ಪರಮಹಂಸದಂತೆ ಎತ್ತರಕ್ಕೆ ಏರಿ;ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ

Share

ಬೆಂಗಳೂರು, ಆ, 16:ಡಾ: ರಾಜ್ ಕುಮಾರ್ ಲರ್ನಿಂಗ್ ಆ್ಯಪ್ ಮೂಲಕ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಸರಸ್ವತಿಯ ಪಾವಿತ್ರ್ಯತೆಯನ್ನು ಹೊಂದಿ ಪರಮಹಂಸದಂತೆ ಬಹಳ ಎತ್ತರಕ್ಕೆ ಏರಬಹುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ರೂಪಿಸಲಾಗಿರುವ ಡಾ. ರಾಜ್ ಕುಮಾರ್ ಶೈಕ್ಷಣಿಕ ಆ್ಯಪ್ ನ್ನು ಇಂದು ಅವರು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

21 ನೇ ಶತಮಾನ ಜ್ಞಾನವಂತರಿಗೆ ಸೇರಿದ್ದು. ಜ್ಞಾನಕ್ಕೆ ಬೆಲೆ ಹಾಗೂ ಬಲ ಬಂದಿದೆ. ಜ್ಞಾನದ ಕ್ಷೇತ್ರಕ್ಕೆ ಡಾ:ರಾಜ್ ಕುಮಾರ್ ಅವರ ಆಪ್ ದೊಡ್ಡ ಕೊಡುಗೆ ನೀಡಿದೆ ಎಂದ ಅವರು ಮಕ್ಕಳಿಗೆ ತರ್ಕಬದ್ಧವಾಗಿ ಚಿಂತನೆ ಮಾಡಲು ಪ್ರೇರೇಪಿಸಬೇಕು. ಆಗ ಸಹಜವಾಗಿ ಅವರ ಸ್ಮೃತಿ ಪಟಲದಲ್ಲಿ ಉಳಿಯುತ್ತದೆ ಎಂದರು.

ಆಪ್ ಗಳ ಮೂಲಕ ಜಗತ್ತನ್ನು ತಲುಪಲು ಸಾಧ್ಯ. ನೂತನ ಶಿಕ್ಷಣ ನೀತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದು, ಈ ಆಪ್ ಶಿಕ್ಷಣ ನೀತಿಗೆ ಉಪಯುಕ್ತವಾಗಲಿದೆ. ಭಾರತದಲ್ಲಿಯೇ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ಡಾ: ರಾಜ್ ಕುಮಾರ್ ಅಂದರೆ ಒಬ್ಬ ಸಾಧಕ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕಬಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಶ್ರೀಮಂತ, ಮೌಲಿಕ ಬದುಕನ್ನು ಬದುಕಿದರೆ ಸಾವಿನ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕದ ಅಂಥ ಏಕಮೇವ ತಾರೆ ಅಂದರೆ ಡಾ: ರಾಜ್ ಕುಮಾರ್. ಅವರ ಸರಳತೆ, ನಡೆ, ನುಡಿ , ಮೌಲ್ಯಗಳನ್ನು ವಿಶೇಷವಾಗಿ ಅಧಿಕಾರ, ಜನಪ್ರಿಯ ವ್ಯಕ್ತಿಗಳು ಕಲಿಯಬೇಕು ಎಂದರು. ಈಗಷ್ಟೇ ಹುಟ್ಟಿರುವ ಮಗುವಿನ ಮುಗ್ಧತೆ ಅವರಲ್ಲಿತ್ತು ಎಂದು ಹೇಳಿದರು.

ಮಗುವಿನಲ್ಲಿರುವ ಕುತೂಹಲಕ್ಕೆ ಜ್ಞಾನ, ಅರ್ಥವನ್ನು ಕೊಡಬೇಕು. ಡಾ: ರಾಜ್ ಕುಮಾರ್ ನಿರಂತರ ವಿದ್ಯಾರ್ಥಿಯಾಗಿದ್ದರೂ, ಮುಗ್ಧತೆ ಸದಾ ಕಾಲ ಇತ್ತು. ನಟನೆ ಅವರ ವ್ಯಕ್ತಿತ್ವದ ಒಂದು ಸಣ್ಣ ಭಾಗವಷ್ಟೆ. ಆತ್ಮಶುದ್ಧಿ ಇದ್ದಾಗ ಮಾತ್ರ ರಾಜ್ ಕುಮಾರ್ ಅವರಿಗಿದ್ದ ಮುಗ್ಧತೆ ಮತ್ತು ಕುತೂಹಲದ ಸಮ್ಮಿಲನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ, ಪುನೀತ್ ರಾಜ್‍ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು. ‌

 

Girl in a jacket
error: Content is protected !!