ಮೈಲಾರಿ ಹೋಟೆಲ್ ನಲ್ಲಿ ಮಸಾಲೆ ದೋಸೆ ಸವಿದ ಸಿಎಂ
by-ಕೆಂಧೂಳಿ
ಮೈಸೂರು,ಫೆ,೦೧- ಮೈಸೂರು ಕಾರ್ಯಕ್ರಮದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಳಗ್ಗೆ ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್ ಗೆ ಭೇಟಿ ನೀಡಿ ಉಪಹಾರ ಸೇವಿಸಿದರು.
ಇಂದು ಬೆಳಿಗ್ಗೆ ಬೆಂಗಾವಲು ಪಡೆ ಇಲ್ಲದೆ ಖಾಸಗಿ ಕಾರಿನಲ್ಲಿ ಸುತ್ತಿದ ಸಿದ್ದರಾಮಯ್ಯ ಬೆಳಗಿನ ಉಪಹಾರಕ್ಕೆ ಮೈಸೂರಿನ ಪ್ರಸಿದ್ದ ಮೈಲಾರಿ ಹೊಟೇಲ್‌ಗೆ ಭೇಟಿ ನೀಡಿ ಅಲ್ಲಿ ಉಪಾಹಾರ ಸವಿದರುಇಡ್ಲಿ, ಮಸಾಲೆ ದೋಸೆ ಸೇವಿಸಿ ಸಂತಸಪಟ್ಟರು.
ಮುಖ್ಯಮಂತ್ರಿಯಜೊತೆ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಶಾಸಕ ಎ.ಆರ್.ಕೃಷ್ಣಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಜೊತೆಯಲ್ಲಿದ್ದು ಉಪಹಾರ ಸೇವಿಸಿದರು.
ಮುಖ್ಯಮಂತ್ರಿ ಉಪಹಾರಕ್ಕೆ ಆಗಮಿಸಿರುವ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಕಿಕ್ಕಿರಿದು ತುಂಬಿ ಸಿದ್ದರಾಮಯ್ಯರನ್ನು ಕಣ್ತುಂಬಿಕೊಂಡರು. ಇನ್ನು ಕೆಲವರು ದೂರದಿಂದಲೇ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಬಳಿಕ ತಮ್ಮ ನಿವಾಸದ ಬಳಿ ಮುಖ್ಯಮಂತ್ರಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಇದೇವೇಳೆ ಮೈಸೂರಿನ ತಮ್ಮ ಸ್ನೇಹಿತ ಹಾಗೂ ಹಿರಿಯ ವಕೀಲ ಶ್ರೀನಿವಾಸನ್ ಅವರ ಮನೆಗೆ ಮುಖ್ಯಮಂತ್ರಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.