ಬಿಜೆಪಿಗೆ ಸೆಡ್ಡು ಹೊಡೆಯಲು ಕೇಂದ್ರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಏ ೧೭ ರಂದು ಬೃಹತ್ ಪ್ರತಿಭಟನೆ

Share

ಬಿಜೆಪಿಗೆ ಸೆಡ್ಡು ಹೊಡೆಯಲು ಕೇಂದ್ರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಏ ೧೭ ರಂದು ಬೃಹತ್ ಪ್ರತಿಭಟನೆ

   by-ಕೆಂಧೂಳಿ

ಬೆಂಗಳೂರು,ಏ,೧೧-ರಾಜ್ಯ ಬಿಜೆಪಿಯ ದ್ವಂದ್ವ ನಿಲುವು ಮತ್ತು ಕೇಂದ್ರ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಏಪ್ರಿಲ್ ೧೭ ರಂದು ಬೃಹತ್ ಪ್ರತಿಭಟನೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಈ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಬೆಲೆ ಏರಿಕೆ ಹಾಗೂ ರಾಜ್ಯ ಬಿಜೆಪಿಯ ಇಬ್ಬಗೆ ನೀತಿ ವಿರುದ್ಧ ಹೋರಾಟ ಮಾಡಲಾಗುವುದು. ಏ.೧೭ರ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲಾ ಸೇರಿ ಹಲವು ನಾಯಕರು ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದಂತೆಯೇ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲೂ ಹೋರಾಟ ನಡೆಸಲಾಗುವುದು ಎಂದರು.
ಬಿಜೆಪಿ ಅವರು ಜನಾಕ್ರೋಶ ಯಾತ್ರೆ ಹೊರಟ ದಿನವೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರವನ್ನು ತಲಾ ೨ ರು. ಹಾಗೂ ಅಡುಗೆ ಅನಿಲ ದರವನ್ನು ೫೦ ರು. ಹೆಚ್ಚಿಸಿ ಉಡುಗೊರೆ ನೀಡಿದೆ. ಬುಧವಾರ ಕಚ್ಚಾ ತೈಲದ ಬೆಲೆ ಶೇ.೪.೨೩ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡದೆ, ಹೆಚ್ಚಿಸಿದೆ. ಪೆಟ್ರೋಲ್ ಮೂಲ ದರ ಪ್ರತಿ ಲೀ.ಗೆ ೪೨.೬೦ ರು.ಗಳಿದ್ದರೆ ೧೦೩ ರು.ಗೆ ಪ್ರತಿ ಲೀಟರ್ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಒಂದು ಲೀ. ಮೇಲೆ ೬೦ ರು. ಲಾಭ ಮಾಡುತ್ತಿದೆ. ಹಾಗೆಯೇ, ಡೀಸೆಲ್ ಮೇಲೆ ೪೩ ರು. ಲಾಭ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ಮೇಲೆ ಶೇ.೬೦ರಷ್ಟು ತೆರಿಗೆ ವಿಧಿಸಲಾಗುತ್ತಿದೆ ಎಂದರು.
ನಮ್ಮ ಸರ್ಕಾರ ನೀರಿನ ಬೆಲೆಯನ್ನು ಅತ್ಯಂತ ಕಡಿಮೆ ಏರಿಕೆ ಮಾಡಿದ್ದೇವೆ. ಕಸ ಸಂಗ್ರಹಣೆ ಶುಲ್ಕವನ್ನು ಹಿಂದಿನ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಕಡಿಮೆ ಮಾಡಿ ಬಡವರ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕು ಹಸನಾಗುವಂತೆ ಮಾಡಲು ೫೨ ಸಾವಿರ ಕೋಟಿ ರು. ಮೀಸಲಿಟ್ಟು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದರು.ಬಿಜೆಪಿ ನಾಯಕರ ಫೋಟೋ ಹಾಕಿಕೊಳ್ಳಲಿ ಬಿಜೆಪಿ ನಾಯಕರು ತಮ್ಮ ಪಕ್ಷದೊಳಗಿನ ತೂತು ಮುಚ್ಚಿಕೊಳ್ಳಲು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಪ್ರತಿಭಟನೆಯ ಬ್ಯಾನರ್‌ನಲ್ಲಿ ನನ್ನ ಮತ್ತು ಸಿದ್ದರಾಮಯ್ಯ ಅವರ ಫೋಟೋ ಹಾಕಿಕೊಂಡಿದ್ದಾರೆ. ಅದರ ಬದಲು ಕೇಂದ್ರ ಬಿಜೆಪಿ ನಾಯಕರ ಫೋಟೋ ಹಾಕಿಕೊಳ್ಳಲಿ. ನಮ್ಮ ಬೆಲೆ ಏರಿಕೆಯ ಬದಲು ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನೂ ಜನರಿಗೆ ತಿಳಿಸಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Girl in a jacket
error: Content is protected !!