ಕೌಶಲ್ಯ ಅಭಿವೃದ್ಧಿಗೆ ಹೂಡಿಕೆ ಮಾಡಿ: ಉದ್ಯಮಿಗಳಿಗೆ ಸಚಿವ ಎಂಟಿಬಿ ನಾಗರಾಜ್ ಕರೆ

Share

 

ಬೆಂಗಳೂರು,ಅ,18: ಕೌಶಲ್ಯ ಅಭಿವೃದ್ಧಿ ಗಾಗಿ ಹೂಡಿಕೆ ಮಾಡುವುದು ಉದ್ಯಮಗಳಿಗೆ ಎಷ್ಟು ಲಾಭದಾಯಕವೋ ಹಾಗೆಯೇ ಅದು ಉದ್ಯೋಗಿಗಳಿಗೂ ಪ್ರಯೋಜನಕಾರಿ.ಹಾಗಾಗಿ,ಉದ್ಯಮಿಗಳು ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆಗೆ ಆದ್ಯತೆ ನೀಡಬೇಕು ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಕರೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದಾಬಸ್ ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ-ಎಫ್ ಕೆಸಿಸಿಐ ನಿರ್ಮಿಸಲು ಉದ್ದೇಶಿಸಿರುವ ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸ್ಕಿಲ್ ಡೆವಲಪ್‌ಮೆಂಟ್’ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸಚಿವ ಎಂಟಿಬಿ ನಾಗರಾಜು ಮಾತನಾಡಿದರು.

ಉದ್ಯೋಗಿಗಳು ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರಬೇಕು. ಇದರಿಂದ ಮಾತ್ರ ಇತರ ಸ್ಪರ್ಧಿಗಳಿಗಿಂತ ಮುಂದಿರಲು ಸಾಧ್ಯ.ಕೌಶಲ್ಯ ಅಭಿವೃದ್ಧಿಯು ಜನರನ್ನು ಸಬಲೀಕರಣಗೊಳಿಸಲು,ಅವರ ಭವಿಷ್ಯವನ್ನು ರಕ್ಷಿಸಲು ಮತ್ತು ವ್ಯಕ್ತಿಯ ಒಟ್ಟಾರೆ ಅಭಿವೃದ್ಧಿಗೆ ಒಂದು ಪ್ರಮುಖ ಸಾಧನವಾಗಿದೆ ಎಂದು ಸಚಿವರು ಹೇಳಿದರು.

ರಾಜ್ಯ ಸರ್ಕಾರ ಈ ಕೌಶಲ್ಯ ತರಬೇತಿ ಕೇಂದ್ರದ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ನೆರವನ್ನೂ ನೀಡಲಿದೆ.ಇದು ವಿಶ್ವ ದರ್ಜೆಯ ಅತ್ಯುನ್ನತ ಆಧುನಿಕ ಕೇಂದ್ರವಾಗಲಿ,ಬೇಗ ಕಟ್ಟಡ ನಿರ್ಮಾಣ ಪೂರ್ಣಗೊಂಡು ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವಂತಾಗಲಿ ಎಂದು ಸಚಿವ ಎಂಟಿಬಿ ನಾಗರಾಜು ಆಶಿಸಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನೆರವಿನಿಂದ ಸುಮಾರು 20 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಎಫ್ ಕೆಸಿಸಿಐ ಈ ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸ್ಕಿಲ್ ಡೆವಲಪ್‌ಮೆಂಟ್’ ಕೇಂದ್ರವನ್ನು ನಿರ್ಮಿಸುತ್ತಿದೆ.
ಸಮಾರಂಭದಲ್ಲಿ ಎಫ್ ಕೆಸಿಸಿಐ ಅಧ್ಯಕ್ಷ ಡಾ.ಪೆರಿಕಲ್ ಎಂ ಸುಂದರ್ ಸೇರಿದಂತೆ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Girl in a jacket
error: Content is protected !!