ಸಚಿವ ಸೋಮಶೇಖರ್ ಕಾರ್ಯಗಳ ಶ್ಲಾಘಿಸಿದ ಉಪೇಂದ್ರ

Share

ಬೆಂಗಳೂರು,ಮೇ,20: ಕೋವಿಡ್ 19 ರ ಈ ಸಂದರ್ಭದಲ್ಲಿ ಜನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇದು ಎಲ್ಲರಿಗೂ ಮಾದರಿಯಾಗಿದೆ ಎಂದು ನಟ, ನಿರ್ದೇಶಕರಾದ ಉಪೇಂದ್ರ ಹೇಳಿದರು
ಕುಂಬಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೃಪಪಟ್ಟ ಕುಟುಂಬಗಳಿಗೆ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ವೈಯಕ್ತಿಕವಾಗಿ ಕೊಡಮಾಡುವ ತಲಾ ರೂ.1 ಲಕ್ಷಗಳ ಪರಿಹಾರವನ್ನು ನೀಡಿ ಮಾತನಾಡಿದ ಉಪೇಂದ್ರ ಅವರು, ಸಚಿವರಾದ ಸೋಮಶೇಖರ್ ಅವರು ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬ ಮಾತನ್ನು ಸುಳ್ಳು ಮಾಡುತ್ತಿದ್ದಾರೆ. ಅವರು ಯಾವುದನ್ನೂ ಬಚ್ಚಿಡುತ್ತಿಲ್ಲ. ತಮ್ಮಲ್ಲಿರುವುದನ್ನು ಎಲ್ಲರಿಗೂ ಹಂಚುವ ಮೂಲಕ ಎಲ್ಲರಿಗೂ ಮಾದರಿಯಾಗಿ ನಡೆಯುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಇಂದು ಜಗತ್ತಿಗೇ ಕೊರೋನಾ ಮಹಾಮಾರಿ ಬಂದಿದ್ದು, ಮಾನವೀಯತೆಗೆ ಮತ್ತು ಮನುಷ್ಯತ್ವಕ್ಕೆ ನಾವು ಬೆಲೆ ಕೊಡಬೇಕಿದೆ. ಮನುಷ್ಯತ್ವವನ್ನು ಪರೀಕ್ಷೆ ಮಾಡುವ ಸಮಯ ಇದಾಗಿದೆ. ಈ ನಿಟ್ಟಿನಲ್ಲಿ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಉಪೇಂದ್ರ ತಿಳಿಸಿದರು.
ಕೊರೋನಾ ಬಗ್ಗೆ ಯಾರಿಗೂ ಭಯ ಬೇಡ, ಎಲ್ಲರೂ ವ್ಯಾಕ್ಸಿನೇಶನ್ ಹಾಕಿಸಿಕೊಳ್ಳಬೇಕು. ಇದರಿಂದ ನಿಮಗೆ ಧೈರ್ಯಬರುವುದಲ್ಲದೆ, ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಶುಚಿಯಾಗಿರುವುದಲ್ಲದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸದಾ ಧನಾತ್ಮಕ ಚಿಂತನೆಯನ್ನು ಮಾಡಬೇಕು. ಯಾರೂ ಸಹ ಎದೆಗುಂದಬಾರದು ಎಂದು ಉಪೇಂದ್ರ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್, ಈ ಬಾರಿ ಕೊರೋನಾ ಎರಡನೇ ಅಲೆ ಬಹಳ ವೇಗವಾಗಿ ಬೆಳೆಯುತ್ತಿದೆ. ಮೊದಲ ಅಲೆಗಿಂತ ಹೆಚ್ಚಾಗಿ ಸಾವು-ನೋವುಗಳಾಗುತ್ತಿದೆ. ಇದಕ್ಕಾಗಿ ನಾವು ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಇತ್ತೀಚೆಗೆ ಮೂರ್ನಾಲ್ಕು ಕಡೆ ಟ್ರಯಾಜ್ ಸೆಂಟರ್ ಅನ್ನು ತೆರೆದಿದ್ದೇವೆ. ಇಲ್ಲಿಗೆ ಸೋಂಕಿತರು ಭೇಟಿ ನೀಡಿದರೆ, ಅಲ್ಲಿ ವೈದ್ಯರು ಯಾವ ರೀತಿಯ ಚಿಕಿತ್ಸೆಯ ಅವಶ್ಯಕತೆ ಇದೆ ಎಂಬುದನ್ನು ಸೂಚಿಸುತ್ತಾರೆ. ಮನೆಯಲ್ಲಿದ್ದು ಚಿಕಿತ್ಸೆ ಪಡೆಯಬಹುದಾ..? ಆಸ್ಪತ್ರೆಗೆ ದಾಖಲಾಗಬೇಕಾ? ಆಕ್ಸಿಜನ್ ಅಗತ್ಯವಿದೆಯೇ? ಎಂಬಿತ್ಯಾದಿಗಳನ್ನು ಪರೀಕ್ಷಿಸಿ ಮಾಹಿತಿಯನ್ನು ಕೊಡಲಿದ್ದಾರೆ ಎಂದು ತಿಳಿಸಿದರು.

