ಶರಣ ಜೀವನ ಮೌಲ್ಯ ಅಳವಡಿಸಿಕೊಳ್ಳಲು ಕರೆ
ವರದಿ- ರುದ್ರಮೂರ್ತಿ ಎಂ.ಜೆ.
ಚಿತ್ರದುರ್ಗ,ಜ,೧೯- ಯಾವುದು ಚಲಿಸದೆ ನಿಶ್ಚಲವಾಗಿರುತ್ತದೆಯೋ ಅದು ಕೊಳೆಯುತ್ತದೆ. ಆದರೆ ಬದುಕು ಚಲನಶೀಲವಾಗಿರಬೇಕು ಎಂದರೆ ಅದಕ್ಕೆ ವಚನಕಾರರು ಹಾಕಿಕೊಟ್ಟ ನೈತಿಕ ಮೌಲ್ಯಗಳಳೇ ಸಾಕ್ಷಿಯಾಗಿವೆ ಎಂದು ಸಾಹಿತಿ ಶ್ರೀಮತಿ ತಾರಿಣಿ ಶುಭಾದಾಯಿನಿ ಅಭಿಪ್ರಾಯ ಪಟ್ಟರು.
೧೩ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಶರಣ ಸಾಹಿತ್ಯದತ್ತ ಯುವಜನತೆ ವಿಚಾರ ಕುರಿತು ಚಿಂತನ ಗೋಷ್ಠಿಯ ಆಶಯ ನುಡಿಗಳನ್ನಾಡಿದ ಅವರು ಬದುಕಿನ ಬಗೆಗಿನ ವಿನಯ ಜೀವನದ ಮೌಲ್ಯಗಳ ಬಗೆಗಿನ ವಿನಯತೆಯನ್ನು ವಚನ ಸಾಹಿತ್ಯ ನಮಗೆ ಕೊಟ್ಟಿದೆ. ವಚನ ಮಾತಿನ ಹಿನ್ನಲೆಯಲ್ಲಿ ಸಾಹಿತ್ಯ ಪರಂಪರೆಯನ್ನು ಕೊಟ್ಟಿದ್ದು ವಚನಗಳ ರಚನಕಾರರಾದ ಶರಣರು. ಆನಂತರದಲ್ಲಿ ಹರಿಹರನ ರಗಳೆಗಳು, ಚಾಮರಸದ ಪ್ರಭುಲಿಂಗ ಲೀಲೆಯಲ್ಲಿ ಶರಣರ ಬಗೆಗಿನ ಒಂದು ಶಾಸ್ರ್ತೀಯ ಅಧ್ಯಯನಗಳನ್ನು ಕಾಣುತ್ತೇವೆ. ಶರಣರ ವಚನಗಳಲ್ಲಿ ಅರಿವು ಎನ್ನುವುದು ಜ್ಞಾನದ ದೊಡ್ಡ ಮೌಲ್ಯವಾಗಿ ಕಾಣಿಸುತ್ತದೆ ಎಂದರು.
ಸಾಮಾಜಿಕ, ಧಾರ್ಮಿಕ ಅಸಮಾನತೆಗಳನ್ನು ಮೀರಿದ ಒಂದು ವ್ಯವಸ್ಥೆಯನ್ನು ಶರಣರು ನಿರ್ಮಿಸಿಕೊಟ್ಟಿದ್ದಾರೆ. ಶರಣರು ಶಿಸ್ತಿನಲ್ಲಿ ಒಂದು ಶಕ್ತಿಯನ್ನು ತೋರಿಸಿದರು. ಇಂದಿನ ಯುವಜನತೆ ಡಿಜಿಟಲ್ ಲೋಕದಲ್ಲಿ ಮುಳುಗಿ ಹೋಗಿರುವ ಸಂದರ್ಭದಲ್ಲಿ ಶರಣರ ಜೀವನದ ಮೌಲ್ಯಗಳು ನಮಗೆ ಮುಖ್ಯವಾಗಿವೆ ಎಂದು ನುಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಅಥಣಿ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಮಹಾಸ್ವಾಮಿಗಳು ಮಾತನಾಡಿ, ವಚನ ಸಾಹಿತ್ಯವು ವಿಶ್ವದ ಎಲ್ಲಾ ಧರ್ಮಗಳನ್ನು ಮೀರಿ ಮಾನವೀಯತೆಯನ್ನು ಕಟ್ಟಿಕೊಡುವಂತಹ ಕೆಲಸ ಎಂದು ಹೇಳಿದರು
ಎ.ಸಿ.ಪಿ. ಶ್ರೀಮತಿ ಪ್ರಿಯದರ್ಶಿನಿ ಸಾಣೆಕೊಪ್ಪ ಮಾತನಾಡಿ, ಜೀವನದಲ್ಲಿ ಒಂದು ಶಕ್ತಿ ಇನ್ನೊಂದು ಸಮಯ. ಈ ಎರಡನ್ನು ಯಾರು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರೋ ಅಂತವರು ಬದುಕನ್ನು ಗೆಲ್ಲುತ್ತಾರೆ. ಇಂದಿನ ಯುವಜನತೆ ಹೆಚ್ಚು ಸಮಯವನ್ನು ಮೊಬೈಲ್ನಲ್ಲಿ ಕಳೆಯುತ್ತಾರೆ. ವಚನ ಸಾಹಿತ್ಯ ಯುವಜನತೆಯನ್ನು ಆಕರ್ಷಿಸಬೇಕೆಂದರೆ ಮನೆಯಲ್ಲಿ ಅದರ ಬಗ್ಗೆ ಅರಿವು ಮೂಡಿಸಬೇಕೆಂದು ನುಡಿದರು.
