ಬೆಂಗಳೂರು, ಆ,16″ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸಿದ್ಧಾರೂಢರ ಪಾತ್ರ ಅವಿಸ್ಮರಣೀಯ” ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು.
ರಾಮೋಹಳ್ಳಿಯ ತಮ್ಮ ಆಶ್ರಮದಲ್ಲಿ ನಡೆದ 75 ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಾಚರಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. 1904 ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರ ಸಮ್ಮುಖದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಮಹಾ ಅಧಿವೇಶನದಲ್ಲಿ ಸಿದ್ಧಾರೂಢರು ಅಧ್ಯಕ್ಷರಾಗಿದ್ದರು. “ಜನನೀ ಜನ್ಮಭೂಮಿ ಸ್ವರ್ಗಕ್ಕಿಂತ ಶ್ರೇಷ್ಠ. ದೇಶವಿದ್ದರೆ ನಾವು ನೀವು ಧರ್ಮ ಭಾಷೆ ಮತ್ತೊಂದು. ನೆಲೆಯಿಲ್ಲದ ಬದುಕೆಲ್ಲಿ? ದೇಶಕ್ಕಾಗಿ ಹೋರಾಡುವುದು ನಮ್ಮೆಲ್ಲರ ಹೊಣೆ” ಎಂದು ಸಾರಿದ್ದರು. 1920 ರಲ್ಲಿ ಮಹಾತ್ಮಾ ಗಾಂಧೀಜಿಯವರ ಸಮ್ಮುಖದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸ್ವಾತಂತ್ರ್ಯ ಯೋಧರ ಸಮಾವೇಶದಲ್ಲಿಯೂ ಸಿದ್ಧಾರೂಢರು ಖಾದೀ ತೊಟ್ಟು ಅಧ್ಯಕ್ಷರಾಗಿದ್ದರು.”ಗಾಂಧೀಜಿಯವರು ಸಾಗರಕ್ಕೆ ಬೇಲಿ ಕಟ್ಟುವರು. ಅವರ ನಾಯಕತ್ವದಲ್ಲಿ ದೇಶ ಸ್ವತಂತ್ರವಾಗಲಿದೆ. ಅಷ್ಟರಲ್ಲಿ ನಾವು ಇರುವುದಿಲ್ಲ “ಎಂದು ಭವಿಷ್ಯ ನುಡಿದಿದ್ದರು. 1929 ರಲ್ಲಿ ಸಿದ್ಧಾರೂಢರು ಕಾಲವಾದರು, 1947 ರಲ್ಲಿ ಅವರ ಭವಿಷ್ಯ ನಿಜವಾಯಿತು. ಆದರೆ ನಾವಿನ್ನೂ ಪೂರ್ಣ ಸ್ವತಂತ್ರರಾಗಿಲ್ಲ. 34000 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ನಾವು ಮೆಕಾಲೆ ಶಿಕ್ಷಣ ಪದ್ಧತಿಯ ಗುಂಗಿನಿಂದ ಆಚೆ ಬಂದಿಲ್ಲ. ಜಾತ್ಯತೀತತೆಯ ಹೆಸರಿನಲ್ಲಿ ನಮ್ಮ ಧರ್ಮ ಸಂಸ್ಕೃತಿಗಳ ತೆಗಳುವಿಕೆ ನಿಂತಿಲ್ಲ. ಇಂದ್ರಿಯ ಚಟದಾಸರಾಗಿ ಸ್ವಾಭಿಮಾನ ಆತ್ಮಗೌರವ ಗಾಳಿಗೆ ತೂರಿ ಪುಡಿ ಎಂಜಲು ಲಂಚದ ಹಣಕ್ಕಾಗಿ ಕೈಯೊಡ್ಡುವ ಗುಲಾಮತನ ಬಿಟ್ಟಿಲ್ಲ. ಅನರ್ಹರನ್ನು ತಲೆಯ ಮೇಲೆ ಹೊತ್ತು ಮೆರೆಸುವುದು ನಿಂತಿಲ್ಲ. ಕಾಸಿನ ಓಟು ನಿಂತಿಲ್ಲ. ಮತದಾನ ಕಡ್ಡಾಯವಾಗಿಲ್ಲ. ಮಗುವಾಗಿರುವಾಗಲೇ ಹುಲಿ ಸಿಂಹಗಳ ಬಾಯಿಯಲ್ಲಿನ ಹಲ್ಲು ಎಣಿಸಿದ ಭರತನಾಳಿದ ಭಾರತ 200 ವರ್ಷ ಪರರ ದಾಸ್ಯವಾದದ್ದು ನಮ್ಮ ದೌರ್ಭಾಗ್ಯ “ಎಂದರು. ಹಿರಿಯರಾದ ವೆಂಕಟೇಶಯ್ಯ ಧ್ವಜಾರೋಹಣ ನೆರವೇರಿಸಿದರು. ಕಲಾಜ್ಯೋತಿ ಆಶ್ರಮದ ಮಕ್ಕಳು ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಬಿಜೆಪಿ ಮುಖಂಡ ಕೆ. ಜಿ. ನರಸಿಂಹಮೂರ್ತಿ, ನವೀನ್ ಕುಮಾರ್, ಶ್ರೀ ಕಲಾಜ್ಯೋತಿ ಟ್ರಸ್ಟ್ ಅಧ್ಯಕ್ಷ ಮುನಿರಾಜು ಗೌಡ, ಚನ್ನವೀರಯ್ಯ ಸ್ವಾಮಿ, ಮೊದಲಾದವರು ಉಪಸ್ಥಿತರಿದ್ದರು.