ನಾಗರಹೊಳೆಯ ಮಹರ್ಷಿ ವಾಲ್ಮೀಕಿ ಬುಡಕಟ್ಟು ವಸತಿ ಶಾಲೆಗೆ ಶೀಘ್ರ ಮೂಲಭೂತ ಸೌಕರ್ಯ : ಸಚಿವ ಬೋಸರಾಜು
by-ಕೆಂಧೂಳಿ
ಬೆಂಗಳೂರು, ಮಾ, 19-ನಾಗರಹೊಳೆಯ ಮಹರ್ಷಿ ವಾಲ್ಮೀಕಿ ಬುಡಕಟ್ಟು ವಸತಿ ಶಾಲೆಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯ ಒದಗಿಸಲಾಗುವುದೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಭಾನಾಯಕರಾದ ಬೋಸರಾಜು ತಿಳಿಸಿದರು.
ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ ಈ ಬಗ್ಗೆ ನಿಯಮ 72 ರಡಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವರು ವಾಲ್ಮೀಕಿ ಬುಡಕಟ್ಟು ವಸತಿ ಶಾಲೆಯಲ್ಲಿ 94 ವಿದ್ಯಾರ್ಥಿಗಳಿದ್ದು, ವಾರ್ಷಿಕವಾಗಿ 18.09 ಲಕ್ಷ ವೆಚ್ಚ ಭರಿಸಲಾಗಿದೆ. ಶಾಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವುದರಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ಹಾಗಾಗಿ ಆದರ್ಶ ಗ್ರಾಮ ಯೋಜನೆಯಡಿ 7.4 ಲಕ್ಷ ರೂಗಳ ದುರಸ್ತಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು
ಪ್ರಸ್ತುತ 2025-26 ನೇ ಸಾಲಿನ ಆಯವ್ಯಯದಲ್ಳಿ ಬುಡಕಟ್ಟು ಜನಾಂಗದ ಶೈಕ್ಷಣಿಕ ಉದ್ದೇಶಕ್ಕಾಗಿ 78 ಬುಡಕಟ್ಟು ವಸತಿ ಶಾಲೆಗಳಲ್ಲಿ 7 ನೇ ತರಗತಿಯನ್ನು ಹಾಗೂ ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿನ 5 ವಸತಿ ಶಾಲೆಗಳನ್ನು 12 ನೇ ತರಗತಿವರೆಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಘೋಷಿಸಲಾಗಿರುತ್ತದೆ. 2024-25 ನೇ ಸಾಲಿನಲ್ಲಿ ಸದರಿ ಶಾಲೆಗಳ ನಿರ್ವಹಣೆಗಾಗಿ ರೂ 3762 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ ಎಂದರು.