೀದರ್ ಬಂದು ನೋಡಲು ಆಹ್ವಾನ ನೀಡುತ್ತೇನೆ ಎಂದು ಸವಾಲು ಹಾಕಿದ ಮುಖ್ಯಮಂತ್ರಿಗಳು, ಸರ್ಕಾರ ದಿವಾಳಿಯಾಗಿದ್ದರೆ 2025 ಕೋಟಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲು ಸಾಧ್ಯವಾಗುತ್ತಿತ್ತೆ ಎಂದರು. ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಕೈಗೊಂಡಿದ್ದಾರೆ. ಬಿಜೆಪಿಗೆ ಮಾನ ಮರ್ಯಾದೆ ಇದ್ದರೆ, ಕಿಂಚಿತ್ತಾದರೂ ಜನಪರವಾದ ಕಾಳಜಿ ಇದ್ದರೆ ಸುಳ್ಳು ನಾಟಕವನ್ನು ಬಂದ್ ಮಾಡಬೇಕು. ದೇಶದಲ್ಲಿ ಬೆಲೆಯೇರಿಕೆಯಾಗಿದ್ದರೆ ಕೇಂದ್ರದ ಬಿಜೆಪಿ ಸರ್ಕಾರ ಕಾರಣ ಎಂದರು.
ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜನಾಕ್ರೋಶ ಯಾತ್ರೆ
ಮನ್ ಮೋಹನ್ ಸಿಂಗ್ ಅವರ ಸರ್ಕಾರವಿದ್ದಾಗ ಪೆಟ್ರೋಲ್ ಬೆಲೆ 73 ರೂ. ಹಾಗೂ ಡೀಸೆಲ್ ಬೆಲೆ 46.59 ಪೈಸೆ ಇತ್ತು. ಇಂದು ಎಷ್ಟಾಗಿದೆ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಅಚ್ಚೆ ದಿನ್ ಬರುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದರು. ಅಚ್ಚೆ ದಿನ್ ಬಂದಿದೆಯೇ ಎಂದು ಪ್ರಶ್ನಿಸಿದರು. ಅಬಕಾರಿ ಡ್ಯೂಟಿ ಡೀಸೆಲ್ ಮೇಲೆ 100.45 ರೂಗಳಿತ್ತು. 9.40 ರೂ ಪೆಟ್ರೋಲ್ ಮೇಲಿತ್ತು ಇಂದು ಎಷ್ಟಾಗಿದೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 118 ರಿಂದ 120 ರೂ.ವರೆಗಿತ್ತು. ಮೊನ್ನೆಯವರೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದೆ. 35 ಡಾಲರ್ ಗಳಿಗೆ ಇಳಿದಿದೆ. 120 ಡಾಲರ್ ಇರುವಾಗ ಪೆಟ್ರೋಲ್ ಬೆಲೆ 73, ಡೀಸಲ್ ಬೆಲೆ 46 ರೂ.ಗಳಿದ್ದರೆ , ಇಂದು 90 ರೂ.ಗಳಿಗಿಂತ ಹೆಚ್ಚು ಮಾಡಿದ್ದಾರೆ. ಇದಕ್ಕೆ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಇದ್ದನ್ನು ಕೇಳಬೇಕು. ಗ್ಯಾಸ್ ಸಿಲಿಂಡರ್ ಬೆಲೆ 420 ರೂ ಇತ್ತು, ಈಗ ಸಾವಿರ ರೂಪಾಯಿಗೆ ಏರಿದೆ. ಅವರ ಆಡಳಿತದ ತಪ್ಪುಗಳನ್ನು ಮುಚ್ಚಿಕೊಂಡು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜನಾಕ್ರೋಶ ಯಾತ್ರೆ ಕೈಗೊಂಡಿದ್ದಾರೆ. ಬಿಜೆಪಿ ಲಜ್ಜೆಗೆಟ್ಟವರು. 2018 ರಲ್ಲಿ ನೀಡಿದ್ದ 400 ಭರವಸೆಗಳಲ್ಲಿ 10% ಭರವಸೆಗಳನ್ನು ಈಡೇರಿಸಲಾಗಲಿಲ್ಲ. 2008,2018 ರಲ್ಲಿ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು. ಆಪರೇಶನ್ ಕಮಲ ಮಾಡಿ ಅಧಿಕಾರಕ್ಕೆ ಬಂದವರು ನಮಗೆ ಪಾಠ ಹೇಳಲು ಬರುತ್ತಾರೆ. ಇವರು ಜನವಿರೋಧಿ ಸರ್ಕಾರ ಎಂದು ಹಣೆಪಟ್ಟಿ ಹಚ್ಚಲು ಹೊರಟಿದ್ದಾರೆ.
