ಟ್ಯಾಂಕರ್ ನೀರಿನ ಮಾಫಿಯಾ ತಡೆಯಲು, ಸಂಚಾರಿ ಕಾವೇರಿ ಯೋಜನೆ: ಡಿ.ಕೆ. ಶಿವಕುಮಾರ್

Share

ಬೆಂಗಳೂರು, ಮೇ 09-ಬೆಂಗಳೂರಿನಲ್ಲಿ ಟ್ಯಾಂಕರ್ ನೀರು ಪೂರೈಕೆ ದೊಡ್ಡ ಮಾಫಿಯಾವಾಗಿದೆ. ಇದನ್ನು ತಪ್ಪಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ನೀರು ಪೂರೈಸಲು ದೇಶದಲ್ಲೇ ಮೊದಲ ಬಾರಿಗೆ ಸಂಚಾರಿ ಕಾವೇರಿ ಯೋಜನೆ ಜಾರಿಗೊಳಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಶುಕ್ರವಾರ ನಡೆದ ‘ಸರ್ವರಿಗೂ ಸಂಚಾರಿ ಕಾವೇರಿ’, ‘ಮನೆ ಬಾಗಿಲಿಗೆ ಸರಳ ಕಾವೇರಿ’ ಯೋಜನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿ ಮಾತನಾಡಿದರು.

“ಸುಮಾರು 3 ಸಾವಿರ ಕೊಳವೆ ಬಾವಿ ಕೊರೆಸಿ, ಟ್ಯಾಂಕರ್ ಗಳನ್ನು ಇಟ್ಟುಕೊಂಡು 3 ಸಾವಿರ ರೂಪಾಯಿವರೆಗೂ ಹಣ ವಸೂಲಿ ಮಾಡುವ ಪ್ರವೃತ್ತಿ ಹೊಂದಿದ್ದಾರೆ. ಇಂದು ಈ ಯೋಜನೆ ಮೂಲಕ 4 ಸಾವಿರ ಲೀಟರ್ ನೀರಿಗೆ 660 ರೂ. ಹಾಗೂ 6 ಸಾವಿರ ಲೀಟರ್ ನೀರಿಗೆ 740 ರೂ. ದರ ನಿಗದಿ ಮಾಡಲಾಗಿದೆ. ಇದು ಕೊಳವೆ ಬಾವಿ ನೀರಲ್ಲ. ಇದು ಬಿಡಬ್ಲ್ಯೂಎಸ್ಎಸ್ ಬಿ ವತಿಯಿಂದ ನೀಡುತ್ತಿರುವ ಶುದ್ಧ ಕುಡಿಯುವ ನೀರು” ಎಂದು ತಿಳಿಸಿದರು.

