ಬಿಬಿಎಂಪಿಯಿಂದ ಪ್ರಾಣಿಗಳ ಕುರಿತು ಜಾಗೃತಿ ಅಭಿಯಾನ
ಬೆಂಗಳೂರು: ಜ. 19-ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮುದಾಯ ಪ್ರಾಣಿಗಳ ಕುರಿತು ನಾಗರೀಕರಲ್ಲಿ ಅರಿವು ಮೂಡಿಸಲು ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದ್ದು, ಇಂದು 4 ವಲಯಗಳಲ್ಲಿ ಅಭಿಯಾನ ನಡೆಸಲಾಯಿತು.
ಬಿಬಿಎಂಪಿ ಪಶುಪಾಲನೆ ವಿಭಾಗದಿಂದ “ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕ ಆರೋಗ್ಯ”ದ ಶೀರ್ಷಿಕೆಯಡಿ ಸಮುದಾಯ ಪ್ರಾಣಿಗಳ ಸಹಬಾಳ್ವೆ ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ವಲಯಗಳಲ್ಲೂ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ.
ಸಮುದಾಯ ಪ್ರಾಣಿಗಳಿಗಾಗಿ ಪಾಲಿಕೆಯ ಪಶುಪಾಲನಾ ವಿಭಾಗದಿಂದ ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಪ್ರಾಣಿಗಳ ಕುರಿತು ಯಾವೆಲ್ಲಾ ಕಾಯ್ದೆಗಳಿವೆ, ನಾಗರೀಕರು ಏನು ಮಾಡಬಹುದು-ಏನು ಮಾಡಬಾರದು, ಏನಾದರು ಸಮಸ್ಯೆಯಾದರೆ ಯಾರನ್ನು ಸಂಪರ್ಕಿಸಬೇಕು ಸೇರಿದಂತೆ ಇನ್ನಿತ್ಯಾದಿ ವಿಷಯಗಳ ಕುರಿತು ನಾಗರೀಕರಲ್ಲಿ ಅರಿವು ಮೂಡಿಸಲಾಯಿತು.
ನಾಗರೀಕರಿಂದ ಸಮುದಾಯದ ಪ್ರಾಣಿಗಳಿಗೆ ಆಗುವ ಸಮಸ್ಯೆಗಳನ್ನು ತಪ್ಪಿಸಲು, ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಅದಲ್ಲಿ ಯಾವ ರೀತಿ ಪಾಲ್ಗೊಳ್ಳಬೇಕು. ಮುನುಷ್ಯರಂತೆಯೇ ಪ್ರಾಣಿಗಳು ಕೂಡಾ ಎಂಬುದನ್ನು ಅರಿತು ಅವುಗಳ ಜೊತೆ ಕೂರತೆಯಿಂದ ವರ್ತಿಸದೆ ಸೌಹಾರ್ದತೆಯಿಂದಿರುವುದನ್ನು ತೊಡಗಿಸಿಕೊಳ್ಳಲು ಅರಿವು ಮೂಡಿಸಲಾಯಿತು.
4 ವಲಯಗಳ ವಿವಿಧ ಸ್ಥಳಗಳಲ್ಲಿ ಜಾಗೃತಿ:
ಆರ್.ಆರ್ ನಗರ ವಲಯದ ಮೈಸೂರು ರಸ್ತೆಯ ಗೋಪಾಲನ್ ಆರ್ಕೇಡ್ ಮಾಲ್‌ನಲ್ಲಿ ನೃತ ರೂಪಕದಲ್ಲಿ ಅಲ್ಲಿ ಸಮುದಾಯದ ಪ್ರಾಣಿಗಳ ಕುರಿತು ಅರಿವು ಮೂಡಿಸಲಾಯಿತು. ಈ ವೇಳೆ 200ಕ್ಕೂ ಹೆಚ್ಚು ಮಂದಿಗೆ ಮಾನವ ಪ್ರಾಣಿಗಳ ಸಹಬಾಳ್ವೆಯ ಬಗ್ಗೆ ಅರಿವು ಮೂಡಿಸಲಾಯಿತು.
ಮಹಾದೇವಪುರದ ವಲಯ ವ್ಯಾಪ್ತಿಯಲ್ಲಿ ನೆಕ್ಸಸ್ ಶಾಂತಿನಿಕೇತನ, ಬ್ರೂಕ್‌ಫೀಲ್ಡ್, ಪಾರ್ಕ್ ಸ್ಕ್ವೇರ್, ನೆಕ್ಸಸ್ ವೈಟ್‌ಫೀಲ್ಡ್, ಬೆಂಗಳೂರು ಸೆಂಟ್ರಲ್ ಮಾಲ್ ಗಳಲ್ಲಿ ನಾಗರೀಕರಲ್ಲಿ ಜಾಗೃತಿ ಅಭಿಯಾನ ಮೂಡಿಸಲಾಯಿತು.
ಅದಲ್ಲದೆ, ಪೂರ್ವ ವಲದಲ್ಲಿ ಫನ್ ವರ್ಲ್ಡ್, ಕುಮಾರ ಪಾರ್ಕ್, ತರಳಬಾಳಿ ರಸ್ತೆ, ಬೊಮ್ಮನಹಳ್ಳಿ ವಲಯದಲ್ಲಿ ಕೋಡಿಚಿಕ್ಕನಹಳ್ಳಿಯ ಶನೇಶ್ವರ ದೇವಸ್ಥಾನ, ಕೂಡ್ಲು ಗೇಟ್ ಹಾಗೂ ಇನ್ನಿತರೆ ಸ್ಥಳಗಲ್ಲಿ ಇಂದು ಕಾರ್ಯಕ್ರಮ ನಡೆಸಲಾಯಿತು.
ಬೀದಿ ನಾಟಕ,ನೃತ್ಯದ ಮೂಲಕ ಜಾಗೃತಿ:
ನಗರದ 4 ವಲಯಗಳಲ್ಲಿ ಸಮುದಾಯದ ಪ್ರಾಣಿಗಳ ಕುರಿತು ಬೀದಿ ನಾಟಕ, ನೃತ್ಯದ ಮೂಲಕ ನಾಗರೀಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಬಿತ್ತಿಪತ್ರಗಳನ್ನು ಕೂಡಾ ವಿತರಣೆ ಮಾಡಲಾಯಿತು.
ಈ ವೇಳೆ ಪಶುಪಾಲನಾ ವಿಭಾಗದ ಸಹಾಯಕ ನಿರ್ದೇಶಕರಾದ ಡಾ. ವೆಂಕಟೇಶ್, ಡಾ. ರುದ್ರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.