ಬೆಂಗಳೂರು,ಜೂ,08:ಯಾವುದೂ ಯಾರಿಗೂ ಶಾಶ್ವತವಲ್ಲ. ನಿನ್ನೆ ಇನ್ನಾರದ್ದೋ ಆಗಿದ್ದು ಇಂದು ನಮ್ಮದಾಗಿದೆ. ನಾಳೆ ಯಾರ ಪಾಲೆಂಬುದು ತಿಳಿದಿಲ್ಲ. ನಮ್ಮ ಲೆಕ್ಕಾಚಾರಗಳು ಯಥಾವತ್ತಾಗಿ ನಡೆಯುವುದಿಲ್ಲ ಎಂಬುದಕ್ಕೆ ಕೊರೊನಾ ದುಷ್ಕಾಲವೇ ಸಾಕ್ಷಿ. ಇಂದು ನಾವು ಚೆನ್ನಾಗಿರಬಹುದು. ನಾಳೆ ಏನಿದೆಯೋ? ಚೆನ್ನಾಗಿರುವಾಗಲೇ ನಮ್ಮಲ್ಲಿರುವುದನ್ನು ಇಲ್ಲದವರಿಗೆ ನೀಡೋಣ. ಇಂದು ಕೈ ಒಡ್ಡಿ ಪಡೆಯುವವನು ನಾಳೆ ನಮಗೇ ಕೈ ಎತ್ತಿ ಕೊಡುವವನಾದಾನು! ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಇಂದು ಸಿದ್ಧಾರೂಢ ಮಿಷನ್, ಸಹಬಾಳ್ವೆ ಸಂಸ್ಥೆ, ಸೌಖ್ಯ ನ್ಯಾಚುರಲ್ ಫುಡ್ ಪ್ರೈ. ಲಿ ಸಹಯೋಗದಲ್ಲಿ ಕೆಂಗೇರಿಯಲ್ಲಿ ತರಕಾರಿ ಅಂಗಡಿಯವರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು. “ಕೋವಿಡ್ ನಿಂದಾಗಿ ಬಹುತೇಕ ಜನರ ಜೀವನ ತತ್ತರಿಸಿದೆ. ಸಂಕಟದಲ್ಲಿರುವವರಿಗೆ ನಾವು ನೀವೆಲ್ಲ ನೆರವಿನ ಹಸ್ತ ಚಾಚೋಣ, ಧೈರ್ಯ ತುಂಬೋಣ. ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಯಾರೂ ನಿರ್ಲಕ್ಷ್ಯ ವಹಿಸಬಾರದು. ಮಾಸ್ಕ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಆಗಾಗ ಕೈ ತೊಳೆದುಕೊಳ್ಳುವುದು ಮೊದಲಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಭಗವಂತನು ಎಲ್ಲರಿಗೂ ಆರೋಗ್ಯ ಆಯುಷ್ಯ ನೀಡಿ, ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ”ಎಂದು ಹಾರೈಸಿದರು.
ಜಿ. ಎಲ್. ಸಂತೋಷ್, ಪುಷ್ಪಾ ಮೂರ್ತಿ, ಬಸವರಾಜ ಮೇಟಿ, ಮಲ್ಲಿಕಾರ್ಜುನ ಆಜೂರ್, ಶಂಕರ್, ಆಂಜನಪ್ಪ, ಸಂಜೀವ್, ರಾಜಣ್ಣ ಮೊದಲಾದವರು ಉಪಸ್ಥಿತರಿದ್ದರು.