ರಾಮನಗರ, ಜೂ, 22: ಲಸಿಕೆ ತಗೆದುಕೊಳ್ಳುವುದರಿಂದ ಕೋವಿಡ್ ಬಂದರು ಸಹ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರದಂತೆ ನಿಯಂತ್ರಿಸುತ್ತದೆ. ರಾಮನಗರ ಜಿಲ್ಲೆಯ ಎಲ್ಲಾ ಜನರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದುಕೊಳ್ಳಿ ಹಾಗೂ ನಿಮ್ಮ ಸುತ್ತಮುತ್ತಲಿನ ಜನರಿಗೂ ಸಹ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಿ ಎಂದು ರಾಮನಗರ ತಾಲ್ಲೂಕು ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿತಾ ಕುಮಾರ್ ಸ್ವಾಮಿ ಅವರು ತಿಳಿಸಿದ್ದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ನಡೆದ ಉಚಿತ ಲಸಿಕಾ ಅಭಿಯಾನವನ್ನು ಅಂಬೇಡ್ಕರ್ ಭವನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು,ಮುಂದಿನ ದಿನಗಳಲ್ಲಿ ಕೋವಿಡ್ 3ನೇ ಅಲೆ ಬರುವ ಸಾಧ್ಯತೆ ಇದ್ದು, ಜನರ ಆರೋಗ್ಯದ ಮೇಲೆ ತೊಂದರೆ ಉಂಟುಮಾಡಬಹುದು. ಇದನ್ನು ತಡೆಯವ ಮಾರ್ಗವೇ ಲಸಿಕೆಯಾಗಿದೆ. ಪ್ರತಿಯೊಬ್ಬರು ಅವರ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆದುಕೊಳ್ಳಬೇಕು.ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ನಾನು ಕೂಡ ಲಸಿಕೆ ಪಡೆದಿದ್ದು ಯಾವುದೇ ತೊಂದರೆ ಉಂಟಾಗಿಲ್ಲ ಎಂದರು.
ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯ ಜನರು ಮೈ ಮರೆಯಬಾರದು. ಮಾಸ್ಕ್ ಧರಿಸಿ, ಸ್ಯಾನಿಟೈಜರ್ ಬಳಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು.
3ನೇ ಅಲೆ ಬರುವ ಮುಂಚಿತವಾಗಿ ಕೇಂದ್ರ ಸರ್ಕಾರ ಉಚಿತ ಲಸಿಕೆಯನ್ನು ನೀಡಲು ಉಚಿತ ಲಸಿಕಾ ಅಭಿಯಾನವನ್ನು ಆಯೋಜಿಸಿದ್ದು, ಶಿಬಿರದಲ್ಲಿ ಭಾಗಿಯಾಗಿರುವ ಯುವಕರು ತಮ್ಮ ಸುತ್ತಮುತ್ತ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯದೇ ಇರುವವರು ಇದ್ದಲ್ಲಿ ಅವರಿಗೆ ಲಸಿಕೆ ಪಡೆದುಕೊಳ್ಳುವಂತೆ ತಿಳಿಸಿ ಅವರನ್ನು ಕರೆತನ್ನಿ. 45 ವರ್ಷ ಮೇಲ್ಪಟ್ಟವರು ಲಸಿಕೆಯಿಂದ ವಂಚಿತರಗಬಾರದು ಹೆಚ್ಚಿನ ಸಂಖ್ಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ಲಸಿಕೆ ಪಡೆಯುವಂತೆ ಆರ್. ಸಿ.ಎಚ್ ಅಧಿಕಾರಿ ಡಾ: ಪದ್ಮ ಅವರು ತಿಳಿಸಿದರು.
ಗರ್ಭಿಣಿಯರನ್ನು ಹೊರತು ಪಡಿಸಿ ಮಧುಮೇಹ, ರಕ್ತದೊತ್ತಡ ಮುಂತಾದ ಆರೋಗ್ಯ ಸಮಸ್ಯೆ ಇದ್ದರು ಲಸಿಕೆಯನ್ನು ಪಡೆಯಬಹುದು. ಮಹಿಳೆಯರು ಮುಟ್ಟು ಇತರೆ ಯಾವುದೇ ಮುಟ್ಟಿನ ಸಮಸ್ಯೆ ಇದ್ದರು ಲಸಿಕೆಯನ್ನು ಪಡೆಯಬಹುದು ಎಂದರು.
ಅಭಿಯಾನದಲ್ಲಿ ಡಿ.ಹೆಚ್.ಓ ಡಾ.ನಿರಂಜನ್, ಡಿ.ಎಲ್.ಓ. ಡಾ.ಮಂಜುನಾಥ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ತಾಲ್ಲೂಕು ಆರೋಗ್ಯಾಧಿಕಾರಿ ಶಶಿಕಲಾ, ಡಿ.ಎಸ್.ಓ.ಕಿರಣ್ ಶಂಕರ್, ರಾಮನಗರ ನಗರಸಭೆ ಆಯುಕ್ತ ನಂದಕುಮಾರ್, ಅಂಬೇಡ್ಕರ್ ಭವನ ಲಸಿಕಾ ಶಿಬಿರದ ನೂಡಲ್ ಅಧಿಕಾರಿ ನಟರಾಜೇಗೌಡ, ರಮೇಶ್ ರಾಜ್, ನಾಗರಾಜ್, ವಿಜಯ್ ಕುಮಾರ್ ಪಾಲ್ಗೊಂಡಿದ್ದರು.