ಬೆಂಗಳೂರು, ಸೆ,11:”ಗಣಪತಿಯನ್ನು ಆರಾಧಿಸುವುದು ಸನಾತನ ಭಾರತದ ಸಮೃದ್ಧ ಸಂಸ್ಕೃತಿ” ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಗುರುವಾರ ಗಣೇಶ ಚೌತಿಯ ನಿಮಿತ್ತ ತಮ್ಮ ಆಶ್ರಮದಲ್ಲಿ ಮಕ್ಕಳು ಮಾಡಿದ ಗಣಪತಿಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ” ಪೆರಿಯಾರ್ ರಾಮಸ್ವಾಮಿಯಂಥವರು ಗಣೇಶನ ಕುರಿತು, ಆನೆಯ ತಲೆ ಜೋಡಿಸಿ ಜೀವ ಕೊಡಬಲ್ಲ ಶಿವನಿಗೆ, ತಾನೇ ಕತ್ತರಿಸಿದ ಗಣೇಶನ ತಲೆ ಜೋಡಿಸಿ ಜೀವ ಕೊಡಲಾಗಲಿಲ್ಲವೇ? ಎಂಬಿತ್ಯಾದಿ ಆಕ್ಷೇಪಿಸಿ, ವೇದ ಪುರಾಣಗಳೆಲ್ಲಾ ಮೋಸ, ಕಟ್ಟು ಕಥೆ ಎನ್ನುವುದು ಸರಿಯಲ್ಲ. ಜಗವೆಲ್ಲ ಪರಮಾತ್ಮಮಯ ಎನ್ನುವ ಉಪನಿಷತ್ತೂ ಮೋಸವೇ? ಕಟ್ಟು ಕಥೆ ಎಂದು ಹೊಳೆದ ಅವರಿಗೆ, ಏಕೆ ಕಥೆ ಕಟ್ಟಲಾಯಿತೆಂಬುದು ಹೊಳೆಯಬಾರದೇ? ಕಥೆ ಸಾಹಿತ್ಯ ಸಂಸ್ಕೃತಿ ಧಾರ್ಮಿಕ ಆಚಾರ ವಿಚಾರಗಳೆಲ್ಲಾ ವೈಜ್ಞಾನಿಕವಾಗಿಯೇ, ಪ್ರಾಯೋಗಿಕವಾಗಿಯೇ ಇರಬೇಕಿಲ್ಲ. ಅಂತರಂಗದ ಸಮಾಧಾನಕ್ಕೆ ಅನೇಕ ಸಂಗತಿಗಳನ್ನು ಭಾವಿಸುತ್ತೇವೆ. ಅವು ಸಮಾಧಾನ ತೃಪ್ತಿ ತರುತ್ತವೆ. ಸಮಸ್ಯೆ ಕಾಯಿಲೆಗಳನ್ನು ತಡೆಯುತ್ತವೆ. ಸ್ವರ್ಗ ನರಕ ದೇವತೆಗಳ ಕಲ್ಪನೆ, ಮಾನವನ ಅಹಂಕಾರಕ್ಕೆ ಕಡಿವಾಣ ಹಾಕಿ ವಿನಮ್ರವಾಗಿಸುತ್ತದೆ. ಇದು ಎಲ್ಲ ಧರ್ಮಗಳ ವಾಸ್ತವ! ಅವರವರು ಅವರವರ ಧಾರ್ಮಿಕ ವಿಧಿ ವಿಧಾನ ಗೌರವಿಸಲಿ. ಬೇಕಿದ್ದರೆ ಪರಿಷ್ಕರಿಸಲಿ! ಬದಲಾಗಿ ಟೇಕಿಸುವುದು, ಕೊಂಕು ನುಡಿವುದು ಬೇಡ” ಎಂದರು. ಗಣಪತಿ ಎಂದರೆ ಗುಣಪತಿ. ಆದರ್ಶ ಗುಣವುಳ್ಳವರೆಲ್ಲಾ ಗಣಪತಿ ಸಮಾನ, ಪೂಜ್ಯರು,ಧನಪತಿಗಳಲ್ಲ. ಹೀಗೆಯೇ ಸೊಂಡಿಲು, ಸಣ್ಣ ಕಣ್ಣು, ದೊಡ್ಡ ಹೊಟ್ಟೆ ಕಿವಿಗಳಿಗೆ ತಾತ್ತ್ವಿಕ ಅರ್ಥವನ್ನು ಗ್ರಹಿಸಬೇಕೆಂದರು.
ಗಣಪತಿಯ ಆರಾಧನೆ ಭಾರತೀಯ ಸಮೃದ್ಧ ಸಂಸ್ಕೃತಿ :ಡಾ ಆರೂಢಭಾರತೀ ಸ್ವಾಮೀಜಿ
Share