“ನೀರಿನ ಮಾಫಿಯಾ ತಡೆಯಲು ಈ ಯೋಜನೆ ಚಾಲನೆ ನೀಡಲಾಗಿದೆ. ಇದು ಸಣ್ಣ ಯೋಜನೆಯಲ್ಲ. ಕಳೆದ ವರ್ಷ ಬರಗಾಲದಲ್ಲಿ ನೀರಿನ ಅಭಾವ ಎದುರಾದಾಗ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಲಾಯಿತು. ಕೆರೆಗಳನ್ನು ತುಂಬಿಸಿ, ಅಂತರ್ಜಲ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದೇವೆ. ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ಕೆರೆಗಳ ಅಭಿವೃದ್ಧಿ ಸಭೆ ಮಾಡಲಾಗಿದೆ. ಸಣ್ಣ ಮನೆಗಳಿಗೆ ನೀರಿನ ಸಂಪರ್ಕ ನೀಡಲು ಕೇವಲ 1 ಸಾವಿರ ಶುಲ್ಕ ಪಡೆಯಲು ತೀರ್ಮಾನಿಸಿದ್ದೇವೆ. ಅಪಾರ್ಟ್ಮೆಂಟ್ ನವರಿಗೆ ಆರಂಭದಲ್ಲಿ 20% ಹಣ ಪಡೆದು ನಂತರ ಒಂದು ವರ್ಷ ಕಾಲಾವಕಾಶ ನೀಡಲು ಮುಂದಾಗಿದ್ದೇವೆ. ಹೀಗೆ ಹೊಸ ನೀತಿಗಳ ಮೂಲಕ ಎಲ್ಲವನ್ನು ಒಂದು ವ್ಯವಸ್ಥೆಯಲ್ಲಿ ತರುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ಬೆಂಗಳೂರಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಇಂದು ಸರ್ವರಿಗೂ ಸರಳ ಕಾವೇರಿ, ಮನೆ ಬಾಗಿಲಿಗೆ ಸಂಚಾರಿ ಕಾವೇರಿ ಯೋಜನೆಗಳನ್ನು ಪ್ರಾರಂಭಿಸಿದ್ದು, ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಂತಹ ಯೋಜನೆ ಜಾರಿಗೆ ತರಲಾಗಿದೆ. ನಿನ್ನೆ ನೆಲಮಂಗಲದಲ್ಲಿ ರೂ.1,900 ಕೋಟಿ ವೆಚ್ಚದಲ್ಲಿ ವೃಷಭಾವತಿ ನೀರನ್ನು ಸಂಸ್ಕರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದೆ. ಪ್ರತಿ ನೀರಿನ ಹನಿಯು ಮಹತ್ವದ್ದಾಗಿದೆ. ಅನೇಕರು ಇದನ್ನು ಟೀಕೆ ಮಾಡಬಹುದು. ಆದರೆ ಇಂತಹ ಯೋಜನೆ ಇದೇ ಮೊದಲಲ್ಲ. ದೆಹಲಿಯಲ್ಲೂ ಯಮುನಾ ನದಿ ನೀರನ್ನು ಗಿಡ ಬೆಳೆಸಲು, ವಾಹನ ತೊಳೆಯಲು ಹಾಗೂ ಕೈಗಾರಿಕೆಗೆ ಪೂರೈಸುತ್ತಾರೆ” ಎಂದರು.

“ನಾನು ಹಾಗೂ ಶಾಸಕರು ಈ ನೀರನ್ನು ಕುಡಿಯುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದೇವೆ. ಇನ್ನು ಶುದ್ಧ ಕುಡಿಯುವ ನೀರಿನ ಘಟಕವನ್ನು ಮೊದಲು ಆರಂಭಿಸಿದ್ದು, ನಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ. ಸುಮಾರು 300ಕ್ಕೂ ಹೆಚ್ಚು ಘಟಕ ಪ್ರಾರಂಭಿಸಿದ್ದೆ. ನಾನು ಬಹಳ ಇಚ್ಛಾಶಕ್ತಿಯಿಂದ ಬೆಂಗಳೂರು ನಗರದ ಜವಾಬ್ದಾರಿ ವಹಿಸಿದ್ದೇನೆ. ಇದು ಬಹಳ ಕಷ್ಟದ ಕೆಲಸ ಎಂದು ಗೊತ್ತಿದೆ. ಆದರೂ ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ, ಮನಸ್ಸಿದ್ದಲ್ಲಿ ಮಾರ್ಗ, ಭಕ್ತಿ ಇದ್ದಲ್ಲಿ ದೇವರು ಎಂದು ನಂಬಿ ಕೆಲಸ ಮಾಡುತ್ತಿದ್ದೇನೆ” ಎಂದರು.

