ನವದೆಹಲಿ,ಮೇ,09- ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನ ಭಾರತದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು,ಭಾರತದ ಗಡಿ ಪ್ರವೇಶ ಮಾಡಲೆತ್ನಿಸಿದ ಪಾಕಿಸ್ತಾನ ಏಳು ಉಗ್ರರನ್ನು ಬಿಎಸ್ಎಫ್ ಯೋದರು ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದ್ದು, ಅಂತರರಾಷ್ಟ್ರೀಯ ಗಡಿಯಲ್ಲಿ ಭಯೋತ್ಪಾದಕರ ಬಹುದೊಡ್ಡ ಒಳನುಸುಳುವಿಕೆ ಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿದೆ.
ಮೂಲಗಳ ಪ್ರಕಾರ ಮೇ 8ರ ರಾತ್ರಿ 11 ಗಂಟೆ ಸುಮಾರಿಗೆ ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿದೆ ಎಂದು ಗಡಿ ಭದ್ರತಾ ಪಡೆ ಮಾಹಿತಿ ನೀಡಿದೆ.
ಈ ಕಾರ್ಯಾಚರಣೆಯಲ್ಲಿ ಕನಿಷ್ಠ 7 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಈ ಉಗ್ರರಿಗೆ ಪಾಕಿಸ್ತಾನ ಸೇನೆಯ ರೇಂಜರ್ಸ್ ಗಡಿ ನುಸುಳಲು ನೆರವು ನೀಡಿದ್ದರು ಎನ್ನಲಾಗಿದೆ. ವಿಚಾರ ತಿಳಿದ ಕೂಡಲೇ ಬಿಎಸ್ಎಫ್ ಯೋಧರು ಕಾರ್ಯಾಚರಣೆಗಿಳಿದಿದ್ದು, ಉಗ್ರರು ಮತ್ತು ಪಾಕ್ ರೇಂಜರ್ಸ್ ರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ.
ಈ ವೇಳೆ ಪಾಕ್ ರೇಂಜರ್ಸ್ ಕೂಡ ಪ್ರತಿದಾಳಿ ನಡೆಸಿದ್ದಾರೆ. ಆದರೆ ಸೈನಿಕರ ಗುಂಡೇಟಿಗೆ ಉಗ್ರರು ಸಾವನ್ನಪ್ಪಿದ್ದು, ಅವರಿಗೆ ನೆರವು ನೀಡಿದ ಪಾಕ್ ರೇಂಜರ್ಸ್ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