ಪೇಜಾವರರ ಹೇಳಿಕೆ ಹಾಸ್ಯಾಸ್ಪದ :ಡಾ. ಆರೂಢಭಾರತೀ ಸ್ವಾಮೀಜಿ.

Share

ಬೆಂಗಳೂರು,ಅ,26:ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಸರ್ಕಾರವು ಬ್ರಾಹ್ಮಣೇತರರನ್ನು ಅರ್ಚಕರನ್ನಾಗಿ ನೇಮಿಸುತ್ತಿದ್ದು, ಅರ್ಚಕವೃತ್ತಿಯನ್ನು ಬ್ರಾಹ್ಮಣರಿಂದ ಕಿತ್ತುಕೊಳ್ಳುವ ಪ್ರಯತ್ನವಾಗಿದ್ದು, ಸರ್ಕಾರವು ಅರ್ಚಕ ಉದ್ಯೋಗವನ್ನು ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಮೀಸಲಿಡಬೇಕೆಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ಭಾನುವಾರ ಮೈಸೂರಿನ ವಿಪ್ರ ಸಮ್ಮೇಳನದಲ್ಲಿ ಹೇಳಿರುವುದಾಗಿ ವರದಿಯಾಗಿದ್ದು ಅವರ ಈ ಹೇಳಿಕೆ ಹಾಸ್ಯಾಸ್ಪದ ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಖಂಡಿಸಿದ್ದಾರೆ.

ಇದು ಶ್ರೇಣೀಕೃತ ವರ್ಣ ವ್ಯವಸ್ಥೆಯನ್ನು ವಿಸ್ತರಿಸುವ, ಪುರೋಹಿತಶಾಹಿತನವನ್ನು ಪುನಃ ಪ್ರತಿಷ್ಠಾಪಿಸುವ ಹುನ್ನಾರ. ಈ ಮೂಲಕ ವೇದಾಧ್ಯಯನವನ್ನು ಬ್ರಾಹ್ಮಣರಿಗೆ ಮಾತ್ರ ಮೀಸಲಿರಿಸುವ ತಂತ್ರ ಅವರದ್ದು.ಮುಂದೊಂದು ದಿನ ಇವರು “ಬ್ರಾಹ್ಮಣೇತರರಾರೂ ಸಂನ್ಯಾಸಿ – ಯತಿಗಳಾಗುವಂತಿಲ್ಲ” ಎಂಬ ಕಾನೂನಿಗೆ ಆಗ್ರಹಿಸಿದರೂ ಆಶ್ಚರ್ಯವಿಲ್ಲ. ಅವರು ಹೀಗೆ ಹೇಳುವ ಬದಲು, ಬ್ರಾಹ್ಮಣರೆಲ್ಲ ಕಡ್ಡಾಯವಾಗಿ ವೇದಾಧ್ಯಯನವನ್ನು ಮಾಡಲೇಬೇಕೆಂದು ಆಗ್ರಹಿಸಲಿ. ಬ್ರಾಹ್ಮಣರಾರೂ ಅರ್ಚಕೇತರ ಉದ್ಯೋಗ ಮಾಡಕೂಡದೆಂದು ಹೇಳಲಿ. ಅವರ ಮೇಲ್ಕಂಡ ಹೇಳಿಕೆಯನ್ನು ಒಪ್ಪುವುದಾದಲ್ಲಿ, ಗೃಹ ಮತ್ತು ರಕ್ಷಣಾ ಇಲಾಖೆಯ ಉದ್ಯೋಗ ಕ್ಷತ್ರಿಯರಿಗೆ, ವ್ಯಾಪಾರ ವೈಶ್ಯರಿಗೆ, ಸೇವೆ ಶೂದ್ರರಿಗೆ, ಮೀಸಲಿರಿಸಿ, ಬ್ರಾಹ್ಮಣಾದಿ ನಾಲ್ಕು ವರ್ಣಗಳಲ್ಲಿಯೂ ಸೇರದ ಲಿಂಗಾಯತ ಒಕ್ಕಲಿಗ ಕುರುಬ ಮೊದಲಾದವರು ಉದ್ಯೋಗಕ್ಕೆ ಅನರ್ಹರೆಂದು ಕಾನೂನು ಮಾಡಬೇಕಾದೀತು! ಎಂದು ಡಾ. ಶ್ರೀ ಆರೂಢಭಾರತೀ ಸ್ವಾಮೀಜಿ ಲೇವಡಿ ಮಾಡಿದ್ದಾರೆ.

 

Girl in a jacket
error: Content is protected !!