ಜನಸೇವಾ ಕೇಂದ್ರದಲ್ಲಿ ನಿರ್ಮಲ್ ಜೀ ಅವರು 100 ಬೆಡ್ ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನದ ಊಟ, ಮೆಡಿಸಿನ್ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಇಲ್ಲಿ ಮಾಡಲಾಗಿದ್ದು, ಇನ್ನು ಮನೆಯಲ್ಲಿ ಯಾರಾದರೊಬ್ಬರಿಗೆ ಸೋಂಕು ತಗುಲಿದರೆ, ಮನೆಯವರಿಗೆ ಬರಬಾರದು ಎಂಬ ದೃಷ್ಟಿಯಿಂದ ಇಲ್ಲಿಗೆ ಬಂದು ದಾಖಲಾಗಬಹುದು. ಇಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್ಲರೂ ಇಲ್ಲಿ ಗುಣಮುಖರಾಗಿ ವಾಪಸ್ ಬರುತ್ತಿದ್ದಾರೆ ಎಂದು ತಿಳಿಸಿದರು.

ಕೋವಿಡ್ ಯಾರಿಗೇ ಬಂದರೂ ಮುಚ್ಚಿಡಬೇಡಿ. ಧೈರ್ಯವಾಗಿ ಹೇಳಿಕೊಳ್ಳಿ, ಕೋವಿಡ್ ಬಂದು ವಿಕೋಪಕ್ಕೆ ಹೋದರೆ ಯಾರೂ ರಕ್ಷಣೆ ಮಾಡಲಾಗದು. ಹೀಗಾಗಿ ಕೋವಿಡ್ ಕೇರ್ ಸೆಂಟರ್, ಟ್ರಯಾಜ್ ಗಳನ್ನು ಬಳಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಿಂದಲೂ ಸರ್ಕಾರಿ ಬೆಡ್ ಗಳನ್ನು ಪಡೆಯುತ್ತಿದ್ದೇವೆ. ಐಸಿಯುಗಳಲ್ಲಿ ವೆಂಟಿಲೇಟರ್ ಗಳು, ಆಕ್ಸಿಜನ್ ಕೊರತೆ ಇತ್ತು. ಆದಿಚುಂಚನಗಿರಿ ಮಹಾಸಂಸ್ಥಾನದ ಸ್ವಾಮೀಜಿ ಅವರ ಬಳಿ ಮನವಿ ಮಾಡಿಕೊಂಡು ಬಿಜಿಎಸ್ ಆಸ್ಪತ್ರೆಯಿಂದ 210 ಬೆಡ್ ಅನ್ನು ಹೆಚ್ಚುವರಿಯಾಗಿ ಪಡೆಯಲಾಗಿದೆ. 43 ವೆಂಟಿಲೇಟರ್ ಬೆಡ್ ಗಳ ಸೌಲಭ್ಯವೂ ಸಿಕ್ಕಿದೆ. ಹೆಚ್ಚುವರಿ ಆಕ್ಸಿಜನ್ ಸಿಲಿಂಡರ್ ಗಳ ಬೇಡಿಕೆಯನ್ನು ಇಡಲಾಗಿದ್ದು, ಅದೂ ಸಹ ಪೂರೈಕೆಯಾಗಲಿದೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದವರಿಗೆ ನಾನು ವೈಯಕ್ತಿಕ ನೆರವು ನೀಡುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.
ನಾವೂ ಸಹ ಮಾಸ್ಕ್, ಸ್ಯಾನಿಟೈಸರ್ ಗಳನ್ನು ಉಚಿತವಾಗಿ ಕೊಡುತ್ತಿದ್ದೇವೆ. ನಾಗರಿಕರು ಧೈರ್ಯವಾಗಿರಬೇಕು. ಸರ್ಕಾರ ಸಹ ಗ್ರಾಮ ಪಂಚಾಯಿತಿಗಳಿಗೆ 50 ಸಾವಿರ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಇದನ್ನು ಕೋವಿಡ್ ಸಂಬಂಧಪಟ್ಟಂತೆ ಖರ್ಚು ಮಾಡಲು ಬಳಸಬಹುದಾಗಿದೆ. ಜೊತೆಗೆ ಪಂಚಾಯಿತಿ ಅಧ್ಯಕ್ಷರನ್ನೊಳಗೊಂಡ ಟಾಸ್ಕ್ ಫೋರ್ಸ್ ರಚಿಸಲು ಸಹ ಸರ್ಕಾರ ಅನುಮತಿ ನೀಡಿದೆ ಎಂದು ಸಚಿವ ಸೋಮಶೇಖರ್ ಮಾಹಿತಿ ನೀಡಿದರು.
ವ್ಯಾಕ್ಸಿನೇಶನ್ ಪ್ರಕ್ರಿಯೆಯನ್ನು ಸಹ ಚುರುಕುಗೊಳಿಸಲಾಗುತ್ತಿದೆ. 2 ಡೋಸ್ ಪಡೆದವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅವರಿಗೆ ಮುಂದೆ ಅಷ್ಟಾಗಿ ಪರಿಣಾಮ ಬೀರದು. ನಮ್ಮ ಕ್ಷೇತ್ರದಲ್ಲಿ ಅಗತ್ಯ ಸೌಲಭ್ಯವನ್ನು ನೀಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಮೊದಲ ಆದ್ಯತೆ ನಿಡಿ, 2ನೇ ಡೋಸ್ ಗೆ ಪ್ರಾಧಾನ್ಯತೆ ನೀಡುತ್ತಿದ್ದೇವೆ. ಎಲ್ಲರೂ ಲಸಿಕೆ ಪಡೆಯಿತಿ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಗುರೂಜಿಯವರಾದ ಡಾ. ಚಂದ್ರಶೇಖರನಾಥ ಸ್ವಾಮೀಜಿ ಅವರು ಜೊತೆಗಿದ್ದರು. ಜನಸೇವಾ ಕೇಂದ್ರದ ಅಧ್ಯಕ್ಷರಾದ ನಿರ್ಮಲ್ ಜೀ ಅವರು ಇದ್ದರು.

Girl in a jacket
error: Content is protected !!