ಚಿತ್ರದುರ್ಗ,ಮೇ,01- ಭೋವಿ ಸಮುದಾಯ ಶ್ರಮ ಹಾಗೂ ಕುಲಕಸುಬುಗಳನ್ನು ಬದುಕನ್ನಾಗಿಸಿಕೊಂಡಿದೆ. ಆದರೆ, ರಾಜ್ಯದಲ್ಲಿ ಒಳಮೀಸಲಾತಿ ಜಾರಿಗಾಗಿ ಜಾತಿಸಮೀಕ್ಷೆ ಕಾರ್ಯ ವೇಳೆ ಕುಲಕಸುಬು ನೋಂದಣಿಗೆ ಅವಕಾಶ ಇಲ್ಲದ ರೀತಿ ಕೈಪಿಡಿ ಸಿದ್ಧಪಡಿಸಿರುವುದು ಸರಿಯಲ್ಲ ಎಂದು ಭೋವಿ ಮಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತಿಗಣತಿ ಕಾರ್ಯ ಸ್ವಾಗತರ್ಹ. ಒಳಮೀಸಲಾತಿ ಜಾರಿ ಪರ ನಾವಿದ್ದೇವೆ. ಆದರೆ, ನ್ಯಾಯಯುತ, ಪಾರದರ್ಶಕವಾಗಿ ಆಗಬೇಕು. ಆದರೆ, ಯಾವುದೋ ಒಂದು ಸಮುದಾಯದ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಕೈಪಿಡಿ ಸಿದ್ಧಪಡಿಸಿದಂತೆ ಕಾಣುತ್ತಿದೆ. ಇದನ್ನು ಸರಿಪಡಿಸಿ ಕಾರ್ಯ ಆರಂಭಿಸಬೇಕು ಎಂದು ಆಗ್ರಹಿಸಿದರು.
ಭೋವಿ ಸಮುದಾಯದಲ್ಲಿ ಮಣ್ಣು, ಕಲ್ಲು, ಕಟ್ಟಡ ನಿರ್ಮಾಣ ಹೀಗೆ ೮೦ಕ್ಕೂ ಹೆಚ್ಚು ಕುಲಕಸುಬುಗಳು ಇವೆ. ಆದರೆ, ಕೇವಲ ಮೂರು ಕುಲಕುಸುಬು ಸೇರಿಸಿದ್ದು, ಉಳಿದವುಗಳನ್ನು ಕೈಬಿಟ್ಟಿರುವುದು ಭೋವಿಗಳ ಕುಲುಕಸುಬುಗಳ ನಾಶಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಸಂಶಯ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಭೋವಿಗಳಂತೆ ಪರಿಶಿಷ್ಟ ಜಾತಿಯಲ್ಲಿನ ಅನೇಕ ಸಮುದಾಯಗಳು ಕುಲಕಸುಬಗಳನ್ನೇ ನಂಬಿ ಜೀವನ ನಡೆಸುತ್ತಿವೆ. ಅವುಗಳನ್ನು ದಾಖಲಿಸುವುದು ಸರ್ಕಾರದ ಕರ್ತವ್ಯ. ಹಾಳೆಯಲ್ಲಿ ದಾಖಲಾಗುವ ಎಲ್ಲ ಅಂಶಗಳು ಇತಿಹಾಸ ಆಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಿ ಜಾತಿಗಣತಿ ಕಾರ್ಯಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಕೋರ್ಟ್ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರು.
ಭೋವಿಗಳಲ್ಲು ಕಲ್ಲು ಪುಡಿ ಮಾಡುವುದು, ಕೆರೆ, ಗೋಕಟ್ಟೆ ನಿರ್ಮಾಣ, ಬಾವಿ ತೋಡುವುದು ಹೀಗೆ ಅನೇಕ ಕಸುಬುಗಳು ಇವೆ. ಇವುಗಳು ದಾಖಲಾಗಬೇಕು. ಇಲ್ಲದಿದ್ದರೇ ಜಗತ್ತಿನಲ್ಲಿ ಈ ಹಿಂದೆ ಅನೇಕ ನಾಗರಿಕತೆ, ಸಂಸ್ಕೃತಿ, ಸಮುದಾಯಗಳ ನಾಶದ ರೀತಿ ಬೋವಿಗಳ ಹಾದಿ ಆಗಲಿದೆ ಎಂಬ ಆತಂಕ ನಮ್ಮಲ್ಲಿ ಮನೆ ಮಾಡಿದೆ ಎಂದರು.
ಜಾತಿಗಣತಿಯನ್ನು ಕೇವಲ ಒಂದು ಜಾತಿಗೆ ಮಾತ್ರ ಮಾಡುವುದಾದರೇ ಇದನ್ನು ಮುಂದುವರೆಸಬಹುದು. ಆದರೆ ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳ ಸಮೀಕ್ಷೆಯನ್ನು ಮಾಡುವುದಾದರೆ ಭೋವಿ ಸಮುದಾಯಕ್ಕೆ ಸಂಬAಧಪಟ್ಟAತೆ ಸರ್ಕಾರದಲ್ಲಿ ಆಗಿರುವ ತಪ್ಪನ್ನು ಸರಿಪಡಿಸಿ ಜಾತಿ ಗಣತಿಯನ್ನು ನಡೆಸಬೇಕಿದೆ. ಇಲ್ಲವಾದಲ್ಲಿ ಭೋವಿ ಸಮಾಜಕ್ಕೆ ಅನ್ಯಾಯವಾಗುತ್ತದೆ, ಮುಂದಿನ ದಿನದಲ್ಲಿ ಸರ್ಕಾರ ಯಾವುದಾದರೂ ಯೋಜನೆಗಳನ್ನು ರೂಪಿಸಬೇಕಾದರೆ ಈ ದತ್ತಾಂಶ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರಿಯಾದ ರೀತಿಯಲ್ಲಿ ಜಾತಿಗಣತಿ ಮಾಡಬೇಕಿದೆ ಎಂದು ಆಗ್ರಹಿಸಿದರು.
ಭೋವಿ ಸಂಘ ಜಿಲ್ಲಾಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ನಗರಸಭೆಯ ಮಾಜಿ ಸದಸ್ಯ ಈ.ಮಂಜುನಾಥ್, ಮಠದ ಸಿಇಓ ಗೌನಹಳ್ಳಿ ಗೋವಿಂದಪ್ಪ, ಗುತ್ತಿಗೆದಾರ ಲಕ್ಷ್ಮಣ್ ಇದ್ದರು.