ಬೆಂಗಳೂರು,ನ,29:ಕನ್ನಡಿಗರ ಕಲೆ ಸಂಸ್ಕೃತಿ ಇತಿಹಾಸ ಅಡಗಿರುವುದು ಕನ್ನಡ ಸಾಹಿತ್ಯದಲ್ಲಿ. ಕನ್ನಡ ಭಾಷೆಯನ್ನು ಸರಿಯಾಗಿ ಕಲಿಯದಿದ್ದರೆ ಕನ್ನಡ ಸಾಹಿತ್ಯವನ್ನು ತಿಳಿಯಲಾಗದು. ಕನ್ನಡ ನಾಡಿನಲ್ಲಿ ಹುಟ್ಟಿದವರು ಮಾತ್ರವಲ್ಲ, ಕನ್ನಡ ನೆಲಕ್ಕೆ ಬಂದ ವಲಸಿಗರೆಲ್ಲರೂ ಕನ್ನಡ ಭಾಷೆಯನ್ನು ಕಲಿತು ಕನ್ನಡಿಗರೆನಿಸಬೇಕು ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಶ್ರೀ ಆರೂಢಭಾರತೀ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಕೆಂಗೇರಿಯ ಗಾಂಧಿ ನಗರದಲ್ಲಿ ರಾಮಸೇನೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್‌ಕುಮಾರ್ ಮತ್ತು ರಾಮಸೇನಾ ಕಾರ್ಯಕರ್ತ ದಿ. ಜಗದೀಶ್ ಅವರಿಗೆ ಪುಷ್ಪನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಸಸ್ಯಾಹಾರಿ, ಮಾಂಸಾಹಾರಿ ಪದಗಳನ್ನು ಬಹುತೇಕರು ಸಸ್ಯಹಾರಿ ಮಾಂಸಹಾರಿ ಎಂದೇ ತಪ್ಪಾಗಿ ಬಳಸುತ್ತಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದವರೂ ಒತ್ತಕ್ಷರ, ಹ್ರಸ್ವ, ದೀರ್ಘ, ಅಲ್ಪಪ್ರಾಣ, ಮಹಾಪ್ರಾಣ, ಅನುಸ್ವಾರ, ವಿಸರ್ಗ ಮೊದಲಾದ ಅಕ್ಷರಗಳನ್ನು ಯದ್ವಾ ತದ್ವಾ ಬಳಸುತ್ತಿದ್ದು ಇದು ಕನ್ನಡಕ್ಕೆ ಎಸಗುವ ದ್ರೋಹ “ಎಂದರು. ಇದಕ್ಕೂ ಮುನ್ನ ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರು,” “ಇಂದು 5000 ಕೊಟ್ಟವರು ಮಾಧ್ಯಮದಲ್ಲಿ ಪ್ರಚಾರ ಬಯಸುತ್ತಾರೆ. ಆದರೆ ಅನಾಥಾಶ್ರಮದಂಥವುಗಳಿಗೆ ಪ್ರತಿ ತಿಂಗಳು 40-50 ಲಕ್ಷ ರೂಪಾಯಿ ದೇಣಿಗೆಯನ್ನು ದ್ವಿಚಕ್ರ ವಾಹನದಲ್ಲಿ ಹೋಗಿ ಗುಪ್ತವಾಗಿ ತಲುಪಿಸುತ್ತಿದ್ದವರು ಪುನೀತ್ ರಾಜ್‌ಕುಮಾರ್. ಅವರು ಸಮಾಜ ಸೇವೆಗೆ ನಮಗೆಲ್ಲ ಶ್ರೇಷ್ಠ ಮಾದರಿ ಎಂದರು. ಯಶವಂತಪುರ ನಗರ ಬಿಜೆಪಿ ಅಧ್ಯಕ್ಷ ಅನಿಲ್ ಚಳಗೇರಿ, ಮಾಜಿ ಕಾರ್ಪೊರೇಟರ್ ವಿ. ವಿ. ಸತ್ಯನಾರಾಯಣ, ಸಿಎಂಸಿ ಸತ್ಯನಾರಾಯಣ, ರಾಮಸೇನೆಯ ಸಂತೋಷ, ಖ್ಯಾತ ಯಕ್ಷಗಾನ ಕಲಾವಿದ ನಿತ್ಯಾನಂದ ನಾಯಕ್, ಕಲಾಜ್ಯೋತಿ ಮಕ್ಕಳ ಆಶ್ರಮದ ಸಂಸ್ಥಾಪಕ ಮುನಿರಾಜಗೌಡ ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳು ಯಕ್ಷಗಾನ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.