ವಿಜಯಪುರ ,ಜು,02: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು ಡಾ.ಫ.ಗು.ಹಳಕಟ್ಟಿವರು ಎಂದು ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು.
ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ನಿಮಿತ್ತ ಬಿ.ಎಲ್.ಡಿ.ಇ ಸಂಸ್ಥೆ ಆವರಣದಲ್ಲಿರುವ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಮಾತನಾಡಿದ ಅವರು, ಬಸವಣ್ಣ ಹಾಗೂ ಬಸವಾದಿ ಶರಣರು ಬರೆದಂತದಹ ವಚನ ಕಟ್ಟುಗಳು ಕಲ್ಯಾಣ ಕ್ರಾಂತಿಯ ನಂತರ ಮಠ-ಮಂದಿರಗಳಲ್ಲಿ, ಗುಡಿ-ಗುಂಡಾರಗಳಲ್ಲಿ, ಅಂಗಡಿ-ಮನೆಗಳಲ್ಲಿ, ಅಲ್ಲಲ್ಲಿ ಜಗುಲಿಗಳಲ್ಲಿ ಇದ್ದವು. ವಕೀಲಿ ವೃತ್ತಿಯ ನಿಮಿತ್ತ ವಿಜಯಪುರಕ್ಕೆ ಬಂದ ಹಳಕಟ್ಟಿಯವರು ವಿಜಯಪುರದಲ್ಲಿ ವಕೀಲರಾಗಿ, ನಗರ ಸಭೆ ಅಧ್ಯಕ್ಷರಾಗಿ, ವಿಧಾನಪರಿಷತ್ ಸದಸ್ಯರಾಗಿ ಹಲವು ಜನೋಪಯೋಗಿ ಕಾರ್ಯಗಳನ್ನು ಮಾಡಿದರು. ಶೈಕ್ಷಣಿಕವಾಗಿ ಬಿ.ಎಲ್.ಡಿ.ಇ ಸಂಸ್ಥೆಯನ್ನು, ಆರ್ಥಿಕವಾಗಿ ಸಬಲರಾಗಲು ಸಿದ್ದೇಶ್ವರ ಬ್ಯಾಂಕ್, ಆಧ್ಯಾತ್ಮಿಕವಾಗಿ ಚಿಂತಿಸಲು ಶ್ರೀ ಸಿದ್ದೇಶ್ವರ ಸಂಸ್ಥೆ, ರೈತರಿಗಾಗಿ ಬರಗಾಲ ನಿವಾರಣಾ ಸಂಸ್ಥೆ, ನಗರಕ್ಕೆ ಕುಡಿಯುವ ನೀರು ಒದಗಿಸಲು ಭೂತನಾಳ ಕೆರೆ ಮತ್ತಿತರ ಕಾರ್ಯಗಳನ್ನು ಮಾಡಿದ ಸಾಧನೆ ಒಂದಡೆಯಾದರೆ, ವಚನದ ಕಟ್ಟುಗಳನ್ನು ಹುಡುಕಿ, ಹೊರತಂದು ಅದರಲ್ಲಿನ ಸಾಹಿತ್ಯವನ್ನು ತಾವೇ ಸ್ವತಃ ತಮ್ಮ ಶಿವಾನುಭವ ಪತ್ರಿಕೆಯಲ್ಲಿ ಪ್ರಕಟಿಸಿ, 270ಕ್ಕೂ ಹೆಚ್ಚು ವಚನಕಾರರ 10ಸಾವಿರ ವಚನಗಳನ್ನು ಪ್ರಕಟಿಸಿದ ಅವರ ಸಾಧನೆ ಅಪ್ರತಿಮವಾಗಿದೆ ಎಂದರು.
ಹಳಕಟ್ಟಿಯವರ ಅವರ ನೆನಪಿನಲ್ಲಿರುವ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ ತನ್ನ ಉತ್ತಮ ಸಂಶೋಧನಾತ್ಮಕ ಕಾರ್ಯಗಳ ಮೂಲಕ ನಾಡಿನಲ್ಲಿಯೇ ಹೆಸರುವಾಸಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಕೈಗೊಳ್ಳುವ ಯೋಜನೆಗಳನ್ನು ಪ್ರಥಮವಾಗಿ ಹಳಕಟ್ಟಿ ಸಂಶೋಧನ ಕೇಂದ್ರಕ್ಕೆ ನೀಡುತ್ತದೆ. ಅಷ್ಟರ ಮಟ್ಟಿಗೆ ಈ ಕೇಂದ್ರ ಸಾಧನೆ ತೋರಿದೆ ಎಂದರು.
ಬಿ.ಎಲ್.ಡಿ.ಇ ಡೀಮ್ಡ್ ವಿವಿ ಉಪಕುಲಪತಿ ಡಾ.ಆರ್.ಎಸ್.ಮುಧೋಳ, ರಿಜಿಸ್ಟಾರ್ ಡಾ.ಜೆ.ಜಿ.ಅಂಬೇಕರ್, ಹಿರಿಯ ಸಂಶೋಧಕ ಕೃಷ್ಣಕೋಲ್ಹಾರ ಕುಲಕರ್ಣಿ, ಡಾ.ಅರುಣ ಇನಾಮದಾರ, ಡಾ.ರಾಘವೇಂದ್ರ ಕುಲಕರ್ಣಿ, ಹಳಕಟ್ಟಿಯವರ ಮೊಮ್ಮಗ ಗೀರಿಶ ಹಳಕಟ್ಟಿ, ದಾವಣಗೆರೆ ಬಸವ ಕೇಂದ್ರದ ಮಹಾಂತೇಶ ಅಗಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.