ಬೆಂಗಳೂರು, ನ. ೦೧: ಪ್ರತಿಯೊಬ್ಬರು ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲಿಯೇ ಮಾತನಾಡಬೇಕು. ಕನ್ನಡದಲ್ಲಿಯೇ ಬರೆಯಬೇಕು. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುವುದು ಹಾಗೂ ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡವನ್ನು ಕಲಿಸುವ ಮೂಲಕ ನಮ್ಮ ನಾಡು-ನುಡಿ, ಸಂಸ್ಕತಿ ಉಳಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೬೬ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ ನಮ್ಮ ಸಿರಿಗನ್ನಡ ನಾಡು ಉದಯವಾಗಿ ಇಂದಿಗೆ ಆರೂವರೆ ದಶಕಗಳು ಕಳೆದಿದೆ. ಚೆಲುವ ಕನ್ನಡ ನಾಡು, ಸಿರಿಗನ್ನಡ ನಾಡು, ಕರುನಾಡು ಎಂದು ಕವಿಗಳು ಹಾಡಿದ ನಾಡು ನಮ್ಮದು. ಮದ್ರಾಸ್, ಮುಂಬೈ ಹಾಗೂ ಹೈದರಾಬಾದ್ ಹೀಗೆ ಹಲವಾರು ಪ್ರಾಂತ್ಯಗಳಲ್ಲಿ ಕನ್ನಡ ಭಾಷಿಕರಿದ್ದ ಪ್ರದೇಶವು ಹಂಚಿಹೋಗಿತ್ತು. ಇಂತಹ ಸನ್ನಿವೇಶದಲ್ಲಿ ಸ್ವಾತಂತ್ರ್ಯಪೂರ್ವ ೧೯೦೫ರಲ್ಲಿ ಸಮಗ್ರ ಕನ್ನಡ ನಾಡಿನ ಕನಸನ್ನು ಕಂಡವರು ಕನ್ನಡದ ಕುಲಪುರೋಹಿತರೆಂದೇ ಖ್ಯಾತರಾದ ಆಲೂರು ವೆಂಕಟರಾಯರು ಹಾಗೂ ಇತರರು. ಎಲ್ಲಾ ಕನ್ನಡ ಹೋರಾಟಗಾರರ ಶ್ರಮ, ತ್ಯಾಗಗಳಿಂದಾಗಿ ಕರ್ನಾಟಕ ಏಕೀಕರಣ ಚಳುವಳಿಗೆ ಫಲ ಸಿಕ್ಕಿತು. ನಮ್ಮ ನಾಡನ್ನು ಒಗ್ಗೂಡಿಸಿ ೧೯೫೬ ನವೆಂಬರ್ ೧ರಂದು ಮೈಸೂರು ರಾಜ್ಯವೆಂದು ಘೋಷಿಸಲಾಯಿತು. ನಂತರ ೧೯೭೩ರ ನವೆಂಬರ್ ೧ರಲ್ಲಿ ಕರುನಾಡು, ಕಪ್ಪುಮಣ್ಣಿನ ನಾಡು ಎಂಬ ಅರ್ಥಕೊಡುವ ’ಕರ್ನಾಟಕ ರಾಜ್ಯ’ ಎಂದು ಪುನರ್ ನಾಮಕರಣ ಮಾಡಲಾಯಿತು. ನವೆಂಬರ್ ೧, ೧೯೫೬ ರಿಂದ ಕನ್ನಡ ನಾಡಿನ ಉದಯದ ಉತ್ಸವವಾಗಿ ’ಕನ್ನಡ ರಾಜ್ಯೋತ್ಸವ’, ’ಕರ್ನಾಟಕ ರಾಜ್ಯೋತ್ಸವ’ವನ್ನು ನಮ್ಮ ರಾಜ್ಯ ಹಾಗೂ ದೇಶ-ವಿದೇಶಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ ಎಂದರು. ಕನ್ನಡ ನಾಡು ಭವ್ಯ ಪರಂಪರೆ, ಇತಿಹಾಸ, ಸಂಸ್ಕೃತಿ, ಶ್ರೀಮಂತಿಕೆಯನ್ನು ಹೊಂದಿದೆ ಎಂದರು.
ಕನ್ನಡ ಭಾಷೆಯ ಪತ್ರಿಕೆ, ಪುಸ್ತಕಗಳನ್ನು ಕೊಂಡು ಓದಬೇಕು, ಕನ್ನಡ ಭಾಷೆಯ ನಾಟಕ, ಚಲನಚಿತ್ರ, ಯಕ್ಷಗಾನ, ನೃತ್ಯ ಕಲೆಗಳನ್ನು ನೋಡಿ, ಪ್ರೋತ್ಸಾಹಿಸಬೇಕು. ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಒಂದು ಕೋಟಿಗೂ ಅಧಿಕ ಮಕ್ಕಳು ರಾಜ್ಯದ ವಿವಿಧ ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಅವರೆಲ್ಲರಲ್ಲಿ ಕನ್ನಡ ನಾಡು-ನುಡಿಯ ಬಗ್ಗೆ ಪ್ರೀತಿ ಅಭಿಮಾನಗಳು ಬೆಳೆಯುವಂತೆ ಶಿಕ್ಷಕರು ಹಾಗೂ ಪೋಷಕರು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು. ನಮ್ಮ ಶಾಲಾ ಮಕ್ಕಳು ಕುವೆಂಪು, ಬೇಂದ್ರೆ, ಶಿವರಾಮಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಡಾ. ಚಂದ್ರಶೇಖರ ಕಂಬಾರ ಮುಂತಾದ ಸಾಹಿತಿಗಳ ಕೃತಿಗಳನ್ನು ಅಭ್ಯಾಸ ಮಾಡಿ ಈ ನಾಡಿನ ಪರಂಪರೆಯನ್ನು ನೆಲದ ಸಂಸ್ಕೃತಿ ಅರಿವನ್ನು ಪಡೆಯಲೆಂದು ಆಶಿಸುತ್ತೇನೆ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸಲು ಮನವಿ ಮಾಡುತ್ತೇನೆ. ೨೦೨೧-೨೨ನೇ ಸಾಲಿನಲ್ಲಿ ರಾಜ್ಯದ ೮ ಜ್ಞಾನಪೀಠ ಪುರಸ್ಕೃತರು ಅಭ್ಯಸಿಸಿದ ಸರ್ಕಾರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ರೂ.೧೬.೮೮ ಕೋಟಿ ಅನುದಾನ ಒದಗಿಸಿದ್ದು, ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಎಂದು ಶಿಕ್ಷಣ ಸಚಿವರು ಪ್ರಸ್ತಾಪಿಸಿದರು. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವುದು ನಮ್ಮೆಲ್ಲರ ಆದ್ಯತೆಯಾಗಿದೆ. ರಾಜ್ಯದ ಒಟ್ಟು ೨೦,೭೧೮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ೧೪,೨೩೬ ಶಾಲೆಗಳಲ್ಲಿ ೩೦ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇದೆ. ಅದೇ ರೀತಿ ಒಟ್ಟು ೨೨,೫೦೧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ೨೪೨೧ ಶಾಲೆಗಳಲ್ಲಿ ೩೫ ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇದೆ. ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಶಿಫಾರಸ್ಸಿನಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದ ಶಾಲಾ ಸಂಕೀರ್ಣಗಳನ್ನು ಸ್ಥಾಪಿಸಲು ಯೋಜಿಸಲಾಗುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದರು.