ಬಿಬಿಎಂಪಿ ನಿರ್ಲಕ್ಷ್ಯವೇ ಮಳೆ ಅವಾಂತರಕ್ಕೆ ಕಾರಣ

Share

ಬೆಂಗಳೂರು,ಅ.04:ಬಿಬಿಎಂಪಿ ಅಧಿಕಾರಿಗಳಿಗೆ ಇನ್ನೂ ಬುದ್ದಿ ಬಂದಂತಿಲ್ಲ.ಪ್ರತಿ ಬಾರಿ ಮಳೆ ಬಂದಾಗಲೂ ಹಲವಾರು ಅವಾಂತರಗಳು ಸೃಷ್ಟಿಯಾದಾಗುತ್ತಲೆ ಇವೆ ಆದರೆ ಮುಂದಿನ ಬಾರಿ ಹಾಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂಬ ಮಾತು ಈಗ ಬೆಂಗಳೂರನ್ನೆ ಹಾಳು ಮಾಡಿದೆ.

ರಾತ್ರಿ ಬಂದ ಮಳೆಗೆ ಹಲವಾರು ಪ್ರದೇಶದಲ್ಲಿ ಮಳೆ ನೀರು ನುಗ್ಗಿ ಅವಾಂತರವಾಗಿದೆ ಈಗಲೂ ಅದೇ ಮಾತು…ಇಂತ ನಾಲಾಯಕ್ ಅಧಿಕಾರಿಗಳಿಂದ ಎಷ್ಟು ಸಂಸಾರಗಳು ಬಲಿಯಾಗಬೇಕು?

ನಿನ್ನೆ ರಾತ್ರಿಯಿಡೀ ಸಿಲಿಕಾನ್​ ಸಿಟಿಯಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸುಮಾರು 2 ಗಂಟೆಗಳ ಭೀಕರ ರಣಮಳೆ ಬೆಂಗಳೂರು ಜನರ ಜೀವನವನ್ನು ತೊಯ್ದು ತೊಪ್ಪೆ ಮಾಡಿದೆ. ರಾತ್ರಿ ಸುಮಾರು 10 ಗಂಟೆಗೆ ಶುರುವಾದ ಮಳೆರಾಯನ ಆರ್ಭಟದಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನಿನ್ನೆ ರಾತ್ರಿ ಬೆಂಗಳೂರಿನ‌ ಹಲವೆಡೆ ವರುಣನ ಆರ್ಭಟ ಜೋರಾಗಿತ್ತು. ಮೆಜೆಸ್ಟಿಕ್, ಚಾಮರಾಜಪೇಟೆ, ಮಲ್ಲೇಶ್ವರಂ, ರಾಜಾಜಿ ನಗರ ಸುತ್ತಮುತ್ತ ಮಳೆಯಾಗಿದೆ. ಜೊತೆಗೆ ಜಯನಗರ, ಬನಶಂಕರಿ, ಜೆ.ಪಿ ನಗರ, ಮೈಕೋ ಲೇ ಔಟ್ ಸುತ್ತಮುತ್ತಲೂ ಮಳೆ ಸುರಿದಿದೆ.

ಗೋದಾಮಿಗೆ ನುಗ್ಗಿದ ನೀರು:

ಬೆಂಗಳೂರಿನಲ್ಲಿ ಮಳೆಯ ಅವಾಂತರಗಳು ಒಂದೆರಡಲ್ಲ. ಜೆಸಿ ನಗರದ ಗೋದಾಮಿಗೆ ಮಳೆಯ ನೀರು ನುಗ್ಗಿದ್ದು, ಮಾಲೀಕ ಕಂಗಾಲಾಗಿದ್ದಾನೆ. ಸಂಪಂಗಿರಾಮ ನಗರದ ಮನೆಗಳಿಗೆ ಮಳೆನೀರು ನುಗ್ಗಿದೆ.

ಕಾಂಪೌಂಡ್ ಗೋಡೆ ಕುಸಿತ:

ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆ ಹಿನ್ನಲೆ, ಹೆಚ್ಎಎಲ್ ಬಳಿಯ ರಮೇಶ್ ನಗರದಲ್ಲಿ ಕಾಂಪೌಂಡ್ ಗೋಡೆ ಕುಸಿತವಾಗಿದೆ. ಕಾಂಪೌಂಡ್ ಗೋಡೆ ಕುಸಿತಕ್ಕೆ ಸುಮಾರು 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ನಾಲ್ಕು ಕಾರು, ಮೂರು ಆಟೋ ಸೇರಿದಂತೆ 10ಕ್ಕೂ ಹೆಚ್ಚು ವಾಹನಗಳು ಜಖಂ ಆಗಿವೆ. 12 ಅಡಿ ಎತ್ತರದ ಸುಮಾರು 200 ಮೀಟರ್ ಉದ್ದದ ಕಾಂಪೌಂಡ್​​ ಗೋಡೆ ಕುಸಿತವಾಗಿದೆ. ಹೆಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಹೆಚ್ಎಎಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಐಡಿಯಲ್​​ ಹೋಮ್ಸ್​ಗೆ ನುಗ್ಗಿದ  ನೀರು

ರಾತ್ರಿ ಸುರಿದ ಮಳೆಗೆ ನಗರದಲ್ಲಿ ಭಾರಿ ಅವಾಂತರಗಳು ಸೃಷ್ಟಿಯಾಗಿರುವುದು ಸುಳ್ಳಲ್ಲ. ಆರ್ ಆರ್ ನಗರದ ಐಡಿಯಲ್ ಹೋಮ್ಸ್​ಗೆ ರಾಜಕಾಲುವೆ ನೀರು ನುಗ್ಗಿದೆ. ಆರ್ ಆರ್ ನಗರದ ಐಡಿಯಲ್ ಹೋಮ್ಸ್ ಶಿವಣ್ಣ ಎಂಬುವರ ಮನೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಮಳೆ ನೀರು ನುಗ್ಗಿದ ರಭಸಕ್ಕೆ ಮನೆಯ ಬಾಗಿಲು ಕಿತ್ತುಕೊಂಡು ಬಂದಿದೆ. ಸುಮಾರು ಐದಾರು ಅಡಿಗಳಷ್ಟು ನೀರು ಮನೆಗೆ ನುಗ್ಗಿದ್ದು, ಜನರು ಪರದಾಟ ನಡೆಸುವಂತಾಯಿತು.

ಅಧಿಕಾರಿಗಳ ನಿರ್ಲಕ್ಷ್ಯ:

ಐಡಿಯಲ್ ಹೋಮ್ಸ್ ಹಾಗೂ ಜನಪ್ರಿಯ ಲೇಔಟ್​​​ನಲ್ಲಿ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಭಾರಿ ಮಳೆ ಹಿನ್ನಲೆ ರಾಜಕಾಲುವೆ ತುಂಬಿ ಆ ನೀರು ಮನೆಗಳಿಗೆ ನುಗ್ಗಿದೆ. ರಾತ್ರಿಯಿಡೀ ಮಳೆಯಲ್ಲಿ ಪರದಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಾರದೆ ನಿಲರ್ಕ್ಷ್ಯ ತೋರಿದ್ದಾರೆ. ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ವಸ್ತುಗಳು, ಬಟ್ಟೆ ಬರೆಗೆ ಹಾನಿಯಾಗಿದೆ.

ಕುರುಬರಹಳ್ಳಿಯಲ್ಲಿ ಮನೆಗಳು ಜಲಾವೃತ

ರಾತ್ರಿ ಸುರಿದ ರಣಭೀಕರ ಮಳೆಗೆ ಕುರುಬರಹಳ್ಳಿಯ ಪೈಪ್ ಲೈನ್ ರಸ್ತೆಯ ಜನರು ತೊಯ್ದು ತೊಪ್ಪೆಯಾಗಿದ್ದಾರೆ. ಎರಡು ಗಂಟೆ ಸುರಿದ ಧಾರಾಕಾರ ಮಳೆಗೆ ಕುರುಬರಹಳ್ಳಿ ಪೈಪ್​​ಲೈನ್​ ರಸ್ತೆಯಲ್ಲಿನ ಮನೆಗಳು ಜಲಾವೃತಗೊಂಡಿವೆ. ರಾತ್ರಿಯಿಡೀ ಮನೆಗಳಲ್ಲಿ ಜನ ಜಾಗರಣೆ ಮಾಡುವಂತಾಯಿತು. ನೀರು ಹೊರ ಹಾಕಲು ನಿವಾಸಿಗಳು ಹರಸಾಹಸ ಪಡಬೇಕಾಯಿತು.

ಜನರ ನೆಮ್ಮದಿ ಕಸಿದ ಮಳೆರಾಯ

ಇನ್ನು, ನಾಗರಭಾವಿಯ ಬಿಡಿಎ ಲೇಔಟ್, ಮಲ್ಲತ್ತಹಳ್ಳಿಯಲ್ಲಿಯೂ ಮಳೆರಾಯ ಜನರ ನೆಮ್ಮದಿ ಕಿತ್ತುಕೊಂಡಿದ್ದಾನೆ. ರಾತ್ರಿ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆ, ಮನೆ ಬಳಿ ನಿಲ್ಲಿಸಿದ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ.

ನಗರದ ರಾಮಮೂರ್ತಿನಗರದಲ್ಲಿ ಭಾರೀ ಮಳೆಗೆ ರಸ್ತೆಗಳು ಕೆರೆಯಂತಾಗಿವೆ. ರಾಜಕಾಲುವೆ ತುಂಬಿ ಕೊಳಚೆ ನೀರು ರಸ್ತೆಗೆ ಬಂದಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ. ಸಂಚಾರ ಅಸ್ತವ್ಯಸ್ತವಾಗಿದೆ.

ಒಟ್ಟಾರೆ, ರಾತ್ರಿ 2 ಗಂಟೆಗಳ ಕಾಲ ಸುರಿದ ರಣಭೀಕರ ಮಳೆಗೆ ಸಿಲಿಕಾನ್​ ಸಿಟಿಯ ಜನತೆ ಹೈರಾಣಾಗಿದ್ದಾರೆ. ಹೆಬ್ಬಾಳ, ಕುರುಬರಹಳ್ಳಿ ಪೈಪ್ ಲೈನ್ ರಸ್ತೆ, ಸಂಪಂಗಿರಾಮನಗರ, ಓಲ್ಡ್ ಏರ್ಪೋರ್ಟ್ ರಸ್ತೆ, ರಿಚ್ಮಂಡ್ ಟೌನ್, ಜೆ ಸಿ ನಗರ, ಮಲ್ಲತ್ತಹಳ್ಳಿ, ನಾಗರಭಾವಿ, ರಾಮಮೂರ್ತಿನಗರ, ಆರ್ ಆರ್ ನಗರದ ಐಡಿಯಲ್ ಹೋಮ್ಸ್ ಮತ್ತು ಜನಪ್ರಿಯ ಲೇಔಟ್ ನಲ್ಲಿ ಮಳೆ ಅವಾಂತರ ಸೃಷ್ಟಿಸಿದೆ.

ಭಾರಿ ಮಳೆಯಿಂದಾಗಿ ರಾಜಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಿದೆ. ಎರಡು ಗಂಟೆಯ ಮಳೆ ಸಿಲಿಕಾನ್​ ಸಿಟಿಯ ಜನರನ್ನು ತೊಯ್ದು ತೊಪ್ಪೆ ಮಾಡಿದೆ. ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದರಿಂದ ಮಳೆ ನೀರು ಹೊರ ಹಾಕಲು ರಾತ್ರಿಯಿಡೀ ಜನರು ಹರಸಾಹಸ ಮಾಡಿದರು.

Girl in a jacket
error: Content is protected !!