ಬೆಂಗಳೂರು, ಮೇ 21; ನಾಳೆಯಿಂದ ರಾಜ್ಯದಲ್ಲಿ 18-44 ವಯೋಮಿತಿಯವರಿಗೆ ಲಸಿಕೆ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮೇ 15ರಂದು ನಡೆದ ರಾಜ್ಯಮಟ್ಟದ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಿದಂತೆ ಲಸಿಕೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮೇ 22ರ ಶನಿವಾರದಿಂದಲೇ 18-44 ವರ್ಷದೊಳಗಿನ ವಯೋಮಾನದವರಿಗೆ ಕೊರೊನಾ ಲಸಿಕೆ ವಿತರಣೆ ಪುನರಾರಂಭಲಿದೆ. ಮೊದಲಿಗೆ ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಮುಂದಿನ ದಿನಗಳಲ್ಲಿ ಆದ್ಯತೆ ಗುಂಪುಗಳಿಗೆ ಲಸಿಕೆ ನೀಡಲಾಗುವುದು.
18-44 ವರ್ಷದವರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದ್ದರು. ಆದರೆ ಲಸಿಕೆ ಕೊರತೆ ಎದುರಾದ ಕಾರಣ ಮೇ 14ರಿಂದ ಲಸಿಕೆ ನೀಡುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಅದನ್ನು ಮುಂದುವರೆಸಲಾಗುವುದು ಎಂದಿದ್ದಾರೆ.
ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಸರ್ಕಾರಿ ಸಾರಿಗೆ ಸಿಬ್ಬಂದಿಗಳು, ಆಟೋ ಮತ್ತು ಕ್ಯಾಬ್ ಚಾಲಕರು, ಅಂಚೆ ಇಲಾಖೆ ಸಿಬ್ಭಂದಿಗಳು, ನ್ಯಾಯಾಂಗ ಅಧಿಕಾರಿಗಳು ಸೇರಿದಂತೆ ಮುಂಚೂಣಿ ಕಾರ್ಯಕರ್ತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಮುಂದಿನ ದಿನಗಳಲ್ಲಿ ಆದ್ಯತೆ ಗುಂಪುಗಳಿಗೆ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಆದ್ಯತೆಯ ಗುಂಪುಗಳಲ್ಲಿ ಆರ್ಎಸ್ಕೆ ಕೆಲಸಗಾರರು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಆಟಗಾರರು, ಸ್ವಧಾರ್ ಗೃಹ ವಾಸಿಗಳು ಮತ್ತು ರಾಜ್ಯ ಮಹಿಳಾ ನಿಲಯವಾಸಿಗಳು (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ), ಎಚ್ಎಎಲ್ ಸಂಸ್ಥೆಯ ಸಿಬ್ಬಂದಿಗಳು ಸೇರಿದ್ದಾರೆ.