ಪ್ರಕಾಶ್ಗಿರಿಮಲ್ಲನವರ್ ಮಾತನಾಡಿ, ಹಲವು ದೈವಗಳ ಉಪಾಸನೆಯ ಸಂದರ್ಭದಲ್ಲಿ ಶರಣರು ಏಕ ದೇವರ ಆರಾಧನೆಯನ್ನು ಅದರ ಮಹತ್ವವನ್ನು ತಿಳಿಸಿಕೊಟ್ಟರು. ವಚನ ಸಾಹಿತ್ಯ ಜನ ಸಾಮಾನ್ಯರಿಗೂ ತಲುಪುವಂತಾಗಬೇಕು. ಶರಣ ಬದುಕನ್ನು ತಿಳಿಸಿಕೊಟ್ಟರೆ ಸಾಕು ನಮ್ಮ ಯುವ ಜನ ಬದಲಾಗುತ್ತಾರೆ ಎಂದು ತಿಳಿಸಿದರು.
ಡಾ. ಸೋಮನಾಥ್ ಯಾಳವಾರ ಮಾತನಾಡಿ, ಯುವಜನತೆಯನ್ನು ಶರಣ ಸಾಹಿತ್ಯದತ್ತ ಹೇಗೆ ಎಳೆದು ತರುವುದು ಎಂಬ ವಿಷಯ ಚಿಂತನೆಯೇ ಅರ್ಥಪೂರ್ಣವಾಗಿದೆ. ನಮ್ಮ ಮಕ್ಕಳನ್ನು ಡಾಕ್ಟರ್ ಇಂಜಿನಿಯರ್ ಮಾಡುತ್ತೇವೆ. ಅಮೆರಿಕಾ, ಇಂಗ್ಲೆಂಡ್ ಅಂತಹ ದೇಶಗಳಿಗೆ ಕಳುಹಿಸುತ್ತೇವೆ. ಆದರೆ ತಂದೆ-ತಾಯಿ ಸತ್ತಾಗ ಮಣ್ಣಿಗೆ ಬರಲಾಗುವುದಿಲ್ಲ. ಸಂಪತ್ತು ಅಧಿಕಾರ ಅಷ್ಟೇ ಮುಖ್ಯವಲ್ಲ ಎಂಬುದನ್ನು ತಿಳಿಸಬೇಕಿದೆ. ಆಧುನಿಕ ಮನಸ್ಸುಗಳು ಮಾನವೀಯತೆಯನ್ನು ಕಳೆದುಕೊಳ್ಳುತ್ತಿದೆ. ವಚನಗಳಲ್ಲಿ ಅರಿವಿದೆ. ಆಚಾರವಿದೆ. ಅದನ್ನು ಇಂದಿನ ಯುವಜನತೆಗೆ ಪರಿಚಯಿಸಬೇಕು ಎಂದು ತಿಳಿಸಿದರು.
ವನಕಲ್ಲು ಮಠದ ಡಾ.ರಮಾನಂದ ಸ್ವಾಮಿಗಳು, ಬಸವ ಟಿವಿಯ ಕೃಷ್ಣಪ್ಪ, ದಾವಣಗೆರೆ ಕ.ಸಾ.ಪ ಅಧ್ಯಕ್ಷಡಾ.ವಾಮದೇವಪ್ಪ, ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎನ್.ತಿಪ್ಪೇಸ್ವಾಮಿ, ಸಾಹಿತಿ ಡಾ.ಸಿ.ಶಿವಲಿಂಗಪ್ಪ ಉಪಸ್ಥಿತರಿದ್ದರು