“ಕಾವೇರಿ ನೀರಿನಲ್ಲಿ ಬಾಕಿ ಉಳಿದಿದ್ದ 6 ಟಿಎಂಸಿ ನೀರನ್ನು ಬಿಡಬ್ಲ್ಯೂಎಸ್ಎಸ್ ಬಿ ಪೂರೈಕೆಗೆ ನಾನು ಆದೇಶ ಹೊರಡಿಸಿದೆ. ಮುಂದೆ ಕಾವೇರಿ ಆರನೇ ಹಂತ ಯೋಜನೆಗೆ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ದರ ಏರಿಕೆ ನಂತರ ಈಗ ವಿವಿಧ ಬ್ಯಾಂಕುಗಳು ಸಾಲ ನೀಡಲು ಮುಂದೆ ಬರುತ್ತಿವೆ. ಇದರ ಜತೆಗೆ ಒಳಚರಂಡಿ ವ್ಯವಸ್ಥೆಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದೀರಿ. ನಾನು ಕೃಷ್ಣಾ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದಾಗ ನನ್ನನ್ನು ವಿದೇಶಕ್ಕೆ ಅಧ್ಯಯನಕ್ಕಾಗಿ ಕಳುಹಿಸಿದ್ದರು. ಈ ಮಂಡಳಿಯಲ್ಲಿ ರಾಜಕೀಯದವರನ್ನು ಮುಖ್ಯಸ್ಥರನ್ನಾಗಿ ಮಾಡುವ ಅವಕಾಶವಿತ್ತು. ಅದಕ್ಕೆ ಅಂತ್ಯವಾಡಿ ರಾಜಕಾರಣಿಗಳಿಗೆ ಅದರಲ್ಲಿ ಅವಕಾಶ ನೀಡಬಾರದು, ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ಇದನ್ನು ನಿಭಾಯಿಸಲು ತೀರ್ಮಾನಿಸಲಾಯಿತು” ಎಂದರು.

*ಖಾಸಗಿಯವರಿಗೆ ನೀಡಲಿಲ್ಲ.*

“ಜೆ.ಹೆಚ್ ಪಟೇಲರ ಕಾಲದಲ್ಲಿ ಇದನ್ನು ಖಾಸಗಿಯವರಿಗೆ ನೀಡಲು ಮುಂದಾಗಿದ್ದರು. ನಂತರ ನೀರು, ವಿದ್ಯುತ್ ಸಂಸ್ಥೆಗಳು ಸರ್ಕಾರದ ನಿಯಂತ್ರಣದಲ್ಲೇ ಇಟ್ಟುಕೊಳ್ಳಬೇಕು ಎಂದು ತೀರ್ಮಾನಿಸಿದೆವು. ದೆಹಲಿ ಹಾಗೂ ಮುಂಬೈನಲ್ಲಿ ವಿದ್ಯುತ್ ಸರಬರಾಜನ್ನು ಖಾಸಗಿಯವರಿಗೆ ನೀಡಿದ್ದಾರೆ. ನನ್ನ ಬಳಿಗೂ ದೊಡ್ಡ ಕಂಪನಿಗಳು ಬಂದು ಇದನ್ನು ನಮಗೆ ಹಸ್ತಾಂತರ ಮಾಡಿ ನಾವು ಇದನ್ನು ನಡೆಸುತ್ತೇವೆ ಎಂದು ಕೇಳಿದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ” ಎಂದು ಹೇಳಿದರು.

ಕೊಳಚೆ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಪ್ರತ್ಯೇಕವಾಗಿ ಸಭೆ ಮಾಡಿ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ನೀರನ್ನು ಸಂಸ್ಕರಿಸಲು ಕೇಂದ್ರ ಸರ್ಕಾರ ಹಾಗೂ ವಿಶ್ವ ಬ್ಯಾಂಕುಗಳ ನೆರವು ಪಡೆಯಲಾಗುವುದು. ಇನ್ನು ಕಸ ವಿಲೇವಾರಿ ವಿಚಾರವಾಗಿ ಕೆಲವರು ಮಾಫಿಯಾ ಮಾಡಿಕೊಂಡಿದ್ದರು. ನಾವು ತನಿಖೆ ಮಾಡಿಸಿದ್ದೇವೆ. ನ್ಯಾಯಾಲಯ ಈಗ ನಮಗೆ ಟೆಂಡರ್ ಕರೆಯಲು ಅವಕಾಶ ನೀಡಿದೆ. ಬೆಂಗಳೂರಿನ ಅಭಿವೃದ್ಧಿಗೆ ಕಸ ವಿಲೇವಾರಿ, ಕೊಳಚೆ ನೀರು, ಕುಡಿಯುವ ನೀರು, ವಿದ್ಯುತ್, ಸಂಚಾರ ಕ್ಷೇತ್ರಗಳ ಬಗ್ಗೆ ಅಗತ್ಯ ಯೋಜನೆಗಳನ್ನು ರೂಪಿಸಲಾಗಿದೆ” ಎಂದು ತಿಳಿಸಿದರು.

 

Girl in a jacket
error: Content is protected !!