ಕಳೆದ ವರ್ಷ 3 ಲಕ್ಷ 71ಸಾವಿರ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದು, ಈ ವರ್ಷ 4 ಲಕ್ಷದ 9 ಸಾವಿರ ಕೋಟಿ ರೂ.ಗಳ ಬಜೆಟ್ ಮಂಡಿಸಲಾಗಿದೆ. ಆರ್ಥಿಕವಾಗಿ ಸದೃಢವಿದ್ದುದ್ದಕ್ಕೆ 38 ಸಾವಿರ ಕೋಟಿಗಳಿಗೆ ಬಜೆಟ್ ಗಾತ್ರ ಹೆಚ್ಚಿಸಲು ಸಾಧ್ಯವಾಯಿತು ಎಂದರು.
ಕರ್ನಾಟಕ ಆರ್ಥಿಕವಾಗಿ ಸದೃಢವಾಗಿದೆ
ಕಳೆದ ವರ್ಷ 56 ಸಾವಿರ ಕೋಟಿ ಬಂಡವಾಳ ವೆಚ್ಚ ಮಾಡಿದ್ದರೆ, ಈ ವರ್ಷ 83 ಸಾವಿರ ಕೋಟಿ. ಗಳ ಬಂಡವಾಳ ವೆಚ್ಚ ಮಾಡಲಾಗುವುದು. ದಿವಾಳಿಯಾಗಿರುವ ಸರ್ಕಾರ ಬಂಡವಾಳ ವೆಚ್ಚ ಮಾಡಲು ಸಾಧ್ಯವಿಲ್ಲ. 2002 ರಲ್ಲಿ ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಿದ್ದು, ಅದರ ಮೂರು ಮಾನದಂಡಗಳ ಪ್ರಕಾರ ಬಜೆಟ್ ಮಂಡನೆ ಮಾಡುವಾಗ ಹಣಕಾಸಿನ ಪರಿಸ್ಥಿತಿ ಚೆನ್ನಾಗಿದ್ದರೆ ರಿವನ್ಯೂ ಸರ್ಪ್ಲಸ್ ಇರಬೇಕು. ಸಾಲ ಮಾಡುವಾಗ ಜಿಡಿಪಿ ಯ 25% ಒಳಗಿರಬೇಕು. ನಾವು ಈ ಮಾನದಂಡಗಳ ಒಳಗೆ ಇದ್ದೇವೆ. ನಾವು ಅಭಿವೃದ್ಧಿಗೆ, ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಮೀಸಲಿಟ್ಟಿದ್ದೇವೆ. ಕಳೆದ ವರ್ಷ ಗ್ಯಾರಂಟಿಗಳಿಗೆ 52009 ಸಾವಿರ ಕೋಟಿ ಮೀಸಲಿಟ್ಟು,ಈ ವರ್ಷ 50,018 ಕೋಟಿ ಗಳನ್ನು ಮೀಸಲಿಟ್ಟಿದ್ದು, ಕರ್ನಾಟಕ ಆರ್ಥಿಕವಾಗಿ ಸದೃಢವಾಗಿದೆ. ಆದ್ದರಿಂದಲೇ 2025 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಲಾಗಿದೆ ಎಂದರು.
ಸುಳ್ಳೇ ಬಿಜೆಪಿ ಮನೆದೇವರು
ಬಿಜೆಪಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಅವರ ಮನೆದೇವರು. ರಾಜ್ಯದ ಜನರನ್ನು ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ, ಹಾಗೂ ನನ್ನ ಮೇಲೆ ಅಪಪ್ರಚಾರ ,ಸುಳ್ಳು ಆಪಾದನೆಗಳನ್ನು ಮಾಡಿದ್ದಾರೆ. ಆದರೂ ಮೂರೂ ಉಪಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ ಎಂದರು.