ಅ.ನಾ.ಪ್ರಹ್ಲಾದರಾವ್ ರಚನೆಯ ‘ಹೆಜ್ಜೆಗುರುತು’ ಕೃತಿ  ಲೋಕಾರ್ಪಣೆ

Share

ಬೆಂಗಳೂರು,  ಡಿ, 30: ಲೇಖಕ ಅ.ನಾ.ಪ್ರಹಾದರಾವ್ ಕನ್ನಡ ಚಲನಚಿತ್ರ ಚರಿತ್ರೆ ಕುರಿತು ದಾಖಲಿಸಿರುವ ‘ಹೆಜ್ಜೆಗುರುತು’ ಕೃತಿಯನ್ನು ಪ್ರಸಿದ್ಧ ಕವಿ, ಸಾಹಿತಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಅವರು ತಮ್ಮ ನಿವಾದಲ್ಲಿ ಇಂದು (2021, ಡಿಸೆಂಬರ್ 30) ಬಿಡುಗಡೆ ಮಾಡಿದರು. ಹಂಸಜ್ಯೋತಿ ಸಾಂಸ್ಕೃತಿಕ ಸಂಸ್ಥೆಯ ಮು.ಮುರಳೀಧರ ಹಾಗೂ ಶ್ರೀಮತಿ ಮಲ್ಲಿಕಾ ಪ್ರಹ್ಲಾದ್ ಈ ಸಂದರ್ಭದಲ್ಲಿ ಹಾಜರಿದ್ದರು.

ಚಿತ್ರರಂಗ ಮೂಕಿ ಕಾಲದಿಂದ ಆರಂಭಗೊಂಡು ಬೆಳವಣಿಗೆಯ ವಿವಿಧ ಮಜಲುಗಳಿಗೆ ಸಂಬಂಧಿಸಿದ ಚಲನಚಿತ್ರಗಳು, ವ್ಯಕ್ತಿಗಳು ಹಾಗೂ ಘಟನಾವಳಿಗಳನ್ನು ಹೆಣೆಯುತ್ತಾ ಕನ್ನಡ ಚಿತ್ರರಂಗದ ಔನತ್ಯವನ್ನು ದಾಖಲಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಕನ್ನಡ ಚಿತ್ರರಂಗದ ಆರಂಭದ ದಿನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸಾಕಷ್ಟು ಕೊಡುಗೆಯನ್ನು ನೀಡುವುದರೊಂದಿಗೆ ಹೊಸ ಪೀಳಿಗೆಯನ್ನು ಬೆಳೆಸಿದ್ದರಿಂದಾಗಿ, ಚಿತ್ರೋದ್ಯಮ ನಿಂತ ನೀರಾಗದೆ ವಿಕಸನಗೊಳ್ಳಲು ಸಾಧ್ಯವಾಯಿತು. ಕನ್ನಡ ಚಿತ್ರರಂಗ ನೆಲೆಯೂರಲು ಭದ್ರಬುನಾದಿ ಹಾಕಿದ ಮಹನೀಯರ ಜೊತೆ ಜೊತೆಯೇ ಮತ್ತಷ್ಟು ಹೊಸ ಪ್ರತಿಭೆಗಳು ಕೂಡಿಕೊಂಡದ್ದರಿಂದ ಚಿತ್ರರಂಗ ಬೆಳೆಯಲು ಸಾಧ್ಯವಾಯಿತು. ಈ ಕೃತಿಯಲ್ಲಿ ಆರಂಭದ ದಶಕಗಳಲ್ಲಿ ಬಿಡುಗಡೆಗೊಂಡ ಕನ್ನಡ ಚಿತ್ರಗಳನ್ನು ಪರಿಚಯ ಮಾಡಿಕೊಡುತ್ತಾ ತನ್ಮೂಲಕ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ದಾಖಲಿಸಲಾಗಿದೆ. ಕ್ರಮೇಣ ಒಂದು ಹಂತ ತಲುಪಿದ ಮೇಲೆ, ಚಿತ್ರರಂಗ ಭದ್ರನೆಲೆಗಟ್ಟಿನ ಮೇಲೆ ನಿಂತ ಕಾರಣದಿಂದ ಕನ್ನಡ ಚಿತ್ರರಂಗ ಹೊಸ ಹೊಸ ಆವಿಷ್ಕಾರಗಳತ್ತ ತನ್ನನ್ನು ತಾನು ತೆರೆದುಕೊಳ್ಳಲಾರಂಭಿಸಿತು. ಮೂಕಿಚಿತ್ರಗಳು, ಮಾತನಾಡುವ ಚಿತ್ರಗಳು, ಹೊಸ ಹೊಸ ತಂತ್ರಜ್ಞಾನ ಬಳಕೆ, ವಲಸೆಯ ಅನಿವಾರ್ಯತೆಯಲ್ಲಿದ್ದ ಕನ್ನಡ ಚಿತ್ರರಂಗ ನಿಧಾನವಾಗಿ ರಾಜ್ಯಕ್ಕೆ ಬಂದು ನಿಂತ ಪ್ರಕ್ರಿಯೆ, ವರ್ಣ ಚಿತ್ರಗಳು, ಹೊಸ ಅಲೆ ಚಿತ್ರಗಳವರೆಗೂ ಬಿಡುಗಡೆಗೊಂಡ ಚಿತ್ರಗಳು ಹಾಗೂ ಆ ಮೂಲಕ ಚಿತ್ರರಂಗಕ್ಕೆ ಬಂದು ನಿಂತ ಮಹನೀಯರ ಬಗ್ಗೆ ‘ಹೆಜ್ಜೆಗುರುತು’ ಸಂಗತಿಗಳನ್ನು ದಾಖಲೆ ಮಾಡಿದೆ. ಮೈಸೂರಿನ ತಾರಾ ಪ್ರಿಂಟ್ಸ್ ಪ್ರಕಟಿಸಿರುವ ಈ ಕೃತಿ 462 ಪುಟಗಳನ್ನು ಹೊಂದಿದೆ.

 

Girl in a jacket
error: Content is protected !!