ಬೆಂಗಳೂರು ನಗರ ವಿಶ್ವವಿದ್ಯಾನಿಲಯ; *ಕಣ್ಮನ ಸೂರೆಗೊಂಡ ವಿನ್ಯಾಸ ವೈಭವ-2 ಫ್ಯಾಷನ್ ಶೋ

Share

ಬೆಂಗಳೂರು,ಆ,-04-  ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಫ್ಯಾಷನ್ ಮತ್ತು ಉಡುಪು ವಿನ್ಯಾಸ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ “ವಿನ್ಯಾಸ ವೈಭವ-2” ಫ್ಯಾಷನ್ ಶೋ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡು ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಒಟ್ಟು 12 ತಂಡಗಳ 64 ವಿದ್ಯಾರ್ಥಿಗಳು ವಿವಿಧ ಪರಿಕಲ್ಪನೆಗಳನ್ನು ಆಧರಿಸಿದ ವರ್ಣರಂಜಿತ ಉಡುಪು ವಿನ್ಯಾಸ ಪ್ರದರ್ಶಿಸುತ್ತಾ ಆಕರ್ಷಕ ಹಾವಭಾವಗಳ ಬಿಂಕದ ನಡಿಗೆಯ ಮೂಲಕ ಸಭಿಕರನ್ನು ಬೆರಗುಗೊಳಿಸಿದರು.
ಝಗಮಗಿಸುವ ಬೆಳಕಿನ ಚಿತ್ತಾರಗಳ ಹಿನ್ನೆಲೆಯ ವೇದಿಕೆಯ ಮೇಲೆ ಸಾಂಪ್ರದಾಯಿಕ ಶೈಲಿಯ ಜೊತೆಗೆ ಆಧುನಿಕ ಮೆರುಗಿನ ಬಗೆಬಗೆಯ ವಿಶಿಷ್ಟ ಕಲಾತ್ಮಕತೆಯ ಉಡುಪುಗಳನ್ನು ಧರಿಸಿದ ವಿದ್ಯಾರ್ಥಿಗಳು ವೃತ್ತಿಪರ ರೂಪದರ್ಶಿಗಳ ವಯ್ಯಾರ ಸರಿಗಟ್ಟಿದಾಗ ಸಭಿಕರು ಕರತಾಡನದ ಸುರಿಮಳೆಗರೆದರು.
ಕರ್ನಾಟಕದ ಯಕ್ಷಗಾನ ವೇಷಧಾರಿಯ ನೃತ್ಯದೊಂದಿಗೆ ಆರಂಭವಾದ ಈ ದೃಶ್ಯ ವೈಭವದಲ್ಲಿ ಕೇರಳದ ಓಣಂ ಉಡುಗೆಯಿಂದ ಅಮೆರಿಕಾದ ಬುಡಕಟ್ಟು ಜನರ ವೇಷಭೂಷಣದವರೆಗೆ ವೈವಿಧ್ಯಮಯ ಸಂಸ್ಕೃತಿಯನ್ನು ಅನಾವರಣಗೊಳಿಸಿದ ಯುವ ಪ್ರತಿಭೆಗಳ ಪರಿಶ್ರಮ ಪ್ರಶಂಸನೀಯವಾಗಿತ್ತು.
ಬಿಸಿಯು ಪ್ರಭಾರ ಕುಲಪತಿಗಳಾದ ಪ್ರೊ.ಕೆ.ಆರ್. ಜಲಜಾ, ಕುಲಸಚಿವ ( ಮೌಲ್ಯಮಾಪನ) ಪ್ರೊ. ಬಿ.ರಮೇಶ್,ವಿತ್ತಾಧಿಕಾರಿಗಳಾದ ಎಂ.ವಿ.ವಿಜಯಲಕ್ಷ್ಮಿ, ವಿಭಾಗ ಮುಖ್ಯಸ್ಥರಾದ ಪ್ರೊ. ವಿ. ಆರ್. ದೇವರಾಜ್ ಸಮಾರಂಭದಲ್ಲಿ ಪಾಲ್ಗೊಂಡು ಸ್ಪರ್ಧಿಗಳನ್ನು ಅಭಿನಂದಿಸಿ ಬಹುಮಾನಗಳನ್ನು ವಿತರಿಸಿದರು.
ಮಿಸೆಸ್ ಏಷ್ಯಾ ಬಿರುದು ಪುರಸ್ಕೃತ ಪ್ರತಿಭಾ ಸೌಂಷಿಮಠ್ ಮತ್ತು ವಿದ್ಯಾ ಫ್ಯಾಷನ್ ಅಕಾಡೆಮಿಯ ವಿದ್ಯಾ ವಿವೇಕ್ ತೀರ್ಪುಗಾರರಾಗಿ ಆಗಮಿಸಿದ್ದರು.
*ಬಹುಮಾನ ವಿಜೇತರು:*
ವರ್ಷದ ವಿನ್ಯಾಸಕಿ-ಸುಷ್ಮಾ, ಅತ್ಯುತ್ತಮ ಕಲಾತ್ಮಕ ಉಡುಪು-ಚೈತ್ರಾ, ಅತ್ಯುತ್ತಮ ಕಸೂತಿ ಕೆಲಸ- ಸ್ಮೃತಿ, ಅತ್ಯುತ್ತಮ ವರ್ಣ ಸಂಯೋಜನೆ- ರೇಷ್ಮಾ, ಅತ್ಯುತ್ತಮ ಪರಿಕಲ್ಪನೆ-ಶರ್ಲಿ, ಅತ್ಯುತ್ತಮ ಸಮರ್ಪಣೆ- ಆರ್.ಪ್ರೀತಿ .

Girl in a jacket
error: Content is protected !!