ಆಲಮಟ್ಟಿ,ಅ,18: ಕೃಷ್ಣಾಮೇಲ್ದಂಡೆ ಯೋಜನೆ ವ್ಯಾಪ್ತಿಯ ಆಲಮಟ್ಟಿ ಜಲಾಶಯವನ್ನು ಎತ್ತರಿಸುವದು, ಅಂತರಜಲಾಶಯದ ನೀರನ್ನು ಮರುಹಂಚಿಕೆ ಹಾಗೂ ಜನ-ಜಾನುವಾರುಗಳಿಗಾಗಿ ಕಾಲುವೆಗಳ ಮೂಲಕ ನೀರು ಹರಿಸಲು ಒತ್ತಾಯಿಸಿ ಅಖಂಡ ಕರ್ನಾಟಕ ರೈತಸಂಘದವತಿಯಿಂದ ಮುಖ್ಯ ಅಭಿಯಂತರರಿಗೆ ಎರಡು ಪ್ರತ್ಯೇಕ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನಕಾರ್ಯದರ್ಶಿ ಅರವಿಂದ ಕುಲಕರ್ಣಿ, ಬರಗಾಲ ಪೀಡಿತ ಜಿಲ್ಲೆಯ ನೀರಾವರಿಗಾಗಿ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಜಲಾಶಯ ನಿರ್ಮಿಸಿದ್ದರೂ ಜಿಲ್ಲೆಯ ಭೂಮಿಗೆ ನೀರುಣಿಸಲು ಸ್ಕೀಂ.ಗಳ ಹೆಸರಿನಲ್ಲಿ ವಂಚನೆ ಮಾಡಲಾಗುತ್ತದೆ. ಅವಳಿ ಜಲಾಶಯ ನಿರ್ಮಾಣಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ಲಕ್ಷಾಂತರ ಎಕರೆ ಭೂಮಿ ಹಾಗೂ ನೂರಾರು ಗ್ರಾಮಗಳು ಸ್ಥಳಾಂತರಗೊAಡು ತ್ಯಾಗ ಮಾಡಿದ ಜಿಲ್ಲೆಯ ಜನರಿಗೆ ನೀರಿಲ್ಲದಂತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಕೂಡಲೇ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೃ.ಮೇ.ಯೋ. ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು. ಅಖಂಡ ಜಿಲ್ಲೆಯಲ್ಲಿ ೫ನದಿಗಳು ಹರಿದು, ಕೃಷ್ಣೆಗೆ ಬೃಹತ್ ಜಲಾಶಯ ನಿರ್ಮಿಸಿದ್ದರೂ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಇದನ್ನು ಹೋಗಲಾಡಿಸಲು ಎಟಿಎಂ. ರೈತರಿಗೆ ಅವಶ್ವಿದ್ದಾಗ ನೀರು ಪೂರೈಕೆಯಾಗುವಂತೆ ಕ್ರಮವಹಿಸಬೇಕು ಎಂದರು.
ನ್ಯಾ.ಆರ್.ಎಸ್.ಬಚಾವತ್ ನೇತೃತ್ವದ ೧ನೇ ಅಂತರಾಜ್ಯ ವಿವಾದ ಕೃಷ್ಣಾ ನ್ಯಾಯಾಧಿಕರಣ ಹಾಗೂ ನ್ಯಾ.ಬೃಜೇಶಕುಮಾರ ನೇತೃತ್ವದ ನ್ಯಾಯಾಧೀಕರಣಗಳು ನೀಡಿರುವ ತೀರ್ಪುಗಳು ೨೦೫೦ ಮೇ.ತಿಂಗಳಿನಲ್ಲಿ ಮುಕ್ತಾಯವಾಗುತ್ತವೆ. ಇದರಿಂದ ರಾಜ್ಯಕ್ಕೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅನುದಾನದ ಕೊರತೆ ನೆಪ ಹೇಳದೇ ನೂತನವಾಗಿ ರಚನೆಯಾಗಿರುವ ತೆಲಂಗಾಣ ರಾಜ್ಯವು ಕಾಳೇಶ್ವರ ಬೃಹತ್ ನೀರಾವರಿ ಯೋಜನೆಯನ್ನು ಕೇವಲ ೩ವರ್ಷದಲ್ಲಿ ಮುಕ್ತಾಯಗೊಳಿಸಿದೆ. ಆದ್ದರಿಂದ ಸರ್ಕಾರ ಯಾವುದೇ ನೆಪ ಹೇಳದೇ ೫೧೯.೬೦ಮೀ. ಎತ್ತರವಿರುವ ಜಲಾಶಯವನ್ನು ೫೨೪.೨೫೬ಮೀ.ಗೆ ಎತ್ತರಿಸಿ ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಇದಕ್ಕೂ ಮುಂಚೆ ವಿಠ್ಠಲ ಬಿರಾದಾರ ಹಾಗೂ ಮಂಜುನಾಥ ಮಾತನಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಅಭಿಯಂತರ ಎಚ್.ಸುರೇಶ ಅವರು ಸರ್ಕಾರ ರೈತರ ಪರವಾಗಿದೆ. ಕುಡಿಯುವ ನೀರಿಗಾಗಿ ಬೇಡಿಕೆ ಇರುವ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿದೆ. ತಮ್ಮ ಬೇಡಿಕೆಯಂತೆ ಜಲಾಶಯದ ಎತ್ತರದ ಬಗ್ಗೆಯಿರುವ ಮನವಿಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು. ಅಣೆಕಟ್ಟು ವೃತ್ತ ಅಧೀಕ್ಷಕ ಅಭಿಯಂತರ ಡಿ.ಬಸವರಾಜ ಹಾಗೂ ರೈತರಾದ ಹೊನಕೇರಪ್ಪ ತೆಲಗಿ, ಸೋಮನಗೌಡ ಪಾಟೀಲ, ಸಿದ್ದಪ್ಪ ಕಲಬೀಳಗಿ, ಶ್ರೀಶೈಲ ಸಾಸನೂರ, ವಿರೂಪಾಕ್ಷಿ ಮುತ್ತತ್ತಿ, ಈರಪ್ಪ ಬಂಡಿವಡ್ಡರ, ಸಂತೋಷ ರಾಠೋಡ, ಭೀರಪ್ಪ ಘೋಡೇಕರ, ಶರಣಗೌಡ ಪಾಟೀಲ, ಲಾಲಸಾಬ ಹಳ್ಳೂರ, ಪರಸಪ್ಪ ಮಾದರ ಮೊದಲಾದವರಿದ್ದರು.
ಇದಕ್ಕೂ ಮೊದಲು ಇಲ್ಲಿನ ಶ್ರೀರಾಮಲಿಂಗೇಶ್ವರ ದೇವಸ್ಥಾನದಿಂದ ಮುಖ್ಯ ಅಭಿಯಂತರರ ಕಚೇರಿಯವರೆಗೆ ತಮಟೆ ಬಾರಿಸುತ್ತಾ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಲಾಯಿತು.
ಆಲಮಟ್ಟಿ ಡ್ಯಾಂ ಅಂತರಜಲಾಶಯದ ನೀರು ಮರುಹಂಚಿಕೆಗೆ ಒತ್ತಾಯ
Share